ರಜಬ್: ಅಲ್ಲಾಹನ ತಿಂಗಳು
- Muhammad Aslam Mueeni Belal
- Jan 4
- 3 min read

• ರಜಬ್ ಹಲವಾರು ಅಜಬ್‌ಗಳನ್ನು ತನ್ನೊಡಲಲ್ಲಿಟ್ಟು ಪ್ರತೀ ವರ್ಷವೂ ಆಗಮಿಸುತ್ತಿದೆ. ವರ್ಣಿಸಲು ಅಸಾಧ್ಯವಾದ ಹಿರಿಮೆ - ಮಹಿಮೆ ಈ ಮಾಸಕ್ಕಿದೆ.
• ರಜಬ್ ಅರಬಿ ತಿಂಗಳುಗಳಲ್ಲಿ ಏಳನೆಯದ್ದು. 'ರಜಬ್' ಎಂಬ ಪದಕ್ಕೆ ಘನತೆ, ಗೌರವ, ನಾಚಿಕೆ, ಅಸ್ವಬ್ (ಯಥೇಷ್ಠ ಸುರಿಯುವುದು) ಅಸ್ವಮ್ಮ್ (ಕಿವಿ ಕೇಳದ) ಶಹರಜ್ಮ್ ಮುಂತಾದ ಹಲವಾರು ಹೆಸರುಗಳಿವೆ.
• ರಜಬ್ ತಿಂಗಳಲ್ಲಿ ಜಗಳ, ಯುದ್ಧ, ಕಲಹ ಮಾಡುವುದೆಂದರೆ ಅರಬರು ಹೆದರುತ್ತಲೂ, ನಾಚುತ್ತಲೂ ಇದ್ದರಂತೆ. ಹಾಗಾಗಿ ರಜಬನ್ನು ಜಾಹಿಲಿಯ್ಯಾದ ಕಾಲದಲ್ಲಿಯೇ ತುಂಬಾ ಗೌರವದಿಂದ ಕಾಣುತ್ತಿದ್ದರು. ಇಸ್ಲಾಮ್ ಈ ಮಾಸದಲ್ಲಿ ಯುದ್ಧವನ್ನು ನಿಷಿದ್ಧಗೊಳಿಸಿದೆ.
• ಈ ತಿಂಗಳನ್ನು ಅಸ್ವಬ್ (ಅಪಾರ ಸುರಿಯುವುದು) ಎಂದವರು ಹೇಳುವುದೇನೆಂದರೆ ಈ ಪವಿತ್ರ ತಿಂಗಳಲ್ಲಿ ಅಲ್ಲಾಹನ ರಹ್ಮತ್, ಬರ್ಕತ್, ನಿಅ್‌ಮತ್ ಹೇರಳವಾಗಿ ಸುರಿಯಲು ಆರಂಭವಾಗುತ್ತದೆ.
ಅಸ್ವಮ್ಮ್ (ಕಿವಿಕೇಳದ) ಅಂದರೆ ಈ ತಿಂಗಳಲ್ಲಿ ಯುದ್ಧವೇ ನಿಷಿದ್ಧವಾದುದರಿಂದ ಯುದ್ಧಾಯುಧಗಳ ಶಬ್ದವೇ ಕೇಳಿಸದೆ ಇರುವುದರಿಂದ ಈ ಮಾಸಕ್ಕೆ ಈ ಹೆಸರು
ಬಂದಿದೆ. ಶಹ್ರ್ ರ್ರಜ್‌ಮ್ (ಕಲ್ಲೆಸೆದು ಓಡಿಸುವುದು) ಎಂಬ ಹೆಸರಿನಿಂದ ಈ ಮಾಸವನ್ನು ಕರೆದ ಆರಿಫೀನ್‌ಗಳು ಹೇಳುವುದೇನೆಂದರೆ ಆರಾಧನೆಗೆ ತೊಂದರೆ ಕೊಡುವ, ಆರಾಧನೆಗಳನ್ನು ತಡೆಯುವ ಪಿಶಾಚಿಗಳನ್ನು ಓಡಿಸುವ ಕಾರ್ಯವು ವಿಶೇಷವಾಗಿ ಈ ತಿಂಗಳಿನಿಂದ ಆರಂಭವಾಗುವುದರಿಂದ ಈ
ಹೆಸರು ಬರಲು ಕಾರಣವಾಗಿದೆ.
• ರಜಬ್ ಎಂಬ ಮೂರು ಅಕ್ಷರಗಳ ರಹಸ್ಯ ಹೀಗಿದೆ. ರಾಅ್ ಎಂಬ ಅಕ್ಷರ ರಹ್ಮತ್ (ಕರುಣೆ, ಅನುಗ್ರಹ), ಜೀಮ್ ಎಂಬ ಅಕ್ಷರ ಜುರ್ಮು (ಅನ್ಯಾಯ), ಬಾಅ್ ಎಂಬ ಅಕ್ಷರ ಬಿರ್ರ್ (ಒಳಿತನ್ನು) ಸೂಚಿಸುತ್ತದೆ. ಅಲ್ಲಾಹನ ರಹ್ಮತ್ ಮತ್ತು ಒಳಿತಿನಿಂದ ಅನ್ಯಾಯವನ್ನು ಜಜ್ಜಿ ಪುಡಿಗಟ್ಟಬೇಕೆಂದಾಗಿದೆ ಇದರ ಸಾರ.
• ಪೂರ್ವಕಾಲ (ಅಜ್ಞಾನಕಾಲ) ದಲ್ಲೇ ರಜಬ್‌ನ್ನು ಬಹಳ ಗೌರವದಿಂದ ಕಾಣಲಾಗುತ್ತಿತ್ತಂತೆ. ಇಸ್ಲಾಂ ರಜಬ್‌ನ ಗೌರವವನ್ನು ಇನ್ನಷ್ಟು ಹೆಚ್ಚಿಸಿತು. ಅಶ್ಶಹ್ರುಲ್ ಹರಾಮ್ ಎಂಬ ಯುದ್ದ ನಿಷಿದ್ಧ ನಾಲ್ಕು ತಿಂಗಳಲ್ಲಿ ಒಂದಾಗಿದೆ ರಜಬ್. ಬರಕತ್ ಸುರಿಯಲು ತೊಡಗುವ ಮಾಸಗಳಲ್ಲಿ ಪ್ರಥಮವಾಗಿ ರಜಬ್ ಆಗಿದೆ. ರಜಬ್ ಶಾಂತಿ, ಅನುಗ್ರಹ, ಬರಕತ್‌ಗಳು ತುಂಬಿ ತುಳುಕುವ ಮಾಸವಾಗಿದೆ.
• ಗಲಾಟೆ, ಗೌಜಿ, ಕಲಹ, ದ್ವೇಷ, ಅಸೂಯೆಗಳೆನ್ನೆಲ್ಲಾ
ಬದಿಗಿಟ್ಟು ಪ್ರೀತಿ ಹೆಚ್ಚಿಸುವಂತೆ, ಸಿಟ್ಟಾಗಿರುವವರನ್ನೆಲ್ಲಾ ರಾಜಿ (ಸುಲ್‌ಹ್) ಮಾಡುವ ವಿಶೇಷ ಮಾಸವೂ ಹೌದು. ಅಲ್ಲಾಹನ ಮಾಸವೆಂಬ ವಿಶೇಷ ನಾಮ ಕೂಡ ಈ ತಿಂಗಳಿಗಿದೆ.
• ಪ್ರಾರ್ಥನೆಗೆ ಉತ್ತರಸಿಗುವ ಐದು ರಾತ್ರಿಗಳಲ್ಲಿ ರಜಬ್‌ನ ಪ್ರಥಮ ರಾತ್ರಿಯೂ ಒಂದಾಗಿದೆ. ಮುಂದಿನ ತಿಂಗಳಲ್ಲಿ ಯಥೇಚ್ಛ ಒಳಿತುಗಳ ಖಜಾನೆ ಸಂಪಾದಿಸಲು ಸತ್ಯವಿಶ್ವಾಸಿಗಳು ಟೊಂಕಕಟ್ಟಿ ಸಿದ್ಧರಾಗುವ ರಹ್ಮತ್‌ನ ಮಾಸವೂ ರಜಬ್ ಆಗಿದೆ.
• "ರಜಬ್ ಅಲ್ಲಾಹುವಿನ ತಿಂಗಳು, ಶಅಬಾನ್ ನನ್ನ ತಿಂಗಳು, ರಮಳಾನ್ (ರಂಝಾನ್) ನನ್ನ ಉಮ್ಮತಿ (ಸಮುದಾಯದ)ಗಳ ತಿಂಗಳು" ಎಂಬ ಪ್ರವಾದಿ ವಚನವಿದೆ.
• ಯಾವುದೇ ತಿಂಗಳನ್ನು ನನ್ನ ತಿಂಗಳೆಂದು ಹೇಳದ ಅಲ್ಲಾಹನು ರಜಬ್ ತಿಂಗಳನ್ನು ನನ್ನ ತಿಂಗಳೆಂದು ಹೇಳಿ ಅದರ ಘನತೆಯನ್ನು ಹೆಚ್ಚಾಗಿ ಅಪಾರ ಗೌರವಿಸುವುದರಿಂದ ಅಲ್ಲಾಹು ಗೌರವಿಸಿದ. ಈ ತಿಂಗಳನ್ನು ವಿಶೇಷವಾಗಿ ಗೌರವಿಸುವುದು ಮುಸ್ಲಿಮರ ಆದ್ಯ ಕರ್ತವ್ಯವಾಗಿದೆ. ಮನುಷ್ಯ ಮನಸ್ಸು ಮಾಡಿದರೆ ಆತನನ್ನು ಸರ್ವ ಕೆಡುಕುಗಳಿಂದ ರಕ್ಷಿಸುವ ವಿಶೇಷ ಮಾಸವೂ ಕೂಡಾ ರಜಬ್ ಆಗಿದೆ.
• "ಅಲ್ಲಾಹುಮ್ಮಗ್ಫಿರ್‌ಲೀ ವರ್‌ಹಮ್ನೀ ವತುಬ್ ಅಲಯ್ಯ” ಎಂಬ ಪ್ರಾರ್ಥನೆಯನ್ನು ರಜಬ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ಹೃದಯಂತರಾಳದಿಂದ ಹೇಳಿದ್ದಾದರೆ ಆತನ/ಆಕೆಯ ಶರೀರಕ್ಕೆ ನರಕಾಗ್ನಿ ಸ್ಪರ್ಶಿಸದೆಂದು ಪ್ರವಾದಿ ವಚನದಲ್ಲಿ ಕಾಣಬಹುದಾಗಿದೆ.
• ಸರ್ವ ಪ್ರವಾದಿಗಳೂ ಶ್ರೇಷ್ಠ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಹಿಂದೆ ನಿಂತು ಬೈತುಲ್ ಮುಖದ್ದಸ್ ಮಸ್ಜಿದ್‌ನಲ್ಲಿ ಜಮಾಅತಾಗಿ ನಮಾಜ್ ನಿರ್ವಹಿಸಿದ ತಿಂಗಳಾಗಿದೆ ರಜಬ್.
• ರಜಬ್ ಬಂತೆಂದರೆ ರಮಳಾನಿನ ಪರಿಮಳ, ನೆನಪು ಮುಸ್ಲಿಮರಲ್ಲಿ ಸಹಜವಾಗಿಯೇ ಬಂದೇ ಬರುತ್ತದೆ. ಆಲಸ್ಯವೆಂಬ ಮಹಾಮಾರಿಯನ್ನು ಬೇರು
ಸಹಿತ ಕಿತ್ತೆಸೆಯುವ ಅಪೂರ್ವ, ವಿಶಿಷ್ಟ ಮಾಸವೂ ರಜಬ್ ಆಗಿದೆ. ರಜಬ್‌ನ ಆಗಮನವೆಂದರೆ ರಮಳಾನಿನ ಪೂರ್ವ ತಯಾರಿಯಾಗಿದೆ. ನಮ್ಮ ಹೃದಯದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪ್ರೀತಿ ಪ್ರೇಮವನ್ನು ಹೆಚ್ಚಿಸುತ್ತಲೇ ಇರಲು ಸಹಕಾರಿಯಾಗುವ ಮೊದಲ ತಿಂಗಳು ಕೂಡಾ ಹೌದು.
• ಈ ಮಾಸ ಬಂತೆಂದರೆ "ಅಲ್ಲಾಹುಮ್ಮ ಬಾರಿಕ್ ಲನಾ ಫೀ ರಜಬಿನ್ ವಶಅಬಾನ್ ವಬಲ್ಲಿಗ್ನಾ ರಮಳಾನ್ (ಅಲ್ಲಾಹುವೇ ರಜಬ್ ಮತ್ತು ಶಅಬಾನ್‌ನಲ್ಲಿ ನಮಗೆ ಬರ್ಕತ್ ನೀಡು, ರಮಳಾನನ್ನು ನಮಗೆ
ತಲುಪಿಸು) ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಪ್ರಾರ್ಥಿಸುತ್ತಿದ್ದರು.
• ಅಂದರೆ ಪುಣ್ಯಗಳ ಖಜಾನೆಗಳೇ ಸಂಪಾದಿಸುವ ಈ ಮೂರು ತಿಂಗಳಲ್ಲಿ ನಮ್ಮನ್ನು ಮರಣಿಸಬೇಡ. ಈ ಮೂರು ತಿಂಗಳಲ್ಲಿ ನಾವು ಯಥೇಷ್ಠ ಸತ್ಕರ್ಮಗಳನ್ನು ಮಾಡಿ ಪುಣ್ಯಗಳ ನಿಧಿಗಳೆನ್ನೆಲ್ಲಾ ಶೇಖರಿಸುತ್ತೇವೆ ಅಲ್ಲಾಹನೇ, ಎಂದಾಗಿದೆ ಆ ದುಆದ ಅರ್ಥ.
• ರಜಬ್ ಮಾಸದಲ್ಲಿ ಮನುಷ್ಯನು ಮಾಡುವ ಎಲ್ಲಾ ಸತ್ಕರ್ಮಗಳಿಗೆ ದುಪ್ಪಟ್ಟು ಪ್ರತಿಫಲವಿದೆ. ಪಾಪವೆಸಗುವವರಿಗೂ ಶೀಘ್ರ ಶಿಕ್ಷೆ ಬಂದೆರಗುವುದು.
• ಮುಹರ್ರಮ್ ನ ಬಳಿಕ ಉಪವಾಸ ಆಚರಿಸಲು ಅತ್ಯಂತ ಶ್ರೇಷ್ಠ ತಿಂಗಳಾಗಿದೆ ರಜಬ್. ರಜಬ್ ತಿಂಗಳಿಡೀ ಉಪವಾಸ ಹಿಡಿಯುವುದು ಸುನ್ನತ್.
• ಇಬ್ನ್ ಅಬ್ಬಾಸ್‌ರಿಂದ ವರದಿ: ಅಲ್ಲಾಹನ ರಸೂಲ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ರಜಬ್ ತಿಂಗಳಲ್ಲಿ ಅವರಿನ್ನೂ ಉಪವಾಸವೇ ತೊರೆಯುವುದಿಲ್ಲವೆಂದು ನಾವು ಭಾವಿಸುವ ತನಕ ಉಪವಾಸವಿರುತ್ತಿದ್ದರು. ರಜಬ್ ತಿಂಗಳ ಉಪವಾಸ ಕಡ್ಡಾಯವೆಂಬ ಭಾವನೆ ಉಮ್ಮತಿಗಳಿಗೆ ಬಾರದಿರಲು ಅಥವಾ ಇತರ ಕಾರಣಗಳಿಗಾಗಿ ಉಪವಾಸ ತ್ಯಜಿಸಿದ್ದು ಇದೆ. ಈ ತಿಂಗಳಲ್ಲಿ ಒಂದೊಂದು ದಿನ ಬಿಟ್ಟು ಒಂದು ದಿನ ಎಲ್ಲಾ ದಿನಗಳಲ್ಲೂ ಉಪವಾಸ ಹಿಡಿದರೆ ಒಂದೊಂದು ಉಪವಾಸಕ್ಕೆ ಒಂದೊಂದು ವರ್ಷ ಸಂಪೂರ್ಣ ಉಪವಾಸ ಹಿಡಿದ ಪ್ರತಿಫಲ ದೊರೆಯುವುದೆಂದು “ಇರ್‌ಶಾದುಸ್ಸಾರಿ” ಎಂಬ ಗ್ರಂಥದಲ್ಲಿದೆ. ರಜಬ್ 27ರ ಉಪವಾಸ ಪ್ರಬಲ ಸುನ್ನತ್ತಾಗಿದೆ. ಅಂದು ಒಂದು ದಿನ ಉಪವಾಸ ಆಚರಿಸಿದರೆ 60 ತಿಂಗಳು (ಐದು ವರ್ಷ) ನಿರಂತರ ಉಪವಾಸ ಹಿಡಿದ ಪ್ರತಿಫಲವಿದೆಯೆಂದು 'ಮುಕಾಶಫತುಲ್ ಕ್ವುಲೂಬ್' ಹಾಗೂ ಇಹ್ಯಾ ಗ್ರಂಥದಲ್ಲಿದೆ
• ಸ್ವರ್ಗದಲ್ಲಿ ರಜಬ್ ಎಂಬ ನದಿಯೊಂದಿದೆ. ಆ ನದಿಯ ನೀರು ಹಾಲಿಗಿಂತಲೂ ಬಿಳಿ, ಜೇನಿಗಿಂತಲೂ ಸಿಹಿ, ಕಸ್ತೂರಿಗಿಂತಲೂ ಪರಿಮಳ. ರಜಬ್‌ನಲ್ಲಿ ಒಂದಾದರೂ ಉಪವಾಸ ಆಚರಿಸಿದವರಿಗೆ ಮಾತ್ರ ಇದರಿಂದ ಕುಡಿಸಲಾಗುವುದು ಎಂಬ ಪ್ರವಾದಿ ವಚನವಿದೆ.
• ರಜಬ್‌ನ ಉಪವಾಸದಿಂದ ಅಪಾರ ಲಾಭಗಳಿವೆ. 600 ವರ್ಷ ಆರಾಧನೆ ಮಾಡಿದ ಮುಸ್ಲಿಮರ ಪುಣ್ಯ, ಸರ್ವ ಪಾಪಗಳಿಂದ ಮನ್ನಿಸುವಿಕೆ, ಆಯುಷ್ಯದಲ್ಲಿ ಬರಕತ್, ಅಪರಿಮಿತ ದಾಹವಾಗುವ ಅಂತ್ಯ ದಿನದಂದು ದಾಹ ಸಂಪೂರ್ಣ ನಿವಾರಣೆ ಆಗುವುದೆಂದು 'ನುಸ್ಹತುಲ್ ಮಜಾಲಿಸ್' ಎಂಬ ಕಿತಾಬಿನಲ್ಲಿದೆ.
• ರಜಬ್ ಮಾಸದಲ್ಲಿ ಓರ್ವ ಕನಿಷ್ಠ ಮೂರು ಉಪವಾಸ ಆಚರಿಸಿದರೆ ಆ ತಿಂಗಳಿಡೀ ಉಪವಾಸ ಆಚರಿಸಿದ ಪುಣ್ಯ ಲಭ್ಯ. ಏಳು ಉಪವಾಸ ಆಚರಿಸಿದರೆ ನರಕದ 7 ಬಾಗಿಲುಗಳು ಆತನಿಗೆ/ಆಕೆಗೆ ನಿಷಿದ್ಧವಾಗುವುದು.
8 ಉಪವಾಸ ಆಚರಿಸಿದರೆ ಸ್ವರ್ಗದ 8 ದ್ವಾರಗಳಲ್ಲಿ ಯಾವುದೇ ದ್ವಾರದ ಮೂಲಕ ಪ್ರವೇಶಿಸಬಹುದು. 10 ಉಪವಾಸ ಆಚರಿಸಿದರೆ ಆತ/ಆಕೆ ಬಯಸಿದೆಲ್ಲವನ್ನು ಇಹದಲ್ಲೂ ಪರದಲ್ಲೂ ಅಲ್ಲಾಹನು ನೀಡುತ್ತಾನೆ. (ಪ್ರವಾದಿ ವಚನ).
• ಈ ತಿಂಗಳಲ್ಲಿ ಸ್ವಲಾತ್ (ದರೂದ್ ಶರೀಫ್) ಹೆಚ್ಚಿಸುವುದು ವಿಶೇಷ ಸುನ್ನತ್ ಇದೆ. ರಜಬ್‌ನಲ್ಲಿ ಒಂದು ದಿನವಿದೆ, (ಅದು ರಜಬ್ 27ನೇ ದಿನ) ಅಂದು ಯಾರಾದರೂ ಉಪವಾಸ ಆಚರಿಸಿದರೆ, ರಾತ್ರಿ ನಮಾಝ್ ನಿರ್ವಹಿಸಿದರೆ ನೂರು ವರ್ಷ ಉಪವಾಸ ಆಚರಿಸಿದ ನಮಾಝ್ ನಿರ್ವಹಿಸಿದ ಪುಣ್ಯವಿದೆ (ಇಹ್ಯಾ).
• ಯಾರಾದರೂ ರಜಬ್ 27 ರಂದು ವ್ರತಾಚರಿಸಿದರೆ ಅವನಿಗೆ 60 ತಿಂಗಳು ಉಪವಾಸ ಆಚರಿಸಿದ ಪುಣ್ಯವಿದೆ (ಇಹ್ಯಾ).
• ಇಷ್ಟೊಂದು ಪುಣ್ಯವೇರಿದ ತಿಂಗಳೊಂದು ನಮ್ಮ ಬಳಿ ಆಗಮನವಾಗುತ್ತಿದೆ. ಸಂಪೂರ್ಣ ಸ್ಪೂರ್ತಿಯೊಂದಿಗೆ ನಾವುಗಳು ಸಿದ್ಧರಾಗಬೇಕಿದೆ.
ಅಲ್ಲಾಹನು ನಮಗೆಲ್ಲಾ ಅನುಗ್ರಹಿಸಲಿ, ಆಮೀನ್.
ಸಂಗ್ರಹ : ಮುಹಮ್ಮದ್ ಅಸ್ಲಂ ಅಲ್-ಮುಈನಿ, ಬೆಳಾಲು
Comments