top of page

ಭಾರತದ ಸುಯೂಥೀ: ಇಮಾಂ ಅಹ್ಮದ್ ರಝಾ ಖಾನ್ ಬರೇಲಿ



ಜ್ಞಾನ ಪರಂಪರೆಯಲ್ಲಿ 'ಇಂಡ್ಯನ್ ಸುಯೂಥೀ' ಎಂದು ಖ್ಯಾತರಾದವರು ಇಮಾಂ ಅಹ್ಮದ್ ರಝಾ ಖಾನ್ ಬರೇಲಿ (ರ). ಮಹಾನರು ಅರಬಿ, ಉರ್ದು, ಪೇರ್ಶ್ಯನ್ ಭಾಷೆಗಳಲ್ಲಿ ಸಾವಿರದಷ್ಟು ಕೃತಿಗಳ ರಚನೆಗಳ ಜೊತೆಗೆ ಸಮಕಾಲೀನ ಭಾರತವನ್ನು ಜ್ಞಾನಮೋಹದೆಡೆ ಕೊಂಡೊಯ್ದಿದ್ದರು. ಖುರ್‌ಆನ್, ಹದೀಸ್, ಕರ್ಮಶಾಸ್ತ್ರ, ವಿಶ್ವಾಸಶಾಸ್ತ್ರ, ತಸವ್ವುಫ್, ಪಾರಾಯಣ ವಿಧಾನಶಾಸ್ತ್ರ ಕ್ಷೇತ್ರಗಳಲ್ಲಿ ಅಗಾಧ ಪಾಂಡಿತ್ಯವನ್ನು ಪಡೆಯುವುದರ ಜೊತೆಗೆ ಗಣಿತ, ಲಾಗರಿಥಂ, ಇಂಜಿನಿಯರಿಂಗ್, ಅಲ್ಜೀಬ್ರಾ, ಟ್ರಿಗ್ನೋಮೆಟ್ರಿ, ಸಮಯ ಮತ್ತು ದಿಶಾ ನಿರ್ಧಾರಣ, ಜ್ಯೋತಿ ಶಾಸ್ತ್ರವನ್ನೂ ಕರಗತಗೊಳಿಸಿದ್ದರು.


1853 ಜೂನ್ ಹದಿನಾಲ್ಕು (ಹಿಜ್ರಾ 1272 ಶವ್ವಾಲ್ 10) ರಂದು ಬರೇಲಿಯ ಒಂದು ಪಠಾನ್ ಕುಟುಂಬದಲ್ಲಿ ರಝಾ ಖಾನ್‌ರವರು ಜನಿಸಿದರು. ರಝಾರವರ ಕುಟುಂಬ ಮೊಘಲ್ ಸಾಮ್ರಾಟರ ವಿಶೇಷ ಪದವಿಗಳನ್ನು ವಹಿಸಿದ, ಪ್ರಾದೇಶಿಕ ಸ್ಥಾನ ಮನ್ನಣೆಗಳನ್ನು ಪಡೆದ ಕುಟುಂಬವಾಗಿತ್ತು. ಸೇನಾಧಿಪತಿಗಳು, ವಿದ್ವಾಂಸರು, ಗ್ರಂಥಕರ್ತೃಗಳು ಸೇರಿದ ಒಂದು ಮಹಾನ್ ವೃಂದಶಕ್ತಿ ಅವರ ಜೊತೆಯಲ್ಲಿತ್ತು. ಖುರ್‌ಆನ್, ಹದೀಸ್, ತಸವ್ವುಫ್ ಕ್ಷೇತ್ರಗಳಲ್ಲಿ ಹಲವು ಗ್ರಂಥಗಳ ಕೊಡುಗೆಗಳನ್ನು ನೀಡಿದ ತಂದೆ ನಬಿ ಅಲೀ ಖಾನ್, ಮೊಘಲ್ ಸಾಮ್ರಾಜ್ಯದ ಮಂತ್ರಿಗಳಾಗಿದ್ದ ಖಾಸಿಂ ಅಲೀ ಖಾನ್ ಅವರಲ್ಲಿ ಪ್ರಮುಖರು. ಜನನ ಪೂರ್ವದಲ್ಲಿಯೇ ರಝಾ ಖಾನ್ ರವರ ಬದುಕಿನ ಅಸಾಮಾನ್ಯ ಅನುಭವಗಳ ಪುಟ ತೆರೆಯಲಾರಂಭಗೊಳ್ಳುತ್ತದೆ. ಮಹಾನರು ಗರ್ಭಸ್ಥ ಶಿಶುವಾಗಿದ್ದ ವೇಳೆ ತಂದೆ ಒಂದು ಕಣಸು ಕಂಡರು. ಸ್ವಪ್ನ ವ್ಯಾಖ್ಯಾಕಾರ, ವಿದ್ವಾಂಸರೂ ಆಗಿದ್ದ ತಂದೆಯವರಾದ ಮೌಲಾನಾ ರಝಾ ಅಲೀ ಖಾನ್‌ರವರು ಆ ಕನಸನ್ನು ಈ ರೀತಿ ವಿಶ್ಲೇಷಿಸುತ್ತಾರೆ : "ಇದೊಂದು ಅನುಗ್ರಹೀತ ಕನಸು. ಸೃಷ್ಟಿಕರ್ತನು ನಿನ್ನ ಮೂಲಕ ಒಬ್ಬ ಯುಗಪುರುಷನ ಹುಟ್ಟಿಗೆ ದಾರಿ ಮಾಡಿಕೊಡುತ್ತಿರುವನು. ಹುಟ್ಟುವ ಮಗು ಜ್ಞಾನದ ಅನಂತ ಸಾಗರವನ್ನು ಸ್ವಾಧೀನಪಡಿಸುತ್ತದೆ. ಅವನ ಕೀರ್ತಿ ಪೂರ್ವ ಪಶ್ಚಿಮಗಳಲ್ಲೂ ವ್ಯಾಪಿಸುವುದು". ರಝಾ ಖಾನ್‌ರ ಈ ವ್ಯಾಖ್ಯೆ ನಂತರದ ಐತಿಹಾಸಿಕ ಘಟನೆಗಳ ಮೂಲಕ ಅಕ್ಷರಶಃ ಸತ್ಯ ಕಂಡಿತು.


ಆಲಾ ಹಝ್ರತ್‌ರವರ ವಿದ್ವತ್ ವ್ಯಕ್ತಿತ್ವವನ್ನು ರೂಪಿಸುವಲ್ಲಿ ತಂದೆ ನಬೀ ಅಲೀ ಖಾನ್‌ರವರ ಪಾತ್ರ ಅವರ್ಣನೀಯ. ಧಾರ್ಮಿಕವಾದ ಪ್ರಾಥಮಿಕ ಅಕ್ಷರಾಭ್ಯಾಸದಿಂದ ಉನ್ನತ ಶಿಕ್ಷಣದ ವರೆಗಿನ ಜ್ಞಾನವನ್ನು ತಂದೆಯವರಿಂದಲೇ ಕರಗತಗೊಳಿಸಿದರು. ನಬೀ ಅಲೀ ಖಾನ್‌ರನ್ನು ಹೊರತುಪಡಿಸಿ ಬೆರಳೆಣಿಕೆಯ ಗುರುವೃಂದ ಮಾತ್ರವೇ ಅವರಿಗಿರುವುದು. ಮೀರ್ ಸಾ ಗುಲಾಂ ಖಾದಿರ್ ಬೇಗ್, ಮೌಲಾನಾ ಅಬ್ದುಲ್ ಅಲೀ ಸಾಹಿಬ್, ಅಬ್ದುಲ್ ಹಸನ್ ನೂರೀ ಪ್ರಮುಖರು. ಮಹಾನರು ಐಹಿಕ ಪಥದ ಪ್ರಮುಖ ಗುರುವರ್ಯರಾಗಿಯೂ, ಮಾರ್ಗದರ್ಶಕರಾಗಿಯೂ ಮೌಲಾನಾ ಶಾಹ್ ಆಲೇ ರಸೂಲ್ ಅಮ್ಜದೀ (ರ) ರವರನ್ನು ಬೈಅತ್ ನಡೆಸಿದ್ದರು.


ಹದಿಮೂರನೆಯ ವಯಸ್ಸಿನ ತನಕ ಮಾತ್ರವೇ ಒಬ್ಬ ವಿದ್ಯಾರ್ಥಿಯಾಗಿ ಅವರು ಬದುಕಿದರು. ಹದಿನಾಲ್ಕನೆಯ ವಯಸ್ಸಿನಲ್ಲೇ ದೊಡ್ಡ ಶಿಷ್ಯಸಮೂಹ ಅವರ ಜೊತೆಯಾಯಿತು. ಫತ್ವಾಗಳ ಹೊರಡಿಸುವಿಕೆ, ಗಂಥ ರಚನೆಯನ್ನೂ ಪ್ರಾರಂಭಿಸಿದರು. ಮಹಾನರು ಸಾಧಿಸಿ ಪಡೆದ ಪ್ರತಿಭಾತರಂಗ ಎನ್ನುವುದಕ್ಕಿಂತಲೂ ದೈವಿಕವಾದ ವಿಶೇಷ ಸಹಾಯ ಅವರಿಗೆ ದೊರೆತಿರುವುದಾಗಿ ಕಾಣಬಹುದು.


ಭಾರತೀಯ ಆಧ್ಯಾತ್ಮಿಕ, ಶೈಕ್ಷಣಿಕ ಕ್ಷೇತ್ರದ ಔನ್ನತ್ಯಕ್ಕಾಗಿ ಶ್ರಮಿಸಿದ ಅಹ್ಮದ್ ರಝಾ ಖಾನ್ ಜಾಗತಿಕ ಗುರುತಿಸುವಿಕೆ ಸಾಧಿಸುವುದು ಒಂದು ಹಜ್ಜ್ ಯಾತ್ರೆಯ ಮೂಲಕವಾಗಿತ್ತು. ಹಿಜ್ರಾ ವರ್ಷ 1297 ರಲ್ಲಿ ಹಜ್ಜ್‌ಗಾಗಿ ತೆರಳಿದ ಮಹಾನರು ಮಕ್ಕಾದ ವಿದ್ವಾಂಸರಾದ ಅಲ್ಲಾಮಾ ಅಹ್ಮದ್ ಝೈನಿ ದಹ್‌ಲಾನ್, ಶೈಖ್ ಅಬ್ದುರ್ರಹ್ಮಾನ್ ಸಿರಾಜ್, ಶೈಖ್ ಹುಸೈನ್ ಬಿನ್ ಸ್ವಾಲಿಹ್‌ರೊಂದಿಗೆ ಮಾತುಕತೆ ನಡೆಸಿದರು. ವಿವಿಧ ಹದೀಸುಗಳ ಸನದನ್ನೂ ಪಡೆದುಕೊಂಡರು. ಹಿಜಾಝ್‌ನ ವಿದ್ವಾಂಸರ ಜೊತೆಗೆ ನಡೆದ ಸಂವಾದದ ವೇಳೆ ಅವರ ತಾರ್ಕಿಕ ಪ್ರಶ್ನೆಗಳಿಗೆ ದಕ್ಷ ಉತ್ತರವನ್ನು ನೀಡುವ ಮೂಲಕ ಆಲಾ ಹಝ್ರತ್‌ರ ಜ್ಞಾನ ಪ್ರಚುರತೆ ಅರಬ್ ವಿದ್ವಾಂಸರ ನಡುವೆಯೂ ಸರ್ವಸಮ್ಮತಗೊಂಡಿತು. ಹಿಜಾಝಿನ ವಿದ್ವಾಂಸರಿಗಿಂತಲೂ ಒಬ್ಬ ಅರಬೇತರ ವಿದ್ವಾಂಸನ ಧಾರ್ಮಿಕ ವಿಚಾರಗಳ ಮೇಲಿನ ಹಿಡಿತ ಅವರನ್ನು ಕೀರ್ತಿ ಪಡೆಯುವಂತೆ ಮಾಡಿತು.


ಹಜ್ಜ್ ಪ್ರಯಾಣದ ವೇಳೆ ಜಾಗತಿಕ ವಿದ್ವಾಂಸರ ಜೊತೆಗಿನ ಅವರ ಭೇಟಿ, ಅವರೊಂದಿಗಿನ ಸಾಮೀಪ್ಯತೆ, ಪಡೆದ ಸರ್ವಸಮ್ಮತಿ ಅವರ ನಂತರದ ಸೈದ್ಧಾಂತಿಕ ನಿಲುವುಗಳಿಗೆ ಶಕ್ತಿ ತುಂಬಿತು. ಇಸ್ಲಾಮಿಕ್ ಸಮೂಹ ಶತಮಾನಗಳಿಂದಲೂ ಅನುಸರಿಸಿ ಬಂದ ತವಸ್ಸುಲ್, ಇಸ್ತಿಗಾಸದಂತಹ ಪುಣ್ಯ ಕರ್ಮಗಳನ್ನು ಅಲ್ಲಗೆಳೆದು ಹಲವು ವಿಕಲ ಫತ್ವಾಗಳನ್ನು ಹೊರಡಿಸಿದ್ದ ಮುಹಮ್ಮದ್ ಖಾಸಿಮ್ ನಾನೂತ್ವವಿ, ರಶೀದ್ ಅಹ್ಮದ್ ಗಂಗೋಹಿ, ಖಲೀಲ್ ಅಹ್ಮದ್ ರಝಾ ಸಹಾರನ್‌ಪುರಿ, ಅಶ್ರಫ್ ಅಲೀ ಥಾನವೀ ಯಂತಹ ದುಷ್ಟ ಸಂಘಗಳನ್ನು ಎದುರಿಸಬೇಕಾಗಿ ಬಂದ ಸಂದರ್ಭ ಮಹಾನರು ನಡೆಸಿದ ಹಿಜಾಝಿಯನ್ ವಿದ್ವಾಂಸರ ಸಕಾಲಿಕ ಫತ್ವಾಗಳ ಸಂಗ್ರಹ ಅವರನ್ನು ಇನ್ನಷ್ಟೂ ಮನ್ನಣೆ ಪಡೆಯುವಂತೆ ಮಾಡಿತು.


ಆಲಾ ಹಝ್ರತ್‌ರ ಕುರಿತು ಓದುವ ವೇಳೆ ಮುಖ್ಯವಾಗಿ ಮನನ ಮಾಡಬೇಕಾದ ಒಂದು; ಅವರು ಬದುಕಿ ಬಂದ ರಾಜಕೀಯ-ಸಾಮಾಜಿಕ ವಾತಾವರಣ. ಈ ಎರಡೂ ಕ್ಷೇತ್ರಗಳೂ ಅಸ್ಥಿರತೆಯಿಂದ ಬಳಲಿದ್ದ ಕಾಲವಾಗಿತ್ತದು. ಸಾಮುದಾಯಿಕ ಪರಿಷ್ಕರಣೆ ಎಂಬ ಲೇಬಲಿನ ಒಳಗೆ ಮುಸ್ಲಿಮರನ್ನು ಸಾಂಪ್ರದಾಯಿಕ ಇಸ್ಲಾಮಿಕ್ ಆಚಾರಗಳಿಂದ ದಾರಿ ತಪ್ಪಿಸುವ ಗೂಢ ಚಿಂತನೆ ಅಲ್ಲಲ್ಲಿ ನಡೆಯತೊಡಗಿತು. ಜಮಾಲುದ್ದೀನ್ ಅಫ್ಘಾನೀ, ರಶೀದ್ ರಿಬ, ಮುಹಮ್ಮದ್ ಅಬ್ದು, ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್ ರವರು ಇಸ್ಲಾಮಿಕ್ ಮಾಡರ್ನಿಸಂನ ಹೆಸರಿನಲ್ಲಿ ತಯಾರಿಸಿದ ವಿಷ ಬೀಜಗಳನ್ನು ಭಾರತದಲ್ಲೂ ಬಿತ್ತನೆ ನಡೆಸುವ ಷಡ್ಯಂತ್ರದ ವಿರುದ್ಧ ಕಠಿಣ ನಿಲುವು ತಾಳಿದರು‌. ಈ ವೇಳೆ ಪರಾಮರ್ಶೆ ನಡೆಸಬಹುದಾದ ಒಂದು ಘಟನೆಯಿದೆ. ಅದು 1893 ರಲ್ಲಿ ಕಾನ್ಪುರದಲ್ಲಿ ನಡೆದ ಮದ್ರಸಾ ಫೈಜೇ ಆಂ ಸಮ್ಮೇಳನದ ಕುರಿತು.‌ ಮುಸ್ಲಿಂ ಐಕ್ಯತೆ, ವಿವಿಧ ಬಣದ ಎಲ್ಲಾ ವಿದ್ವಾಂಸರ ಒಗ್ಗಟ್ಟು, ಮತ ವಿದ್ಯಾಭ್ಯಾಸದ ಪರಿಷ್ಕರಣೆ ಮುಂತಾದ ಧ್ಯೇಯಗಳೊಂದಿಗಾಗಿತ್ತು ಸಮ್ಮೇಳನ ನಡೆದಿರುವುದು. ಎಲ್ಲಾ ವಿದ್ವಾಂಸರನ್ನು ಕಾನ್ಪುರಿಗೆ ತಲುಪಿಸುವಲ್ಲಿ ಸಮ್ಮೇಳನ ಗೆಲುವನ್ನೂ ಕಂಡಿತು. ಈ ವೇದಿಕೆಯಲ್ಲಿ ಲಕ್ನೋ ನದ್ವತುಲ್ ಉಲಮಾದ ರಚನೆಯೂ ನಡೆಯಿತು. ಆದರೆ ಆಲಾ ಹಝ್ರತ್‌ರಂತಹ ಸೂಕ್ಷ್ಮ ಪ್ರಜ್ಞೆಯುಳ್ಳ ಉಲಮಾಗಳು ಈ ಸಮ್ಮೇಳನದ ಹಿಂದೆ ಕೆಲ ಸುಟ್ಟ ವಾಸನೆಗಳನ್ನು ಘಮಿಸುವುದನ್ನು ಗಮನಿಸಿದರು. ಅವರು ಹೊಂದಿದ ಹಿಡನ್ ಅಜೆಂಡಾ ಮನವರಿಕೆಯಾಗತೊಡಗಿತು. ಮುಸ್ಲಿಂ ಐಕ್ಯತೆಯ ಹೆಸರಿನಲ್ಲಿ ನವೀನ ಚಿಂತನೆಯನ್ನು ಪೋಷಿಸುವ ಅವರ ಪ್ರಯತ್ನದ ಭಾಗವಾದ ಮದ್ರಸ ಫೈಝೇ ಆಂ ಸಮ್ಮೇಳನವನ್ನೂ, ಅಂದು ರೂಪುಗೊಂಡ ನದ್ವತುಲ್ ಉಲಮಾ ಒಕ್ಕೂಟವನ್ನೂ ಅವರು ಅರಿತರು. ಹಾಗಾಗಿ ಮಹಾನರು ನದ್ವತುಲ್ ಉಲಮಾವನ್ನು ಸೋಲಿಸಲು, ಅಹ್ಲುಸುನ್ನತಿ ವಲ್ ಜಮಾಅತಿನ ಆದರ್ಶಗಳನ್ನು ಪ್ರಕಟಿಸಿ ಪ್ರಚುರಪಡಿಸಲು ಅತ್ತುಹ್ಫತುಲ್ ಹನಫಿಯ್ಯ ಉರ್ದು ಪತ್ರಿಕೆಯನ್ನು ಆರಂಭಿಸಿದರು. ನದ್ವಾವನ್ನು ವಿಮರ್ಶಿಸುತ್ತಾ ಆರೇಳು ಕಿರುಲೇಖನಗಳನ್ನೂ ಒಂದು ಗ್ರಂಥವನ್ನೂ ಹೊರ ತಂದರು. ನದ್ವಾ ವಿದ್ವಾಂಸರನ್ನು ಮತಭ್ರಷ್ಟರಾಗಿ ಪರಿಚಯಿಸುತ್ತಾ ಹೊರಡಿಸಿದ ತನ್ನ ಫತ್ವಾಗಳಿಗೆ ಭಾರತೀಯ ವಿದ್ವಾಂಸರಿಂದ ದೊರೆತ ಅಂಗೀಕಾರ ಪತ್ರಗಳನ್ನು 'ಇಲ್ಜಾಮು ಅಲ್ಸಿನತಿನ್ ಲಿ ಅಹ್ಲಿಲ್ ಫಿತ್ನಾ' ಎಂಬ ಹೆಸರಿನಲ್ಲೂ ಅರಬ್ ವಿದ್ವಾಂಸರ ಸಕಾಲಿಕ ಫತ್ವಾಗಳು 'ಫತಾವಲ್ ಹರಮೈನ್ ಬಿ ರಜ್‌ಫಿ ನದ್ವತಿಲ್ ಮೈನ್' ಎಂಬ ಹೆಸರಿನಲ್ಲೂ ಪ್ರಕಾಶನಗೊಂಡಿತು. ಇದು ಅವರು ಪಡೆದ ಜಾಗತಿಕ ಮನ್ನಣೆಯಾಗಿತ್ತು.


ಬ್ರಿಟಿಷ್ ಅಧೀಶತ್ವ ಧೋರಣೆಯ ವಿರುದ್ಧ ಭಾರತೀಯ ಮುಸ್ಲಿಮರಿಗೆ ಪಕ್ವ ನಾಯಕತ್ವದ ಕೊರತೆಯ ಕಾರಣ ಸೆಟೆದು ನಿಲ್ಲಲು ಕಷ್ಟ ಅನುಭವಿಸಬೇಕಾಗಿ ಬಂತು. ಇಸ್ಲಾಂ ಧರ್ಮೀಯರಾಗಿದ್ದ ಮೊಘಲ್ ಸಾಮ್ರಾಜ್ಯಶಾಹಿತ್ವ ಸಂಪೂರ್ಣವಾಗಿ ನೆಲಕಚ್ಚಿದ ನಂತರ ಅವರ ಸ್ಥಾನ ತುಂಬಲು ಸಮರ್ಥ ನಾಯಕತ್ವದ ಕೊರತೆ ಸಮುದಾಯವನ್ನು ಕಾಡಿತು. ಸಂದರ್ಭವನ್ನು ಸಮಗ್ರವಾಗಿ ಅಧ್ಯಯನ ನಡೆಸಿದ ಬಳಿಕ ನೇರವಾಗಿ ಯುದ್ಧಭೂಮಿಗೆ ಧುಮುಕುವ ಬದಲು ಇಸ್ಲಾಮಿಕ್ ಸೇವಾ ಸುಂದರ ಮಾರ್ಗಗಳನ್ನು ಅವರು ಅನುಸರಿಸಿದರು. 'ಇಅಲಾಮುಲ್ ಅಅಲಾಮ್ ಬಿ ಅನ್ನ ಹಿಂದೂಸ್ಥಾನ್ ದಾರುಲ್ ಇಸ್ಲಾಮ್' ಎಂಬ ಕೃತಿಯ ಮೂಲಕ ಬ್ರಿಟಿಷ್ ಭಾರತ ಒಂದು ದಾರುಲ್ ಇಸ್ಲಾಮ್ ಎಂದು ಪ್ರಮಾಣಬದ್ಧವಾಗಿ ಅವರು ವಿವರಿಣೆ ನೀಡಿದರು. ಬ್ರಿಟಿಷರ ವಿರುದ್ಧ ಕುರುಡು ವಿರೋಧವನ್ನು ಹೊಂದುವ ಬದಲು ಆಲಾ ಹಝ್ರತ್‌ರು ನಿರ್ದೇಶಿಸಿದ ಮಾರ್ಗ ಅನುಸರಿಸಿದ್ದರೆ ಪ್ರಸ್ತುತ ಈ ಸ್ಥಿತಿ ಸಂಜಾತವಾಗುತ್ತಿತ್ತೇ ಎಂದು ವರ್ತಮಾನ ಭಾರತದಲ್ಲಾದರೂ ಆಲಾ ಹಝ್ರತ್‌ರ ಧೀರ್ಘವೀಕ್ಷಣೆಯನ್ನು ನಾವು ಅಭ್ಯಸಿಸಬಹುದಾಗಿದೆ.


ಪ್ರವಾದೀ ಪ್ರೇಮ ಜಗತ್ತಿನ ಅಗ್ರೇಸ ವ್ಯಕ್ತಿತ್ವವಾಗಿದ್ದರು ರಝಾ ಖಾನ್. ಹಬೀಬರೊಂದಿಗಿನ ವಿಧೇಯತೆಯ ಪರಮಾರ್ಥವನ್ನು ತಿಳಿಸಲು ಅವರು ತನ್ನನ್ನು 'ಅಬ್ದುಲ್ ಮುಸ್ತಫಾ' ‍(ಪ್ರವಾದೀವರ್ಯರ ದಾಸ) ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದರು. ರಝಾ ಖಾನ್ ವಿರಚಿತ ಪ್ರವಾದೀ ಪ್ರೇಮ ಕಾವ್ಯಗಳು ಉತ್ತರ ಭಾರತದ ಮುಸ್ಲಿಮರ ಬದುಕಿನ ಭಾಗವಾಗಿ ಬಿಟ್ಟಿದೆ. ಇಸ್ಲಾಮಿಕ್ ಸಾಮ್ರಾಜ್ಯಗಳ ಪರಮಾಧಿಕಾರಿಯಾದ ಖಲೀಫಾ (ಅಮೀರುಲ್ ಮುಅಮಿನೀನ್) ಪ್ರವಾದೀ ವಂಶವಾದ ಖುರೈಷಿನಿಂದಲೇ ಉದಯ ಕಾಣಬೇಕು ಎಂಬ ವಾದ ಅವರಿಗಿತ್ತು. ಪ್ರವಾದೀ ಪ್ರೇಮದಲ್ಲಿ ಅದ್ದಿದ ಈ ವಾದಗಳನ್ನು ಸಮರ್ಥಿಸಲು 'ದವಾಮೇ ಐಷ್' ನಂತಹ ಗ್ರಂಥ ರಚನೆಗಳನ್ನೂ ನಡೆಸಿದರು.


ಇಸ್ಲಾಮಿಕ್ ವಿಷಯಗಳಲ್ಲಿ ಆಲಾ ಹಝ್ರತ್‌ರ ಅಸಾಧಾರಣ ಪ್ರತಿಭೆಯಲ್ಲಿ, ಕುಶಾಗ್ರತೆಯನ್ನು ತಿಳಿಸಿಕೊಡುವ ಬೃಹತ್ ಗ್ರಂಥವಾಗಿದೆ 'ಅದ್ದೌಲತುಲ್ ಮಕ್ಕಿಯ್ಯ ಬಿಲ್ ಮಾದ್ದತಿಲ್ ಗೈಬಿಯ್ಯ'. ಅದೃಷ್ಯ ಜ್ಞಾನವನ್ನು ಟೀಕಿಸಿದ ನವೀನ ವಾದಿಗಿರುವ ಉತ್ತರವಾಗಿತ್ತು ಈ ಗ್ರಂಥ. ಅದೃಶ್ಯ ಜ್ಞಾನವನ್ನು ಇಲ್ಲಗೆಳೆಯುವ ಒಂದು ವಿಭಾಗದ ವ್ಯಾಪಕತೆಗೆ ತಡೆ ಹಾಕಲು ಮಕ್ಕಾ ವಿದ್ವಾಂಸರು ಮುಂದಿಟ್ಟ ವಿದ್ವತ್‌ಪೂರ್ಣ ಗ್ರಂಥರಚನೆಯ ಬೇಡಿಕೆಯನುಸಾರ ಕಅಬಾಲಯದ ಅಂಚಿನಲ್ಲಿ ಕುಳಿತು ರಚಿಸಿದ ಗ್ರಂಥವಾಗಿತ್ತದು. ರಫರನ್ಸ್ ಕೃತಿಗಳಿಲ್ಲದೆ, ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ ಕೇವಲ ಎಂಟು ಗಂಟೆಗಳಲ್ಲಿ ಈ ಕೃತಿ ಆಲಾ ಹಝ್ರತ್‌ರ ಮೂಲಕ ಮೂಡಿ ಬಂತು. ಇದು ಅವರ ಜ್ಞಾನ ವಿಸ್ಮಯತೆಯಾಚೆಗೆ ಅವರು ದಿವ್ಯ ಶಕ್ತಿಯನ್ನು ಹೊಂದಿದ್ದರು ಎನ್ನುವುದಕ್ಕಿರುವ ನಿದರ್ಶನವೂ ಹೌದು.


ಕನ್ಝುಲ್ ಉಲೂಂ ಎಂಬ ಹೆಸರಿನಲ್ಲಿ ಒಂದು ಸಂಪೂರ್ಣ ಖುರ್‌ಆನ್ ಅನುವಾದ ಗ್ರಂಥ ಆಲಾ ಹಝ್ರತ್‌ರ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಖುರ್‌ಆನಿನ ಒಳಾರ್ಥ ಸಮೃದ್ಧತೆಯನ್ನು ಸಂರಕ್ಷಿಸುವಲ್ಲಿ ಆಲಾ ಹಝ್ರತ್‌ರ ಕನ್ಝುಲ್ ಉಲೂಂ ಗ್ರಂಥವಾಗಿದೆ ಪ್ರಸಿದ್ಧವಾಗಿರುವುದು. ಅಗತ್ಯತೆ ತೋರುವಲ್ಲಿ ವಿವರಣೆಯನ್ನೂ ನೀಡಲಾಗಿದೆ. ಈ ಕೃತಿ ಇಂಗ್ಲಿಷ್ ಭಾಷೆಯಲ್ಲೂ ಅನುವಾದ ಕಂಡಿದೆ. 'ಅಲ್ ಅತ್ವಾಯನ್ನಬವಿಯ್ಯ ಫಿಲ್ ಫತಾವರ್ರಝ್ವಿಯ್ಯ' ಆಲಾ ಹಝ್ರತ್‌ರ ಮಾಸ್ಟರ್ ಪೀಸ್ ಕೃತಿ. 'ಫತಾವಾ ರಝ್ವಿಯ್ಯ' ಎಂಬ ಹೆಸರಿನಲ್ಲಿ ಪ್ರಸಿದ್ಧವಾದ, ಹನ್ನೆರಡು ಸಂಪುಟಗಳಲ್ಲಿ ಹೆಣೆದ ಈ ಕೃತಿ ಹನಫೀ ಮದ್ಹಬಿನ ಅಧಿಕೃತ ಗ್ರಂಥವಾಗಿ ಗಣನೆಯಲ್ಲಿದೆ. ಇನ್ಸೂರೆನ್ಸ್, ಮನಿ ಆರ್ಡರ್, ಬ್ಯಾಂಕಿಂಗ್, ಕರೆನ್ಸಿ ನೋಟುಗಳ ಕುರಿತ ಕಿರು ಪ್ರಬಂಧ ಕೃತಿಗಳನ್ನು ಅವರು ಹೊರ ತರುತ್ತಿದ್ದರು. ಉರ್ದು, ಪೇರ್ಶ್ಯನ್, ಅರಬಿ ಭಾಷೆಗಳಲ್ಲಿ ಕಾವ್ಯಗಳನ್ನು ರಚಿಸುತ್ತಿದ್ದ ಮಹಾನರ ಕಾವ್ಯ ಸಂಗ್ರಹಿತ ಕೃತಿಯಾಗಿದೆ 'ಹದಾಇಖೇ ಭಕ್ಷೀಸ್'.

ಅವರ ಗ್ರಂಥ ರಚನಾ ಪ್ರತಿಭೆ ಧಾರ್ಮಿಕ ವಿಷಯಗಳಲ್ಲಿ ಸೀಮಿತಗೊಂಡಿರಲಿಲ್ಲ. ಗೆಲಿಲಿಯೋ ಗೆಲಿಲಿ, ಐಸಕ್ ನ್ಯೂಟನ್ ರಂತಹ ಶಾಸ್ತ್ರಜ್ಞರ ನಿಯಮಗಳಲ್ಲಿ ಬದಲಾವಣೆಯ ಅಧ್ಯಯನಗಳು ಆಲಾ ಹಝ್ರತ್‌ರ ಮೂಲಕ ನಡೆದಿದೆ ಎಂದು ಅದರ ಕುರಿತು ಆಳ ಅಭ್ಯಸಿಸಿದವರ ಅಭಿಪ್ರಾಯ. ಆಯ್ದ ಭಾಷೆ ಉರ್ದು ಆದ ಕಾರಣ ತಿರಸ್ಕೃತಗೊಂಡಿತು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಸ್ಥಾಪಕರಲ್ಲಿ ಪ್ರಮುಖರಾದ ಅಹ್ಮದ್ ಕೋಯಾ ಶಾಲಿಯಾಥೀ ಆಲಾ ಹಝ್ರತ್‌ರ ಶಿಷ್ಯಶೃಂಖಲೆಯಲ್ಲಿ ಸೇರುತ್ತಾರೆ. ಹಿಜ್ರಾ 1340 ಸಫರ್ 25 (1921) ರಂದು ಮಹಾನರು ಮರಣ ಹೊಂದಿದರು.


ಒಬ್ಬ ಪ್ರಸಿದ್ಧ ಧಾರ್ಮಿಕ ವಿದ್ವಾಂಸ ಎನ್ನುವುದರಾಚೆಗೆ ಎಲ್ಲಾ ಕ್ಷೇತ್ರಗಳನ್ನೂ ಸ್ಪರ್ಶಿಸಿದ ಶ್ರೇಷ್ಠ ವ್ಯಕ್ತಿತ್ವ ಎಂಬ ನಿಟ್ಟಿನಲ್ಲಿ ಹತ್ತು ಹಲವು ಅಕಾಡೆಮಿಕ್ ಅಧ್ಯಯನಗಳು ಅವರ ಕುರಿತಾಗಿ ನಡೆದಿದೆ. ಅಲ್ ಅಝ್ಹರ್ ಯುನಿವರ್ಸಿಟಿ, ಕೊಲಂಬಿಯಾ ಯೂನಿವರ್ಸಿಟಿ, ಕರಾಚಿ ಯುನಿವರ್ಸಿಟಿ, ಅಲಿಘರ್ ಮುಸ್ಲಿಂ ಯುನಿವರ್ಸಿಟಿಗಳಲ್ಲಿ ಮೂವತ್ತರಷ್ಟು ಪಿ.ಎಚ್.ಡಿ ಅಧ್ಯಯನಗಳು ಆಲಾ ಹಝ್ರತ್‌ರ ಹಲವು ಕ್ಷೇತ್ರಗಳನ್ನು ಆಧರಿಸಿ ನಡೆದಿದೆ. ವಿವಿಧ ಯುನಿವರ್ಸಿಟಿಗಳಲ್ಲಿ ಆಲಾ ಹಝ್ರತ್‌ರ ಕುರಿತು ನಡೆದ ಅಧ್ಯಯನಗಳನ್ನು ಮಾತ್ರ ಚರ್ಚಿಸುವ ಡಾ. ಮುಹಮ್ಮದ್ ಮಸ್‌ಊದ್ ಅಹ್ಮದ್‌ರ 'ಅಲ್ ಇಮಾಂ ಅಹ್ಮದ್ ರಝಾ ಖಾನ್ ವಲ್ ಜಾಮಿಅತುಲ್ ಆಲಮಿಯ್ಯ' ಎಂಬ ಗ್ರಂಥ ಸಮಗ್ರವಾಗಿದೆ. ಆಲಾ ಹಝ್ರತ್‌ರ ಪೂರ್ವೋತ್ತರ ಕಾಲದಲ್ಲಿ ಇಷ್ಟೊಂದು ಧಾರ್ಮಿಕ ಕಿಚ್ಚು ಹಚ್ಚಿದ ವಿದ್ವಾಂಸರು ಅಪೂರ್ವ.


ಅನು: ಅನ್ಸೀಫ್ ಮುಈನೀ ಮಂಚಿ

Comments


bottom of page