ಇಂಡೋನೇಷ್ಯಾದ ಸೌಂದರ್ಯ; ಕೆರೇಟೋನ್ ಗ್ರ್ಯಾಂಡ್ ಮಸೀದಿ
- Asif Adany Al Mueeni
- Aug 19, 2024
- 1 min read

ನಗರ ಪ್ರದೇಶಗಳಲ್ಲಿ ಮಸೀದಿಗಳಿಂದ ಉಂಟಾಗುವ ಅಭಿವೃದ್ದಿಗಳಿಗೆ ದಿಲ್ಲಿಯ ಜುಮಾ ಮಸೀದಿ ಜ್ವಲಂತ ಸಾಕ್ಷಿ. ಅದೇ ರೀತಿ ಸೋಲೋದಲ್ಲಿರುವ ಕೆರೋಟೋನ್ ಮಸೀದಿಯನ್ನು ಕೂಡಾ ಕಾಣಬಹುದು. ಜಾವ ಪ್ರದೇಶಗಳನ್ನು ಆಳುತ್ತಿದ್ದ ಮಾದರಾಮ್ ರಾಜವಂಶ ಕರ್ತಸೂರದಿಂದ ಸುರಾಕಾರ್ತ (ಸೋಲೋ) ಗೆ ರಾಜಧಾನಿಯನ್ನು ಬದಲಾವಣೆ ಮಾಡಿದಾಗ ಈ ಮಸೀದಿಯನ್ನು ನಿರ್ಮಿಸಿದನು. ಇಂಡೋನೇಶ್ಯಾದ ಸಾಂಸ್ಕೃತಿಕ ರಾಜಧಾನಿಯೆಂದು ಸೋಲೋ ಪ್ರಸಿದ್ಧಿ ಪಡೆಯಲು ಕಾರಣ ಈ ಆಡಳಿತದ ಬದಲಾವಣೆ ಮತ್ತು ಮಸೀದಿ ನಿರ್ಮಾಣವೆಂದು ಇತಿಹಾಸವು ತಿಳಿಸುತ್ತದೆ.
ಮಾದರಾಂ ರಾಜ ಮೂರನೇ ಬುವೊನೋನ ನಿರ್ದೇಶನದ ಮೇರೆಗೆ ಮಸೀದಿಯ ಕಾಮಗಾರಿ ಆರಂಭವಾಯಿತು. ನಿರ್ಮಾಣಕ್ಕೆ ಉನ್ನತ ಗುಣಮಟ್ಟದ ತೇಗದ ಮರವನ್ನು ಬಳಸಲಾಯಿತು. ಹಳೆಯ ಜಾವನೀಸ್, ಡಚ್ ವಾಸ್ತು ಶಿಲ್ಪವನ್ನು ಬಳಸಿ ನಿರ್ಮಿಸಿದ ಕೆಲವು ಗೋಡೆಗಳಲ್ಲಿ ಬಂಗಾರದ ಬಣ್ಣವಿರುವ ಹೂವುಗಳನ್ನು ಕೆತ್ತನೆ ಮಾಡಲಾಗಿದೆ. ಈ ಕೆತ್ತನೆಗಳಿಗೆ ಏಳು ಕೆಜಿ ಬಂಗಾರವನ್ನು ಉಪಯೋಗಿಸಲಾಗಿದೆ ಎಂದು ಹೇಳಲಾಗುತ್ತದೆ. ಗುಂಬಝ್ ಗೆ ಹೊರತಾಗಿ ಮೇಲ್ಭಾಗದಲ್ಲಿ ಎತ್ತರಕ್ಕಿರುವ ಮುಸ್ತಖಾ(ಮೇಲ್ಛಾವಣಿ) ಯು ಇಂಡೋನೇಶ್ಯದ ಪರಂಪರೆಯನ್ನು ಗುರುತಿಸುತ್ತಿದೆ. ಬಿಸಿಲಿನ ಬೇಗೆಯನ್ನು ತಣಿಸುವ ಶಕ್ತಿ ಈ ಛಾವಣಿಗಿದೆ.

ನಾಗೂರು, ಮುತ್ತುಪೇಟೆ ಹಾಗೂ ದಕ್ಷಿಣ ಭಾರತದ ಮಝಾರಗಳಲ್ಲಿ ಕಾಣಸಿಗುವ (ನಗಾರ) ಡೋಲು ಇಲ್ಲಿಯೂ ಕಾಣಬಹುದು. ಪತಿನಿತ್ಯ ಎಲ್ಲಾ ನಮಾಝಿಗೆ ಬಾಂಗ್ ಮೊಳಗುವ ಮುನ್ನ ಒಂದು ನಿಮಿಷ ಇದನ್ನು ನಿರಂತರವಾಗಿ ಬಾರಿಸಲಾಗುತ್ತಾರೆ. ಕಿಯಾಯ್ ತೆಂಗೋರೋ ಎಂದಾಗಿದೆ ಬಹಾಸದಲ್ಲಿನ ಇದರ ಹೆಸರು. ಕೆರಟೋನ್ ಮಸೀದಿಗೆ ಗುಂಬಜ್ ಇಲ್ಲ. ಆದರೆ 16 ಮೀಟರಷ್ಟು ಎತ್ತರದ ಜೋಗೋಸ್ವೋರೋ (ಮಿನಾರ) ವನ್ನು ಮಸೀದಿಯ ದಕ್ಷಿಣ ಭಾಗದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಧ್ವನಿವರ್ಧಕವನ್ನು ಅಳವಡಿಸಲಾಗಿದೆ. ದೂರದ ಸ್ಥಳಗಳಿಗೆ ಅಝಾನಿನ ಶಬ್ಧವನ್ನು ತಲುಪಿಸಲು ಇದು ಸಹಾಯಕವಾಗಿದೆ.
ದಿಲ್ಲಿಯ ಜುಮಾ ಮಸೀದಿಯ ಹಾಗೆ ಎಲ್ಲಾ ಸಮಯದಲ್ಲೂ ಈ ಮಸೀದಿ ಜನನಿಬಿಡವಾಗಿರುವುದರಿಂದ ರಸ್ತೆ ಬದಿ ಅಂಗಡಿಗಳು ನಿತ್ಯವೂ ಜೀವಂತವಿರುತ್ತದೆ. ವಿಭಿನ್ನ ತಿಂಡಿಗಳು, ಪಾನೀಯಾಗಳು, ಕರಕೌಶಲ್ಯ ವಸ್ತುಗಳು ಸುಲಭವಾಗಿ ದೊರಕುತ್ತದೆ. ನಮ್ಮ ಮಸೀದಿ ಸಂದರ್ಶನ ರಬೀಉಲ್ ಅವ್ವಲ್ ತಿಂಗಳ ಹನ್ನೆರಡರಂದಾಗಿತ್ತು. ಹೊರಗಿನ ಮಸೀದಿಯ ದಕ್ಷಿಣ ಭಾಗದಲ್ಲಿ ಮೀಲಾದಿನ ಊಟ ಹಾಗೂ ಸಿಹಿ ತಿಂಡಿಗಳನ್ನು ಏರ್ಪಡಿಸಲಾಗಿತ್ತು. ಅದು ಚದುರಾಕೃತಿಯಲ್ಲಿದ್ದ ಮರದ ಒಂದು ಪಾತ್ರೆಯಲ್ಲಾಗಿತ್ತು. ಹೊರಗೆ ಮಹಿಳೆಯರು ಹಾಗೂ ಮಕ್ಕಳೂ ಕೂಡ ಇದ್ದರು.
ಮೂಲ: ಇಯಾಸ್ ಅಲಿ ನೂರಾನಿ
ಕನ್ನಡಕ್ಕೆ: ಆಸಿಫ್ ಅದನಿ, ಅಲ್ ಮುಈನಿ
Comments