ಬಕ್ರೀದ್: ಪ್ರೀತಿ, ಭ್ರಾತೃತ್ವದ ಸಂಕೇತ
- Mueenussannah Online
- 13 hours ago
- 5 min read

ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆಯ ಸುಂದರ ಸಂದೇಶದೊಂದಿಗೆ ಪ್ರತೀ ಬಕ್ರೀದ್ (ಈದ್-ಉಲ್-ಅಝ್ಹಾ) ನಮ್ಮೆಡೆಗೆ ಬರುತ್ತದೆ. ದ್ಸುಲ್-ಹಿಜ್ಜಾ ತಿಂಗಳು ಒಟ್ಟಾರೆಯಾಗಿ ಮತ್ತು ಅದರ ಮೊದಲ ಹತ್ತು ದಿನಗಳು ವಿಶೇಷವಾಗಿ ಪುಣ್ಯಗಳಿಂದ ತುಂಬಿರುವುದರಿಂದ, ಈ ದಿನಗಳನ್ನು ಆರಾಧನೆಗಳನ್ನು ಸಕ್ರಿಯಗೊಳಿಸಿ ಬರಮಾಡಿಕೊಳ್ಳಬೇಕು. ರಮಳಾನ್ ತಿಂಗಳ ಕೊನೆಯ ಹತ್ತು ದಿನಗಳಿಗಿಂತಲೂ ಈ ದಿನಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ದಿನಗಳ ಮೊದಲ ಎಂಟು ದಿನಗಳಲ್ಲಿ ವ್ರತಾಚರಿಸುವುದು ಪ್ರಸ್ತುತ ಹಜ್ ನಿರ್ವಹಿಸುತ್ತಿರುವವರಿಗೂ, ಇತರರಿಗೂ ಸುನ್ನತ್ ಆಗಿದೆ. ಹಜ್‌ನಲ್ಲಿ ಇಲ್ಲದವರಿಗೆ ಅರಫಾ ದಿನದಂದು ಉಪವಾಸ ಆಚರಿಸುವುದು ಸುನ್ನತಾಗಿದೆ. ಅರಫಾ ಉಪವಾಸವು ಕಳೆದ ಹೋದ ಮತ್ತು ಮುಂಬರುವ ವರ್ಷದ ಪಾಪಗಳನ್ನು ತಿನ್ನಿಸಲು ಕಾರಣವಾಗುತ್ತದೆ ಎಂದು ಹದೀಸಿನಲ್ಲಿದೆ.
ತಕ್ಬೀರ್ ಧ್ವನಿಗಳಿಂದ ಉದಯಿಸುವ ಈದ್ ದಿನದ ಮುಂಜಾವು ಕೇವಲ ಆಚರಣೆಗಿಂತ ಹೆಚ್ಚಾಗಿ, ದೊಡ್ಡ ಮಾನವೀಯ ಐಕ್ಯತೆಯ ದರ್ಶನವನ್ನಾಗಿದೆ ಜಗತ್ತಿನ ಮುಂದೆ ತೆರೆದಿಡುವುದು. ವರ್ಣ-ವರ್ಗ ಭೇದವಿಲ್ಲದೆ ವಿಶ್ವಾಸಿಗಳು ಹೆಗಲಿಗೆ ಹೆಗಲು ಕೊಟ್ಟು ನಿರ್ವಹಿಸುವ ಈದ್ ನಮಾಜ್ ಈ ಒಗ್ಗಟ್ಟಿನ ಅತ್ಯಂತ ಸುಂದರ ನೋಟವಾಗಿದೆ. ಬಂಧು-ಮಿತ್ರರ ಒಕ್ಕೂಟ, ಪ್ರೀತಿಪೂರ್ವಕ ಹಸ್ತದಾನ ಮತ್ತು ರೋಗಿಗಳ ಭೇಟಿ ಮುಂತಾದವು ಈ ದಿನವನ್ನು ಇನ್ನಷ್ಟು ಧನ್ಯಗೊಳಿಸುತ್ತವೆ. ಬಲಿದಾನದ (ಉಳುಹಿಯ್ಯತ್) ಮೂಲಕ ಬಡವರಿಗೂ, ನಿರ್ಗತಿಕರಿಗೂ ಮಾಂಸವನ್ನು ನೀಡಬೇಕೆಂಬ ಇಸ್ಲಾಮಿಕ್ ದೃಷ್ಟಿಕೋನವು, ದುರ್ಬಲರನ್ನೂ ಜೊತೆಗೇ ಕರೆದೊಯ್ಯಬೇಕೆಂಬ ದೊಡ್ಡ ನೈತಿಕ ಪಾಠವನ್ನು ಸಮಾಜಕ್ಕೆ ನೀಡುತ್ತದೆ. ಈದುಲ್ ಫಿತ್ರ್ ಗಿಂತಲೂ ಬಕ್ರೀದ್ ದಿನಕ್ಕೆ ಇಸ್ಲಾಮ್ ಹೆಚ್ಚಿನ ಶ್ರೇಷ್ಠತೆಯನ್ನು ನೀಡಿದೆ. ಅರಫಾ ದಿನ, ಶುಕ್ರವಾರ ದಿನ, ಬಕ್ರೀದ್ ದಿನ ಮತ್ತು ಈದ್-ಅಲ್ ಫಿತರ್ ದಿನ ಎಂಬ ಕ್ರಮಾನುಸಾರ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಸಮುದಾಯಕ್ಕೆ ದಿನಗಳ ಶ್ರೇಷ್ಠತೆಯನ್ನು ನಿಶ್ಚಯಿಸಲಾಗಿದೆ.
ಈದ್ ದಿನದ ಧನ್ಯ ರಾತ್ರಿ
ಎರಡೂ ಈದ್ ರಾತ್ರಿಗಳನ್ನು ಆರಾಧನೆಗಳ ಮೂಲಕ ಸಕ್ರಿಯವಾಗಿರಿಸುವುದು ವಿಶೇಷ ಪ್ರವಾದಿಚರ್ಯೆ. ರಾತ್ರಿಯ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ನಮಾಝ್ ಮತ್ತು ಇತರ ಆರಾಧನೆಗಳಲ್ಲಿ ವ್ಯಯಿಸಬೇಕು. ಇಶಾ ನಮಾಝನ್ನು ಜಮಾಅತಾಗಿ ನಿರ್ವಹಿಸಿ, ಸುಬುಹಿ ನಮಾಝನ್ನು ಜಮಾಅತಾಗಿ ನಿರ್ವಹಿಸುತ್ತೇನೆಂದು ದೃಢಪಡಿಸಿಕೊಂಡರೂ ಕೂಡಾ ರಾತ್ರಿಯನ್ನು ಜೀವಂತಗೊಳಿಸಿದ ಪುಣ್ಯ ಲಭಿಸುತ್ತದೆ. ಪ್ರಾರ್ಥನೆಗೆ ಶೀಘ್ರ ಉತ್ತರ ಸಿಗುವ ಐದು ವಿಶೇಷ ರಾತ್ರಿಗಳಲ್ಲಿ ಎರಡು ಈದ್ ರಾತ್ರಿಗಳೂ ಸೇರಿವೆ. ಈ ರಾತ್ರಿಗಳಲ್ಲಿ ಆರಾಧನೆಗಳಲ್ಲಿ ತೊಡಗಿಕೊಳ್ಳುವವರ ಹೃದಯಗಳು ಎಂದಿಗೂ ಸಾಯುವುದಿಲ್ಲ ಎಂದು ಹದೀಸಿನಲ್ಲಿದೆ.
ಈದ್: ಶುಭಾಶಯಗಳ ಹಬ್ಬ
ಈದ್ ದಿನದಲ್ಲಿ ಶುಭಾಶಯಗಳನ್ನು ಕೋರುವುದು ಸುನ್ನತಾಗಿದೆ. ಅಲಿಯ್ಯುಶ್ಶಬ್ರಾಮುಲ್ಲಸಿ (ರ) ಹೇಳುತ್ತಾರೆ: "ಅಲ್ಲಾಹನು ನಮ್ಮಿಂದ ಮತ್ತು ನಿಮ್ಮಿಂದ ಸ್ವೀಕರಿಸಲಿ" (تَقَبَّلَ اللَّهُ مِنَّا وَمِنْكُمْ) ಎಂಬ ಪ್ರಾರ್ಥನೆ ಮತ್ತು ಜನರ ನಡುವೆ ವಾಡಿಕೆಯಲ್ಲಿರುವ ಶುಭಾಶಯಗಳು (ಉದಾಹರಣೆಗೆ: ಈದ್ ಮುಬಾರಕ್) ಇದರಲ್ಲಿ ಸೇರಿವೆ". 'ಈದ್ ದಿನ' ಎಂಬ ಪ್ರಯೋಗದಿಂದ ಅಯ್ಯಾಮುತ್ತಶ್ರೀಖ್ ದಿನಗಳಲ್ಲಿ (ಬಕ್ರೀದ್ ನಂತರದ ಮೂರು ದಿನಗಳು) ಮತ್ತು ಈದುಲ್ ಫಿತರ್ ನಂತರದ ದಿನಗಳಲ್ಲಿ ಇಂತಹ ಶುಭಾಶಯಗಳನ್ನು ಕೋರುವುದು ಸುನ್ನತ್ ಅಲ್ಲ ಎಂದು ಅರ್ಥೈಸಬಹುದು. ಆದಾಗ್ಯೂ, ಈ ದಿನಗಳಲ್ಲೂ ಜನರ ನಡುವೆ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಅಭ್ಯಾಸವಿದೆ. ಅದಕ್ಕೆ ಯಾವುದೇ ಅಡ್ಡಿಯಿಲ್ಲ. ಏಕೆಂದರೆ, ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳುವುದು ಮತ್ತು ಸಂತೋಷವನ್ನು ವ್ಯಕ್ತಪಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
'ಈದ್ ದಿನ' ಎಂಬ ಪ್ರಯೋಗದಿಂದ ಶುಭಾಶಯಗಳನ್ನು ಕೋರುವ ಸಮಯವು ಈದ್ ದಿನದ ಸುಬಹಿ ನಮಾಝಿನ ನಂತರ ಪ್ರಾರಂಭವಾಗುತ್ತದೆಯೇ ಹೊರತು ಈದಿನ ರಾತ್ರಿಯಿಂದಲ್ಲ ಎಂಬುದು ಮನದಟ್ಟಾಗುತ್ತದೆ (ಕೆಲವು ವಿವರಣಾತ್ಮಕ ಗ್ರಂಥಗಳಲ್ಲಿ ಇದಕ್ಕೆ ವಿರುದ್ಧವಾಗಿ ಉಲ್ಲೇಖಿಸಲಾಗಿದ್ದರೂ). ಆದರೆ ಈದ್ ರಾತ್ರಿಯಲ್ಲೂ ಶುಭಾಶಯ ಕೋರಲು ಯಾವುದೇ ತಡೆಯಿಲ್ಲ ಎಂದು ಹೇಳುವುದಾಗಿದೆ ಸೂಕ್ತ. ಪ್ರೀತಿಯನ್ನು ವ್ಯಕ್ತಪಡಿಸುವ ಉದ್ದೇಶ ಅಲ್ಲಿಯೂ ಇರುವುದರಿಂದ ಜನರ ನಡುವೆ ಅಂತಹ ವಾಡಿಕೆಯಿದ್ದರೆ ಅದನ್ನು ಮಾಡಬಹುದಾಗಿದೆ. ಈದ್ ದಿನದ ರಾತ್ರಿ ತಕ್ಬೀರ್ ಪಠಿಸುವುದು ಸುನ್ನತಾಗಿರುವುದು ಈ ಅಭಿಪ್ರಾಯವನ್ನು ಬಲಪಡಿಸುತ್ತದೆ. ಅರಫಾ ದಿನದ ಸುಬಹಿಯಿಂದಲೇ ಬಲಿ ಪೆರನಾಳ್ ಶುಭಾಶಯಗಳ ಸಮಯ ಪ್ರಾರಂಭವಾಗುತ್ತದೆ ಎಂದು 'ಬುಶ್ರಲ್ ಕರೀಮ್' ಗ್ರಂಥದಲ್ಲಿದೆ. ಶುಭಾಶಯಗಳಿಗೆ ಮರುದಿನ ಮುಖಾಮುಖಿ ಉತ್ತರಿಸುವಾಗ:
تقبل اللهُ مِنْكُمْ أَحْيَاكُمُ اللَّهُ لِأَمْثَالِهِ كُلِّ عَامٍ وَأَنْتُمْ بِخَيْرٍ
(ಅಲ್ಲಾಹನು ನಿಮ್ಮಿಂದ ಸ್ವೀಕರಿಸಲಿ. ಮುಂದಿನ ವರ್ಷಗಳಲ್ಲೂ ಇಂತಹ ದಿನಗಳನ್ನು ಕಾಣಲು ಅಲ್ಲಾಹನು ನಿಮಗೆ ಆಯುಷ್ಯ ನೀಡಲಿ, ಪ್ರತಿ ವರ್ಷವೂ ನೀವು ಕ್ಷೇಮದಿಂದಿರಿ) ಎಂಬ ವಾಕ್ಯ ಅಥವಾ ಇದಕ್ಕೆ ಸಮಾನವಾದ ವಾಕ್ಯಗಳ ಮೂಲಕ ಮರು-ಶುಭಾಶಯ ಕೋರುವುದೂ ಸುನ್ನತಾಗಿದೆ.
ಈದ್ ತಕ್ಬೀರ್
ದುಲ್ಹಿಜ್ಜಾ ತಿಂಗಳ ಮೊದಲ ಹತ್ತು ದಿನಗಳಲ್ಲಿ ಆಡು, ದನ, ಒಂಟೆಗಳನ್ನು ಕಂಡವರಿಗೂ ಅಥವಾ ಅವುಗಳ ಧ್ವನಿಯನ್ನು ಕೇಳಿದವರಿಗೂ ತಕ್ಬೀರ್ ಪಠಿಸುವುದು ಸುನ್ನತಾಗಿದೆ. ಆದರೆ ಅಯ್ಯಾಮುತ್ತಶ್ರೀಖ್ ಸಮಯದಲ್ಲಿ ಇವುಗಳನ್ನು ಕಂಡರೆ ಈ ವಿಶೇಷ ತಕ್ಬೀರ್ ಸುನ್ನತ್ ಇರುವುದಿಲ್ಲ. ಈ ವರ್ಗಗಳಿಗೆ ಸೇರಿದ ಯಾವುದೇ ವಯಸ್ಸಿನ ಪ್ರಾಣಿಗಳನ್ನು ಕಂಡಾಗಲೂ ತಕ್ಬೀರ್ ಪಠಿಸುವುದು ಸುನ್ನತಾಗಿದೆ. ಪ್ರಾಣಿ ಇರುವ ವಿಷಯ ತಿಳಿದವನೂ ಅದನ್ನು ಕಂಡವನಿಗೆ ಸಮನಾಗಿದ್ದಾನೆ. 'ಅಲ್ಲಾಹು ಅಕ್ಬರ್' ಎಂದು ಪಠಿಸಬೇಕು. ಇಮಾಮ್ ಅಜ್ರಖಿ (ರ) ರವರ ಅಭಿಪ್ರಾಯದಂತೆ ಇದನ್ನು ಮೂರು ಬಾರಿ ಪಠಿಸಬೇಕು. ದುಲ್ಹಿಜ್ಜಾ ಹತ್ತರ ಮೊದಲ ದಿನಗಳಲ್ಲಿ ಜಾನುವಾರುಗಳನ್ನು ಕಾಣುವಾಗ ತಕ್ಬೀರ್ ಪಠಿಸಲು ನಿರ್ದೇಶಿಸಿದರ ಹಿಂದಿನ ತತ್ವವೇನೆಂದರೆ, ಆ ದಿನಗಳಲ್ಲಿ ಬಲಿ ನೀಡುವ ಆಸಕ್ತಿಯನ್ನು ಮನಸ್ಸಿನಲ್ಲಿ ಮೂಡಿಸುವುದು ಮತ್ತು ಬಲಿ ಪೆರ್ನಾಳ್ ಸಮಯ ಬಂದಾಗ ಉಳುಹಿಯ್ಯತ್ (ಬಲಿ ಕರ್ಮ) ನಿರ್ವಹಿಸಲು ಪ್ರೇರೇಪಿಸುವಂತೆ ಅದರಲ್ಲಿ ತೊಡಗಿಕೊಳ್ಳುವುದಾಗಿದೆ.
ಬಲಿ ಪೆರ್ನಾಳ್‌ಗೆ ಸಂಬಂಧಿಸಿ ಎರಡು ರೀತಿಯ ತಕ್ಬೀರ್‌ಗಳಿವೆ:
ಮುತ್ಲಖ್ ತಕ್ಬೀರ್ (ಸಮಯ ಅಥವಾ ನಮಾಜಿನ ನಿಬಂಧನೆ ಇಲ್ಲದ ತಕ್ಬೀರ್): ಪೆರ್ನಾಳ್ ರಾತ್ರಿಯ ಸೂರ್ಯಾಸ್ತ ಸಮಯದಿಂದ ಹಿಡಿದು ಇಮಾಮ್ ಪೆರ್ನಾಳ್ ನಮಾಝಿನ ತಕ್ಬೀರತುಲ್ ಇಹ್ರಾಮ್ ನಿರ್ವಹಿಸುವವರೆಗೆ (ಒಂಟಿಯಾಗಿ ನಮಾಜ್ ಮಾಡುವವನಿಗೆ ಅವನ ತಕ್ಬೀರತುಲ್ ಇಹ್ರಾಮ್ ವರೆಗೆ) ಇದರ ಸಮಯವಾಗಿದೆ. ಈ ಸಮಯದಲ್ಲಿ ಎಲ್ಲಾ ಸ್ಥಳಗಳಲ್ಲೂ ಸದಾ ಧ್ವನಿ ಎತ್ತಿ ತಕ್ಬೀರ್ ಪಠಿಸುವುದು ಸುನ್ನತಾಗಿದೆ. ಹಜ್ ಅಥವಾ ಉಮ್ರಾದ ಇಹ್ರಾಮಿನಲ್ಲಿರುವವರು ತಹಲ್ಲುಲ್ ಪ್ರವೇಶಿಸುವವರೆಗೆ 'ತಲ್ಬಿಯಾ' ಪಠಿಸುವುದು ಸುನ್ನತ್ ಆಗಿದೆ.
ಮುಖಯ್ಯದ್ ತಕ್ಬೀರ್ (ನಮಾಜಿನ ನಂತರ ಪಠಿಸುವ ತಕ್ಬೀರ್): ನಮಾಜುಗಳ ನಂತರ ಎಂಬ ನಿಬಂಧನೆಯೊಂದಿಗೆ ಪಠಿಸುವ ತಕ್ಬೀರಾಗಿದೆ ಇದು. ಅರಫಾ ದಿನದ (ದ್ಸುಲ್ ಹಿಜ್ಜಾ ಒಂಬತ್ತು) ಸುಬಹಿ ನಮಾಜಿನಿಂದ ಅಯ್ಯಾಮುತ್ತಶ್ರೀಖಿನ ಕೊನೆಯ ಅಸರ್ ನಮಾಜಿನ ( ದ್ಸುಲ್ ಹಿಜ್ಜಾ ಹದಿಮೂರು) ನಂತರದವರೆಗೆ ಈ ತಕ್ಬೀರ್ ಸುನ್ನತಾಗಿದೆ. ಆದರೆ ಮಗ್ರಿಬಿನವರೆಗೆ ಸಮಯವಿದೆ ಎಂಬುದು ಇಮಾಮ್ ರಮ್ಲಿ (ರ)ರವರ ವೀಕ್ಷಣೆಯಾಗಿದೆ. ಹಜ್‌ನ ಇಹ್ರಾಮ್‌ನಲ್ಲಿರುವವರಿಗೆ ಪೆರನಾಳ್ ದಿನದ ಳುಹ್ರ್ ನಮಾಝಿನಿಂದ ಮುಖಯ್ಯದ್ ತಕ್ಬೀರಿನ ಸಮಯ ಆರಂಭವಾಗುತ್ತದೆ.
ಈ ಸಮಯದಲ್ಲಿ ನಿರ್ವಹಿಸುವ ಫರ್ಳ್, ಸುನ್ನತ್ ನಮಾಜ್, ಖಳಾಆದ ನಮಾಜ್, ಮಯ್ಯಿತ್ ನಮಾಜ್ ಮತ್ತು ಪೆರ್ನಾಳ್ ನಮಾಜಝ್ ಗಳ ನಂತರವೂ ತಕ್ಬೀರ್ ಸುನ್ನತಿದೆ. ತಿಲಾವತ್ ಮತ್ತು ಶುಕ್ರಿನ ಸುಜೂದ್‌ಗಳ ನಂತರ ತಕ್ಬೀರ್ ಸುನ್ನತಿಲ್ಲ. ಮುಖಯ್ಯದ್ ತಕ್ಬೀರನ್ನು ನಮಾಝಿನ ಸಲಾಮ್ ನಿರ್ವಹಿಸಿದ ತಕ್ಷಣ ಮತ್ತು ನಿಯಮಿತವಾಗಿ ಓದುವ ದ್ಸಿಕ್ರ್‌ಗಳಿಗಿಂತ ಮುಂಚಿತವಾಗಿ ಪಠಿಸಬೇಕು. ತಡ ಮಾಡುವುದರಿಂದ ಅಥವಾ ಸಮಯ ದೀರ್ಘವಾಗುವುದರಿಂದ ಮುಖಯ್ಯದ್ ತಕ್ಬೀರಿನ ಸುನ್ನತ್ ನಷ್ಟವಾಗುವುದಿಲ್ಲ. ದ್ಸುಲ್ ಹಿಜ್ಜಾ 13ರ ಕೊನೆಯ ಸಮಯದವರೆಗೆ ಬಿಟ್ಟುಹೋದ ತಕ್ಬೀರ್‌ಗಳನ್ನು ಪುನಃ ನಿರ್ವಹಿಸಬಹುದಾಗಿದೆ. ಬಲಿ ಪೆರ್ನಾಳ್ ರಾತ್ರಿಯಲ್ಲಿ, ಈದ್ ನಮಾಜಿಗೆ ಮುಂಚೆ ಬರುವ ನಮಾಜುಗಳಲ್ಲೂ (ಮಗ್ರಿಬ್, ಇಶಾ, ಸುಬಹಿ) ದ್ಸಿಕ್ರ್‌ಗಳಿಗಿಂತ ಮುಂಚಿತವಾಗಿ ತಕ್ಬೀರ್ ಪಠಿಸಬೇಕು.
ಪೆರ್ನಾಳ್ ಪ್ರವಾದಿಚರ್ಯೆಯೊಂದಿಗೆ
ಪೆರ್ನಾಳ್ ದಿನಗಳಿಗೆ ಸಂಬಂಧಿಸಿದಂತೆ ಕೆಲವು ಸುನ್ನತ್‌ಗಳನ್ನು ನಿರ್ವಹಿಸುವುದು ವಿಶೇಷ ಪುಣ್ಯಕರವಾಗಿದೆ.
ಸ್ನಾನ: ಬಲಿ ಪೆರ್ನಾಳಿನ ಸುನ್ನತಾದ ಸ್ನಾನವನ್ನು ನಿರ್ವಹಿಸುತ್ತೇನೆ ಎಂದು ನಿಯ್ಯತ್ ಮಾಡಿ, ಸ್ನಾನ ಮಾಡುವುದು ಮಹಿಳೆಯರು ಸೇರಿದಂತೆ (ಋತುಸ್ರಾವ ಅಥವಾ ಹೆರಿಗೆಯ ರಕ್ತಸ್ರಾವವಿರುವವರಾಗಿದ್ದರೂ) ಎಲ್ಲರಿಗೂ ಸುನ್ನತಾಗಿದೆ. ಪೆರ್ನಾಳ್ ದಿನದ ಅರ್ಧರಾತ್ರಿಯಿಂದ ಹಿಡಿದು ಸೂರ್ಯಾಸ್ತ ಸಮಯದವರೆಗೆ ಸ್ನಾನದ ಸಮಯವಾಗಿದೆ. ಸುಬುಹಿ ನಮಾಝಿನ ನಂತರ ಸ್ನಾನ ಮಾಡುವುದು ಅತ್ಯುತ್ತಮ. ಇದನ್ನು ತಪ್ಪಿಸಿಕೊಂಡವರು ನಂತರ ಖಳಾ ಮಾಡುವುದೂ ಸುನ್ನತ್ ಇದೆ. ನೀರನ್ನು ಬಳಸಲು ಸಾಧ್ಯವಾಗದ ಪರಿಸ್ಥಿತಿಯಿದ್ದಾಗ 'ಪೆರ್ನಾಳ್ ಸ್ನಾನಕ್ಕೆ ಬದಲಾಗಿ ತಯಮ್ಮುಮ್ ಮಾಡಲು ಸಂಕಲ್ಪಿಸಿದ್ದೇನೆ' ಎಂದು ನಿಯ್ಯತ್ ಮಾಡಿ ತಯಮ್ಮುಮ್ ಮಾಡುವುದು ಸುನ್ನತ್ ಆಗಿದೆ.
ಛಛ್ಘ
ಸುಗಂಧ ದ್ರವ್ಯದ ಬಳಕೆ: ಪೆರ್ನಾಳ್ ದಿನದಂದು ಪುರುಷರಿಗೂ ಮತ್ತು ಮನೆಯಲ್ಲೇ ಉಳಿಯುವ ಮಹಿಳೆಯರಿಗೂ ಸುಗಂಧ ದ್ರವ್ಯ (ಅತ್ತರ್) ಬಳಸುವುದು ವಿಶೇಷ ಸುನ್ನತ್ ಇರುವ ಕಾರ್ಯವಾಗಿದೆ. ಪೆರ್ನಾಳ್ ದಿನದ ಅರ್ಧರಾತ್ರಿಯಿಂದ ಸೂರ್ಯಾಸ್ತ ಸಮಯದವರೆಗೆ ಇದರ ಸಮಯವಿರುತ್ತದೆ. ಸುಗಂಧವನ್ನು ಆಸ್ವಾದಿಸುವಾಗ ಇಸ್ತಿಗ್ಫಾರ್ (ಕ್ಷಮಾಪಣೆ) ನಿರ್ವಹಿಸುವುದು ಸುನ್ನತ್ ಆಗಿದೆಯೇ ಹೊರತು ಸ್ವಲಾತ್ ಪಠಿಸುವುದು ಸುನ್ನತ್ ಇಲ್ಲ. ಹಜ್, ಉಮ್ರಾದ ಇಹ್ರಾಮ್‌ನಲ್ಲಿರುವವರು ಮತ್ತು ಪತಿ ಮರಣ ಹೊಂದಿ ಇದ್ದಾ ಆಚರಿಸುತ್ತಿರುವ ಮಹಿಳೆಯರು ಸುಗಂಧ ದ್ರವ್ಯ ಬಳಸುವುದು ನಿಷಿದ್ಧವಾಗಿದೆ.
ಶುಚಿತ್ವ ಮತ್ತು ಅಲಂಕಾರ: ಉಗುರು ಕತ್ತರಿಸುವುದು, ಕಂಕುಳ ಹಾಗೂ ಗುಹ್ಯಭಾಗದ ರೋಮಗಳನ್ನು ತೆಗೆಯುವುದು ಮತ್ತು ದುರ್ವಾಸನೆಯನ್ನು ದೂರಗೊಳಿಸುವುದರ ಮೂಲಕ ದೇಹವನ್ನು ಅಂದಗೊಳಿಸುವುದು ಪೆರ್ನಾಳ್ ದಿನದಂದು ವಿಶೇಷ ಸುನ್ನತ್ ಆಗಿದೆ.
ಉಡುಪು: ಬೆಲೆಬಾಳುವ, ಸುಂದರವಾದ ಮತ್ತು ಬಿಳಿ ಬಣ್ಣದ ಹೊಸ ಬಟ್ಟೆಗಳನ್ನು ಧರಿಸುವುದು ಅತ್ಯಂತ ಉತ್ತಮವಾಗಿದೆ. ಒಬ್ಬನ ಬಳಿ ಬೆಲೆಬಾಳುವ ಬಿಳಿಯಲ್ಲದ ಬಟ್ಟೆ ಮತ್ತು ಬೆಲೆ ಕಡಿಮೆ ಇರುವ ಬಿಳಿ ಬಟ್ಟೆಯಿದ್ದರೆ, ಅವನು ಬಿಳಿಯಲ್ಲದಿದ್ದರೂ ಬೆಲೆಬಾಳುವ ಸುಂದರವಾದ ಬಟ್ಟೆಯನ್ನು ಧರಿಸುವುದೇ ಪೆರ್ನಾಳ್ ದಿನಕ್ಕೆ ಉತ್ತಮ. ಕಪ್ಪು ಬಣ್ಣದ ಬಟ್ಟೆ ಮತ್ತು ಕಪ್ಪು ಪಾದರಕ್ಷೆಗಳನ್ನು ಧರಿಸುವುದು ಸೂಕ್ತವಲ್ಲ. ಮಹಿಳೆಯರು ಬಿಗಿಯಾದ ಬಟ್ಟೆಗಳನ್ನು ಧರಿಸುವುದು ಕರಾಹತ್ ಮತ್ತು ಪುರುಷರಿಗೆ ಇದು ಶ್ರೇಷ್ಠತೆಗೆ ವಿರುದ್ಧವಾಗಿದೆ.
ಪೆರ್ನಾಳ್ ನಮಾಝ್
ಪೆರ್ನಾಳ್ ದಿನದ ಅತ್ಯಂತ ಪ್ರಮುಖವಾದ ಕರ್ಮ ಪೆರನಾಳ್ ನಮಾಝ್ ಆಗಿದೆ. ಹಿಂದಿನ ಸಮುದಾಯಗಳಿಗಿಂತ ಭಿನ್ನವಾಗಿ ಪೈಗಂಬರ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಸಮುದಾಯಕ್ಕೆ ಮಾತ್ರ ಲಭಿಸಿದ ಸಾಟಿಯಿಲ್ಲದ ಅನುಗ್ರಹವಾಗಿದೆ ಈ ಪೆರ್ನಾಳ್ ನಮಾಜ್. ಸುನ್ನತ್ ನಮಾಝುಗಳಲ್ಲೇ ಅತ್ಯಂತ ಉನ್ನತವಾದ ಪೆರ್ನಾಳ್ ನಮಾಝ್ ಗಳಲ್ಲಿ ಬಲಿ ಪೆರ್ನಾಳ್ ನಮಾಝಿಗೆ ಮೊದಲ ಸ್ಥಾನವಿದೆ. ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮೊದಲ ಬಾರಿಗೆ ಪೆರ್ನಾಳ್ ನಮಾಜ್ ನಿರ್ವಹಿಸಿದ್ದು ಹಿಜರಿ ಎರಡನೇ ವರ್ಷದ ಸಣ್ಣ ಪೆರ್ನಾಳ್ ದಿನದಂದಾಗಿದೆ. ನಮಾಝಿಗೆ ಮುಂಚಿತವಾಗಿ ಮತ್ತು ಪ್ರಯಾಣದ ಸಮಯದಲ್ಲಿ ಪಾಲಿಸಬೇಕಾದ ಕೆಲವು ಸುನ್ನತುಗಳಿವೆ. ಇದರಲ್ಲಿ ಸಣ್ಣ ಪೆರ್ನಾಳ್ ಮತ್ತು ಬಲಿ ಪೆರನಾಳ್ ನಡುವೆ ಕೆಲವು ವ್ಯತ್ಯಾಸಗಳಿವೆ. ಸಣ್ಣ ಪೆರನಾಳ್ ದಿನದಂದು ನಮಾಜಿಗೆ ಹೋಗುವ ಮುನ್ನ ಏನನ್ನಾದರೂ ತಿನ್ನುವುದು/ಕುಡಿಯುವುದಾಗಿದೆ ಸುನ್ನತ್. ಅದು ಖರ್ಜೂರವಾಗಿರುವುದು ಮತ್ತು ಅದನ್ನು ಬೆಸ ಸಂಖ್ಯೆಯಲ್ಲಿ ತಿನ್ನುವುದು ಪ್ರತ್ಯೇಕ ಸುನ್ನತಾಗಿದೆ. ಒಣದ್ರಾಕ್ಷಿಯನ್ನೂ ಖರ್ಜೂರದ ಸ್ಥಾನದಲ್ಲೇ ಪರಿಗಣಿಸಲಾಗಿದೆ. ಆದರೆ ಬಲಿ ಪೆರ್ನಾಳ್ ನಮಾಝಿಗೆ ಹೋಗುವ ಮುನ್ನ ಏನನ್ನೂ ತಿನ್ನದಿರುವುದು ಸುನ್ನತ್ ಮತ್ತು ತಿನ್ನುವುದು ಕರಾಹತ್ ಆಗಿದೆ. ಅದೇ ರೀತಿ, ನಮಾಝ್ ಮಾಡುವ ಸ್ಥಳಕ್ಕೆ ಧೀರ್ಘವಾದ ಹಾದಿಯ ಮೂಲಕ ನಡೆದು ಹೋಗುವುದು ಮತ್ತು ಕಡಿಮೆ ದೂರದ ಮತ್ತೊಂದು ಹಾದಿಯ ಮೂಲಕ ಹಿಂತಿರುಗುವುದು ಸುನ್ನತ್ ಆಗಿದೆ. ನಡಿಗೆಯಿಂದಾಗಿ ಆಯಾಸಗೊಂಡು ನಮಾಝಿನಲ್ಲಿ ಏಕಾಗ್ರತೆ ನಷ್ಟವಾಗುವುದಾದರೆ ವಾಹನದಲ್ಲಿ ಹೋಗಬಹುದು.
ಜಮಾಅತಾಗಿ ಪೆರ್ನಾಳ್ ನಮಾಜ್ ನಿರ್ವಹಿಸುವಾಗ 'ಅಸ್ಸ್ವಲಾತು ಜಾಮಿಆಹ್' (الصلاة جامع) ಎಂದು ಕರೆ ನೀಡುವುದು ಸುನ್ನತ್ ಆಗಿದೆ. ಪೆರ್ನಾಳ್‌ನಂತೆ ಜಮಾಅತ್ ಸುನ್ನತ್ ಆಗಿರುವ ತರಾವೀಹ್, ಗ್ರಹಣ ನಮಾಝ್ ಮತ್ತು ಮಳೆಗಾಗಿ ಪ್ರಾರ್ಥಿಸುವ ನಮಾಜಝ್ ಗಳಲ್ಲೂ ಇದೇ ರೀತಿ ಕರೆ ನೀಡುವುದಾಗಿದೆ ಸುನ್ನತ್. ಇದನ್ನು ಕೇಳುವವರು 'ಲಾ ಹವ್ಲ ವಲಾ ಖುವ್ವತ ಇಲ್ಲಾ ಬಿಲ್ಲಾಹಿಲ್ ಅಲಿಯ್ಯಿಲ್ ಅಳೀಮ್' (لا حول ولا قوة إلا بالله العلي العظيم) ಎಂದು ಉತ್ತರಿಸುವುದು ಸುನ್ನತ್ ಆಗಿದೆ.
ಪೆರ್ನಾಳ್ ನಮಾಜ್ ಅತ್ಯಂತ ಬಲವಾದ ಸುನ್ನತ್ ಆಗಿದೆ ಮತ್ತು ಅದನ್ನು ಉಪೇಕ್ಷಿಸುವುದು ಕರಾಹತ್ ಆಗಿದೆ. ಇದು 'ಫರ್ಳ್ ಕಿಫಾಯಾ' ಎಂದು ಅಭಿಪ್ರಾಯಪಟ್ಟ ವಿದ್ವಾಂಸರಿದ್ದಾರೆ.
ಪೆರ್ನಾಳ್ ನಮಾಝನ್ನು ಜಮಾಅತ್ ಆಗಿ, ಒಂಟಿಯಾಗಿ, ಮಹಿಳೆಯರು ಮತ್ತು ಗುಲಾಮರು ಸೇರಿದಂತೆ ಎಲ್ಲರೂ ನಿರ್ವಹಿಸಬಹುದಾಗಿದೆ. ಸೂರ್ಯೋದಯದಿಂದ ಹಿಡಿದು ಸೂರ್ಯನು ಆಕಾಶದ ಮಧ್ಯಭಾಗದಿಂದ ಸರಿಯುವವರೆಗೆಯಾಗಿದೆ ಈ ನಮಾಝಿನ ನಿಗದಿತ ಸಮಯ. ಸೂರ್ಯೋದಯದ ನಂತರ ಸುಮಾರು 20 ನಿಮಿಷಗಳ ಕಳೆಯುತ್ತಲೇ ಈ ನಮಾಝ್ ನಿರ್ವಹಿಸುವುದು ಅತ್ಯಂತ ಶ್ರೇಷ್ಠವಾಗಿದೆ.
ಫರ್ಳ್ ನಮಾಜನ್ನು ಒಂಟಿಯಾಗಿ ನಿರ್ವಹಿಸಿದವರು ಜಮಾಅತ್ ಸಿಕ್ಕಿದಾಗ ಅದನ್ನು ಮರು-ನಿರ್ವಹಿಸುವುದು ಸುನ್ನತ್ ಆಗಿರುವಂತೆ, ಜಮಾಅತ್ ಸುನ್ನತ್ ಆಗಿರುವ ಸುನ್ನತ್ ನಮಾಝುಗಳನ್ನೂ ಜಮಾಅತಿನೊಂದಿಗೆ ಮರು-ನಿರ್ವಹಿಸುವುದು ಸುನ್ನತಾಗಿದೆ. ಪೆರ್ನಾಳ್ ನಮಾಝಿನ ನಿಯ್ಯತಿನೊಂದಿಗೆ ಕೇವಲ ಎರಡು ರಕ್ಅತ್ ನಮಾಜ್ ನಿರ್ವಹಿಸಿದರೂ ಈದ್ ನಮಾಝ್ ಸಿಂಧುವಾಗುತ್ತದೆ.
ಈದ್ ಖುತ್ಬಾ
ಎರಡೂ ಪೆರ್ನಾಳ್ ನಮಾಝ್ ಗಳ ನಂತರ ಎರಡು ಖುತ್ಬಾಗಳನ್ನು ನಿರ್ವಹಿಸುವುದು ಸುನ್ನತಾಗಿದೆ. ಇದು ಸಾಮಾನ್ಯ ಜುಮುಅ ಖುತ್ಬಾದಂತೆಯೇ ಇರುತ್ತದೆ. ಅದರ ಅರ್ಕಾನ್ ಮತ್ತು ಶರ್ತ್‌ಗಳು ಇಲ್ಲಿಯೂ ಸಮಾನವಾಗಿವೆ. ಆದರೆ ಜುಮುಅ ಖುತ್ಬಾದಂತೆ ಇಲ್ಲಿ ಶರ್ತ್‌ಗಳನ್ನು ಪಾಲಿಸುವುದು ಸುನ್ನತ್ ಆಗಿದೆಯೇ ಹೊರತು ಕಡ್ಡಾಯವಲ್ಲ. ಪೆರ್ನಾಳ್ ಖುತ್ಬಾವನ್ನು ಕನಿಷ್ಠ ಒಬ್ಬರಾದರೂ ಕೇಳಿದರೆ ಸಾಕು, ಆದರೆ ಎಲ್ಲರಿಗೂ ಕೇಳಿಸುವುದು ಸುನ್ನತಾಗಿದೆ.
ಸಣ್ಣ ಪೆರ್ನಾಳ್ ಖುತ್ಬಾದಲ್ಲಿ ಫಿತ್ರ್ ಝಕಾತ್ ಬಗ್ಗೆ ಮತ್ತು ಬಲಿ ಪೆರನಾಳ್ ಖುತ್ಬಾದಲ್ಲಿ ಉಳುಹಿಯ್ಯತ್ ಬಗ್ಗೆ ಜನರಿಗೆ ಕಲಿಸಿಕೊಡುವುದು ಸುನ್ನತಾಗಿದೆ.
ಒಂಟಿಯಾಗಿ ನಮಾಜ್ ಮಾಡುವವರಿಗೆ, ಮಹಿಳೆಯರಿಗೆ, ನಪುಂಸಕರಿಗೆ ಮತ್ತು ಗುಲಾಮರಿಗೆ ಖುತ್ಬಾ ಸುನ್ನತ್ ಇಲ್ಲ. ಮಹಿಳೆಯರ ಪ್ರತ್ಯೇಕ ಜಮಾಅತ್‌ಗೂ ಖುತ್ಬಾ ಸುನ್ನತಿಲ್ಲ. ಆದರೆ ಮಹಿಳೆಯರಿಗಾಗಿ ಪುರುಷರು ಖುತ್ಬಾ ನಿರ್ವಹಿಸಬಹುದು. ಅದೇ ಸಮಯದಲ್ಲಿ, ಮಹಿಳೆಯರಲ್ಲೊಬ್ಬರು ಎದ್ದು ನಿಂತು ಧಾರ್ಮಿಕ ಉಪದೇಶ ನೀಡುವುದರಲ್ಲಿ ಯಾವುದೇ ಅಭ್ಯಂತರವಿಲ್ಲ. ಇದರಿಂದ ಖುತ್ಬಾ ಮತ್ತು ವಅ್ ಝ್ ಎರಡು ಭಿನ್ನವಾದವುಗಳು ಎಂದು ಅರ್ಥ ಮಾಡಿಕೊಳ್ಳಬಹುದು.
ಈದ್ಗಾ ನಮಾಜ್
ಪೆರ್ನಾಳ್ ನಮಾಝನ್ನು ಮಸೀದಿಯಲ್ಲೇ ನಿರ್ವಹಿಸುವುದು ಅತ್ಯಂತ ಶ್ರೇಷ್ಠವಾದುದು ಎಂಬುದು ಶಾಫಿಈ ಮದ್ಹಬ್‌ನ ಪ್ರಬಲವಾದ ಅಭಿಪ್ರಾಯ. ಇಮಾಮ್ ನವವಿ (ರ) ತಮ್ಮ 'ಮಿನ್ಹಾಜುತ್ವಾಲಿಬೀನ್' ಗ್ರಂಥದಲ್ಲಿ 'ಖುತ್ಬಾವನ್ನು ಮಸೀದಿಯಲ್ಲಿ ನಿರ್ವಹಿಸುವುದು ಅತ್ಯಂತ ಶ್ರೇಷ್ಠ' ಎಂದು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಪೆರ್ನಾಳ್ ನಮಾಝ್ ಮೈದಾನದಲ್ಲಿ ನಡೆಯಲು ಕಾರಣ ಅಂದಿನ ಮಸೀದಿಯ ಅಸೌಕರ್ಯವಾಗಿತ್ತು ಎಂದು ಶಾಫಿಈ ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ. ಇಮಾಮ್ ಶಾಫಿಈ (ರ), ಇಬ್ನು ಹಜರ್ ಹೈತಮಿ (ರ) ಮತ್ತು ಇಮಾಮ್ ರಮ್ಲಿ (ರ) ಮುಂತಾದವರು ಈ ವಿಷಯವನ್ನು ಒತ್ತಿ ಹೇಳಿದ್ದಾರೆ.
ಜನರೆಲ್ಲರನ್ನು ಒಳಗೊಳ್ಳುವಷ್ಟು ವಿಶಾಲವಾದ ಮಸೀದಿ ಲಭ್ಯವಿರುವಾಗ, ಅದನ್ನು ಬಿಟ್ಟು ಮೈದಾನಗಳಿಗೆ ಹೋಗುವುದು ಪುಣ್ಯವನ್ನು ನಷ್ಟಗೊಳಿಸುವುದಾಗಿದೆ. ಜನರು ಒಟ್ಟುಗೂಡಲು ಇರುವ ಸೌಕರ್ಯವೇ ಸ್ಥಳ ನಿರ್ಣಯದ ನಿಜವಾದ ಮಾನದಂಡವಾಗಿದೆ. ಸುಸಜ್ಜಿತ ಮತ್ತು ಸೌಕರ್ಯವಿರುವ ಮಸೀದಿಗಳು ನಮ್ಮ ನಾಡಿನಲ್ಲಿರುವಾಗ, ನಮಾಜ್‌ಗಾಗಿ ಮೈದಾನಗಳನ್ನು ಹುಡುಕಿ ಹೋಗುವುದು ಇಸ್ಲಾಮಿಕ್ ಪ್ರಮಾಣಗಳ ಆಶಯಕ್ಕೆ ವಿರುದ್ಧವಾಗಿದೆ.
ಮೂಲ: ಮಲಯಾಳಂ
ಕನ್ನಡಕ್ಕೆ: ಶುಹೈಬ್ ಜೀರ್ಮುಕ್ಕಿ

Comments