top of page

ಗಾಂಭೀರ್ಯ ನಯನ ಮನೋಹರ ವದನ


ಪ್ರವಾದಿ ಇಬ್ರಾಹಿಂ (ಅ) ಮತ್ತು ಇಸ್ಮಾಈಲ್ (ಅ) ಅವರ ತ್ಯಾಗಮಯ ಜೀವನವನ್ನು ಇಸ್ಲಾಮಿನ ಚರಿತ್ರೆಯಲ್ಲಿ ನಿತ್ಯವೂ‌ ಜನರು ಸ್ಮರಿಸುತ್ತಾರೆ. ಪ್ರವಾದಿ ಇಸ್ಮಾಈಲರ ಜನನದ ವೇಳೆ ಇಬ್ರಾಹಿಂ (ಅ) ರಿಗೆ 86 ವರ್ಷ ಪ್ರಾಯ. ಅಲ್ಲಾಹನ ಆಜ್ಞಾನುಸಾರ ಪತ್ನಿ ಹಾಜರ ಮತ್ತು ಇಸ್ಮಾಯಿಲರನ್ನು ಮಕ್ಕಾದ ಬರಡು ಭೂಮಿಯಲ್ಲಿ ತೊರೆದು ಮರಳಿದರು. ತರುವಾಯ ನೀರಿನ ಜಾಡು ಹುಡುಕುತ್ತಾ ಬಂದ ಜುರುಹುಂ ಬುಡಕಟ್ಟು ಝಂಝಂ ನೀರಿನ ಸನಿಹ ಠಿಕಾಣಿ ಹೂಡಿ ಹೊಸ ನಾಗರಿಕತೆಗೆ ಮಕ್ಕಾ ಸಾಕ್ಷಿಯಾಯಿತು.


ಪ್ರಾಚೀನ ಪಾರಂಪರಿಕ ಅರಬಿ ಭಾಷೆಯಿಂದ ವಿಶೇಷವಾಗಿ ಸಾಹಿತ್ಯಿಕ ಸಂರಚನೆಯೊಂದಿಗೆ ಲೀಲಾ ಜಾಲವಾಗಿ ಅರಬಿ ಮಾತನಾಡಿದ ಪ್ರಥಮ ಪ್ರವಾದಿ ಇಸ್ಮಾಯಿಲರಾಗಿದ್ದರು. ಮೊದಲೆಲ್ಲ ಕುದುರೆಗಳು ವನ್ಯ ಜೀವಿಯಾಗಿ ಕಾಡಿನಲ್ಲಿ ಅಲೆದಾಡುತ್ತಿತ್ತು. ಈ ಕುದುರೆಗಳನ್ನು ಜೀವನದ ಸದ್ಭಳಕೆಗಾಗಿ ಬಳಸಿದ ಮೊದಲ ಪ್ರವಾದಿ ಕೂಡಾ ಇಸ್ಮಾಯಿಲ್ (ಅ) ಅವರೇ ಆಗಿದ್ದರು. ಇಲಾಹನು ಎಲ್ಲಾ ಪ್ರವಾದಿಗಳಿಗೆ ಪ್ರತ್ಯೇಕ (ಮುಸ್ತಜಾಬುದ್ದುಆ) ಪ್ರಾರ್ಥನೆಗೆ ಉತ್ತರ ಪ್ರಾಪ್ತಿಯಾಗುವ ಪ್ರತ್ಯೇಕ ವರವನ್ನು ನೀಡಿದ್ದಾನೆ. ಅವರೆಲ್ಲರೂ ಪ್ರಮುಖ ಕಾರ್ಯಗಳಿಗಾಗಿ ಆ ವರವನ್ನು ಬಳಸಿದ್ದಾರೆ. ಪ್ರವಾದಿ ಇಸ್ಮಾಯಿಲ್ (ಅ) ತಮ್ಮ ಪ್ರತ್ಯೇಕ ವರವನ್ನು ಕುದುರೆಗಾಗಿ ವಿನಿಯೋಗಿಸಿದರು.


ಯೌವ್ವನದ ಹುರುಪಿನಲ್ಲಿರುವ ಇಸ್ಮಾಈಲ್ (ಅ) ಅಮಾಲಿಕ ಬುಡಕಟ್ಟಿನ ಮಹಿಳೆ ಉಮಾರ ಬಿಂತ್ ಸಅದುಬ್ನು ಉಸಾಮರನ್ನು ವರಿಸಿದರು. ಬೇಟೆಯಾಡುವುದರ ಮೂಲಕವಾಗಿತ್ತು ಅವರ ಜೀವನ. ಒಮ್ಮೆ ಆಹಾರವ ಹುಡುಕುತ್ತಾ ಬೇಟೆಗೆಂದು ತೆರಳಿದರು. ಆ ವೇಳೆ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬರು ಆಗಮಿಸಿದರು. ಗಾಂಭೀರ್ಯ ನಯನ, ಮನೋಹರ ವದನ, ಗಡ್ಡಗೂದಲು‌ ಬಿಳಿಯಾದ ಅಪರಿಚಿತ ವ್ಯಕ್ತಿಯಾಗಿದ್ದರು ಅವರು. ಆ ವ್ಯಕ್ತಿ ಇಸ್ಮಾಈಲರ ಪತ್ನಿಯ ಬಳಿ ಕುಶಲಾನ್ವೇಷಣೆ ನಡೆಸಿದಾಗ ದಾಂಪತ್ಯ ಜೀವನದ ಅತೃಪ್ತಿಯ ಧ್ವನಿಯಾಗಿತ್ತು ಪತ್ನಿಯದ್ದು. ಬಂದ ವ್ಯಕ್ತಿಯನ್ನು ಉಪಚರಿಸಲಿಲ್ಲ. ಆ ವ್ಯಕ್ತಿ ಹೊರಡಲಣಿಯಾದಾಗ ಮಹಿಳೆಯೊಂದಿಗೆ ಹೀಗೆ ನುಡಿದರು "ನಿಮ್ಮ ಪತಿ ಮರಳಿದರೆ ಅವರೊಂದಿಗೆ ಈ ಮನೆಯ ಬಾಗಿಲನ್ನು ಬದಲಿಸಲು ಹೇಳಿ" ಅವರು ಹೊರಟು ಹೋದರು. ಇಸ್ಮಾಯಿಲ್ (ಅ)ಮರಳಿದಾಗ ಯಾರೋ ಬಂದ ಕುರುಹುಗಳನ್ನು ಕಂಡು ಪತ್ನಿಯೊಂದಿಗೆ ವಿಚಾರಿಸಿದಾಗ ಪತ್ನಿ ಆ ಅಪರಿಚಿತ ವ್ಯಕ್ತಿ ಹೇಳಿದ ಮಾತುಗಳನ್ನು ತಿಳಿಸಿದರು.

ಇಸ್ಮಾಯಿಲ್ (ಅ.ಸ)ರಿಗೆ ಬಂದವರು ತಂದೆಯಾದ ಇಬ್ರಾಹಿಂ (ಅ) ಎಂದು ಮನವರಿಕೆ ಆಯಿತು. ಮಾತಿನ ತಾತ್ಪರ್ಯವೇನೆಂದು ಅರಿತ ಇಸ್ಮಾಯಿಲ್ (ಅ) ರಆ ಮಹಿಳೆಗೆ ವಿಚ್ಛೇದನೆ ನೀಡಿದರು. ನಂತರ ಜುರುಹುಂ ಬುಡಕಟ್ಟಿನ ಸಯ್ಯಿದತ್ ಬಿಂತ್ ಮುಳಾಳುಬ್ನು ಅಂರ್ ರನ್ನು ವರಿಸುತ್ತಾರೆ. ಇದೇ ಪ್ರಸಂಗ ಮತ್ತೊಮ್ಮೆ ಪುನರಾವರ್ತನೆಯಾಯಿತು. ಇಬ್ರಾಹೀಂ(ಅ) ಮಗನನ್ನು ಕಾಣಲು ಬಂದಾಗ ಆ ಹೊತ್ತು ಮಗ ಮನೆಯಲ್ಲಿರಲಿಲ್ಲ. ಈ ಅಪರಿಚಿತ ವ್ಯಕ್ತಿಯನ್ನು ಕಂಡ ಪತ್ನಿ ಯಾರೋ ಗೌರವಾನ್ವಿತರು ಮನೆಗೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿದು, ಬಂದ ವ್ಯಕ್ತಿಗೆ ಆತಿಥ್ಯ ನೀಡಿ ಗೌರವಿಸಿ ದಾಂಪತ್ಯ ಸುಖ ವಿವರವನ್ನು ವಿನಿಮಯಗೊಳಿಸುತ್ತಾರೆ. ಈ ದಾಂಪತ್ಯ ಗಟ್ಟಿಗೊಳಿಸುವ ಧ್ವನಿಯನ್ನು ಪತಿಯೊಂದಿಗೆ ಹಂಚಲು ತಿಳಿಸಿ ಅಲ್ಲಿಂದ ಹೊರಡುತ್ತಾರೆ.


ಇಬ್ರಾಹಿಂ (ಅ) ಆತಿಥ್ಯ ಗೌರವ ನೀಡುವ ವ್ಯಕ್ತಿಗಳಲ್ಲಿ ಮೊದಲಿಗರು. ಅದೇ ರೀತಿ ಮುಂಜಿ ಕರ್ಮ ಹಾಗೂ ಮೀಸೆ ಕತ್ತರಿಸುವಿಕೆ ಮೊದಲಾದ ಸತ್ಕಾರ್ಯಗಳಲ್ಲಿ ಪ್ರಥಮಿಗರಾಗಿದ್ದರು. ಮೊದಲು ಕೂದಲು ನೆರತ ವ್ಯಕ್ತಿ ಪ್ರವಾದಿ ಇಬ್ರಾಹಿಂ (ಅ). ಆಶ್ಚರ್ಯ ಚಕಿತರಾದ ಇಬ್ರಾಹಿಂ (ಅ) ಅಲ್ಲಾಹನೊಂದಿಗೆ ಕೇಳುತ್ತಾರೆ: "ಇದೇನು..!"

ವಕಾರು‌ ಯಾ ಇಬ್ರಾಹಿಂ..!

"ಇದು ನಿಮ್ಮ ಗಾಂಭೀರ್ಯತೆಯ ಸಂಕೇತ.."

ಹಾಗಾದರೆ ಇನ್ನೂ ಗಾಂಭೀರ್ಯ ಘನತೆಯನ್ನು ಧಾರಳವಾಗಿ ನೀಡು ಅಲ್ಲಾಹ್...


~ ಮುಂದಿರ್ ಮುಈನಿ

Comments


bottom of page