ಅಜ್ಮೀರಿನ ಹೊಂಬೆಳಕು
- Ashraf Navoor

- Jan 7
- 2 min read

ಖಾಜಾ ಮುಈನುದ್ದೀನ್ ಚಿಸ್ತಿ ರಳಿಯಲ್ಲಾಹು ಅನ್ಹು ಆರನೇ ಶತಮಾನದಲ್ಲಿ ಇರಾನಿನ ಸಂಜರ್‌ನಿಂದ ಇಸ್ಲಾಮೀ ಪ್ರಭೋಧನೆಯ ದೌತ್ಯದೊಂದಿಗೆ ಭಾರತಕ್ಕೆ ತಲುಪಿದ ಸೂಫಿ ಸಂತ ಮತ್ತು ಭಾರತದಲ್ಲಿ ಇಸ್ಲಾಮಿನ ಬೆಳವಣಿಗೆಗೆ ಹೊಸ ಚೈತನ್ಯ ತುಂಬಿದವರು. ಇರಾನಿನ ಸಿಜಿಸ್ತಾನದಲ್ಲಿ ಜನಿಸಿದ ಖಾಜಾ ಖುರಾಸಾನಿನ ಪ್ರಮುಖ ವಿದ್ವಾಂಸರಾದ ಸಯ್ಯಿದ್ ಘಿಯಾಸುದ್ದೀನ್ ಹಾಗೂ ಮಾಜಿದಾ ಜೀವಿಯ ಮಗನಾಗಿ ಜನನ. ಧಾರ್ಮಿಕ ಹಿನ್ನೆಲೆಯಿರುವ ಖಾಜಾ ಬಾಲ್ಯದಲ್ಲೇ ತಫ್ಸೀರ್, ಹದೀಸ್, ಫಿಖ್‌ಹ್ ಕಲಿಕೆ ಅಭ್ಯಸಿಸಿದರು.
ಚಿಸ್ತೀ ಪರಂಪರೆ
ಭಾರತದ ಸೂಫಿ ಪರಂಪರೆಗಳಲ್ಲಿ ಚಿಸ್ತಿಯ್ಯ್ ಸಿಲ್‌ಸಿಲ ಪ್ರಸಿದ್ಧಿ ಪಡೆದಿದೆ. ಕ್ರಿ.ಶ 930 ರಲ್ಲಿ ಅಫ್ಘಾನಿಸ್ತಾನದ ಹೆರಾತ್ ಬಳಿಯ ಚಿಸ್ತಿ ಎಂಬ ಗ್ರಾಮದಲ್ಲಿ ವಾಸವಿದ್ದ ಖಾಜಾ ಅಬೂ ಇಸ್ಹಾಖ್ (ರ) ಅವರಿಂದ ಈ ಪರಂಪರೆ ಮುಂದುವರೆಯುತ್ತದೆ. ಇದು ತಾಳ್ಮೆ, ಪ್ರೀತಿ ಮತ್ತು ಸದ್ಗುಣಗಳಿಗೆ ಹೆಸರುವಾಸಿ. ಈ ಪರಂಪರೆಯಲ್ಲಿ ಸಾಗುವವರಿಗೆ 'ಚಿಸ್ತಿ' ಎಂದು ಹಝ್ರತ್ ಖಾಜಾ ಮುರ್ಷದ್ ಅಲಿಯವರು ಹಝ್ರತ್ ಖಾಜಾ ಅಬೂ ಇಸ್ಹಾಖ್ (ರ) ರನ್ನು ಬೈಅತ್ ಮಾಡಿ ಘೋಷಿಸಿದರು.
ಇದೇ ಸಿಲ್‌ಸಿಲದಲ್ಲಿ ಬರುವ ಖಾಜಾ ಮುಈನುದ್ದೀನ್ ಚಿಸ್ತಿ (ರ) ಹನ್ನೆರಡೇ ಶತಮಾನದ ಮಧ್ಯಭಾಗದಲ್ಲಿ ಅಜ್ಮೀರ್, ಲಾಹೋರ್ ಸೇರಿದಂತೆ ಭಾರತದಾದ್ಯಂತ ಹಲವು ಭಾಗಗಳಲ್ಲಿ ಲಕ್ಷಾಂತರ ಜನರನ್ನು ಸನ್ಮಾರ್ಗಕ್ಕೆ ಕರೆತಂದರು.
ಲಂಗರ್ ಖಾನ
ದಕ್ಷಿಣ ಏಷ್ಯಾ ಭಾಗದ ಸೂಫಿಗಳ ಪರಂಪರೆಯಾದ ಲಂಗರ್ ಖಾನ ಧರ್ಮ, ಜಾತಿ ಮೀರಿ ಅಗತ್ಯ ಅನ್ನ ಪಾನೀಯ ನೀಡುವ ಕ್ರಮ. ಇದು ಚಿಸ್ತಿ ಪರಂಪರೆಯ ಕೊಡುಗೆ. ಅಜ್ಮೀರಿನ ಎತ್ತರದ ಬಾಗಿಲ ಮೂಲಕ ಪ್ರವೇಶಿಸಿ ಲಂಗರ್ ಖಾನದ ದಾರಿಯಾಗಿ ಮುಂದೆ ಸಾಗಿದರೆ ಸಣ್ಣ ಕೊಠಡಿ ಹಾಗೂ ಪ್ರಾಂಗಣ ಕಾಣಸಿಗುತ್ತವೆ. ಈ ಪ್ರಾಂಗಣದಲ್ಲಿ ದೊಡ್ಡ ಲೋಹದ ಪಾತ್ರೆಯಿದೆ. ದಿನಂಪ್ರತಿ ಬಡವರಿಗೆ ಊಟ ಹಾಗೂ ಬಾರ್ಲಿಯನ್ನು ಬೇಯಿಸಿ ನೀಡುವ ಈ ಪಾತ್ರೆಯು ಅಕ್ಬರ್ ರಾಜನ ಕೊಡುಗೆಯಾಗಿದೆ. 'ಚಿತ್ತೋಡ್ ಎಂಬಲ್ಲಿ ಸೈನ್ಯಕ್ಕೆ ವಿಜಯ ಪ್ರಾಪ್ತಿಯಾದರೆ ಅಜ್ಮೀರಿಗೆ ಕಾಲ್ನಡಿಗೆಯಲ್ಲಿ ಸಾಗುತ್ತೇನೆ. ಅಲ್ಲಿಗೆ ದೊಡ್ಡ ಪಾತ್ರೆಯನ್ನು ಹರಕೆಯಾಗಿ ನೀಡುತ್ತೇನೆ' ಎಂದು ಅಕ್ಟರ್ ಚಕ್ರವರ್ತಿ ಶಪಥ ಮಾಡಿದ್ದ. ಹಿ. 974 ರಲ್ಲಿ ಅಜ್ಮೀರಿಗೆ ತಲುಪಿ 4 ಸಾವಿರ ಕೆಜಿ ಅಕ್ಕಿಯನ್ನು ಬೇಯಿಸುವ ದೊಡ್ಡ ಪಾತ್ರೆಯನ್ನು ಕಾಣಿಕೆಯಾಗಿ ನೀಡಿದ. ಹಿ. 1022 ರಲ್ಲಿ ಸುಲ್ತಾನ್ ನೂರುದ್ದೀನ್ ಜಹಾಂಗೀರ್ ಆಗ್ರಾದಲ್ಲಿ ನಿರ್ಮಿಸಿದ ದೊಡ್ಡ ಪಾತ್ರೆಯನ್ನು ಅಜ್ಮೀರಿಗೆ ಕೊಂಡು ಹೋಗಿ ಐದು ಸಾವಿರ ಬಡವರಿಗೆ ಇದರಿಂದ ಅನ್ನ ವಿತರಣೆ ಮಾಡಿದರು.
ಪೈಗಂಬರ್ ನೀಡಿದ ದಾಳಿಂಬೆ [ಕ್ರಿ.ಶ 1189]
ಖಾಜಾ ಗರೀಬ್ ನವಾಝ್ (ರ) ಮದೀನಾದಲ್ಲಿ ತಂಗಿದ್ದರು. ಪವಿತ್ರ ರೌಳಾದಿಂದ ಒಂದು ಅಶರೀರವಾಣಿ 'ಓ ಮುಈನುದ್ದೀನ್, ನಾನು ಪ್ರಚುರಪಡಿಸಿದ ಧರ್ಮದ ಸಹಾಯಕ ತಾವು. ನೀವು ಭಾರತಕ್ಕೆ ಹೋಗಬೇಕು. ಅಲ್ಲಿ ಅಜ್ಮೀರ್ ಎಂಬ ಸ್ಥಳವಿದೆ. ಅದನ್ನು ಕೇಂದ್ರವಾಗಿಟ್ಟುಕೊಂಡು ಧರ್ಮ ಪ್ರಚಾರ ಮಾಡಬೇಕು'. ಈ ಸಂದೇಶದ ಬಳಿಕ ರೌಳಾ ಶರೀಫಿನಿಂದ ಚಿಸ್ತಿ (ರ) ರವರಿಗೆ ಒಂದು ದಾಳಿಂಬೆ ದೊರೆಯಿತು. ಆ ಹಣ್ಣಲ್ಲಿ ಈ ರೀತಿ ಬರೆದಿಡಲಾಗಿತ್ತು. 'ನಿನಗೆ ಇದನ್ನು ಉಪಯೋಗಿಸಿ ಹೋಗಲು ಸಾಧ್ಯ' ಖಾಜಾರಿಗೆ ಈ ದಾಳಿಂಬೆ ಹಣ್ಣಿನಿಂದ ಪೂರ್ವ ಪಶ್ಚಿಮ ದಿಕ್ಕುಗಳ ದರ್ಶನವಾಯಿತು. ಜೊತೆಗೆ ಅಜ್ಮೀರ್ ಪಟ್ಟಣ ಹಾಗೂ ಪರ್ವತಗಳೂ ಆ ದಾಳಿಂಬೆಯಿಂದ ನೋಡಲು ಸಾಧ್ಯವಾಯಿತು.
ಹಬೀಬುಲ್ಲಾಹಿ ಮಾತ ಫೀ ಹುಬ್ಬಿಲ್ಲಾಹ್
ಹಿಜರಿ ಶಕೆ 627 ರಜಬ್ 6 (ಕ್ರಿ. 1230, ಮೇ 31) ಸೋಮವಾರ ರಾತ್ರಿ ಇಶಾ ನಮಾಝಿನ ಬಳಿಕ ಚಿಸ್ತಿ (ರ) ರವರ ಕೋಣೆಯ ಬಾಗಿಲು ಮುಚ್ಚಿದ್ದವು. ಅಂದು ಎಂದಿನಂತೆ ಸೇವಕನಿಗೆ ಕೋಣೆಯೊಳಗೆ ನಿದ್ರಿಸಲು ಅವಕಾಶ ಸಿಗಲಿಲ್ಲ. ಸೇವಕ ರಾತ್ರಿ ಪೂರ್ತಿ ಹೊರಗೆ ಕಾದು ನಿಂತಿದ್ದ. ಈ ವೇಳೆಯಲ್ಲಿ ಕೋಣೆಯೊಳಗಿನಿಂದ ದ್ಸಿಕ್ರ್, ಶಬ್ದಗಳ ಧ್ವನಿ ಕೇಳಿ ಬರುತ್ತಿತ್ತು. ರಾತ್ರಿಯ ಕೊನೆಯ ಘಳಿಗೆಯಲ್ಲಿ ಆ ಶಬ್ದ ನಿಂತಿತು. ಸುಬ್‌ಹ್ ನಮಾಝಿಗೆ ಸಮಯವಾಯಿತು. ಆದರೆ ಬಾಗಿಲು ತೆರೆಯಲಿಲ್ಲ. ಭಯಭೀತರಾಗಿ ಸೇವಕರು ಬಾಗಿಲು ಮುರಿದು ಒಳ ಹೊಕ್ಕರು. ಖಾಜಾರ ಹಣೆಯಲ್ಲಿ 'ಇವರು ಅಲ್ಲಾಹನ ಪ್ರೀತಿಯಲಿ ಮರಣಹೊಂದಿದ ಪ್ರಿಯಮಿತ್ರ' (ಹಬೀಬುಲ್ಲಾಹಿ ಮಾತ ಫೀ ಹುಬ್ಬಿಲ್ಲಾಹ್) ಎಂದು ಬರೆಯಲಾಗಿತ್ತು. ಆದಾಗಲೇ ಖಾಜಾ (ರ) ಇಹಲೋಕ ತ್ಯಜಿಸಿದ್ದರು. ಆ ವೇಳೆ ಅವರಿಗೆ 97 ವರ್ಷ ಪ್ರಾಯ. ಅವರನ್ನು ವಿಶೇಷ ಕೊಠಡಿಯಲ್ಲಿ ದಫನ್ ಮಾಡಲಾಯಿತು. ಒಟ್ಟು ನಲವತ್ತು ವರ್ಷ ಖಾಜಾ ಅಜ್ಮೀರಿನಲ್ಲಿ ವಾಸವಾಗಿದ್ದರು.
ಉರೂಸ್
ಉರೂಸ್ ಎಂದರೆ ಸಜ್ಜನರು ಮರಣ ಹೊಂದಿದ ದಿನದಂದು ಮಾಡುವ ಸಾಮೂಹಿಕ ಝಿಯಾರತ್. ರಜಬ್ ಆರರಂದು ಅಜ್ಮೀರಿನಲ್ಲಿ ವಿಜೃಂಭಣೆಯಿಂದ ನಡೆಯುವ ಉರೂಸಿಗಾಗಿ ಜುಮಾದಲ್ ಅವ್ವಲಿನ ಪ್ರಾರಂಭದಲ್ಲೇ ಸೂಫಿಗಳು ಅಲ್ಲಿಗೆ ಜಮಾಯಿಸುತ್ತಾರೆ. ಜುಮಾದಲ್ ಆಖಿರ್ ಇಪ್ಪತೈದಕ್ಕೆ ಪತಾಕೆ ಹಾರಿಸುತ್ತಾರೆ. ರಜಬ್ ಒಂದನೇ ರಾತ್ರಿಯಿಂದ ಉರೂಸ್ ಕಾರ್ಯಕ್ರಮ ನಡೆಯುತ್ತದೆ. ರಜಬ್ ಆರರಂದು ಬೆಳಿಗ್ಗೆ 6 ರಿಂದ 8 ಗಂಟೆಯ ಒಳಗಾಗಿ ಪನ್ನೀರಿನಿಂದ ದರ್ಗಾವನ್ನು ಶುಚಿಗೊಳಿಸಲಾಗುತ್ತದೆ. 8-9 ಗಂಟೆಯ ಮಧ್ಯೆ ಪ್ರಾರಂಭಗೊಳ್ಳುವ ಖುರ್‌ಆನ್ ಪಾರಾಯಣ ಕಾರ್ಯಕ್ರಮ 11 ಗಂಟೆಗೆ ಮುಕ್ತಾಯಗೊಂಡು ಆಕರ್ಷಕವಾದ ಖವಾಲಿ ಪ್ರಾರಂಭವಾಗುತ್ತದೆ. ಸರಿಸುಮಾರು ಒಂದೂವರೆ ಗಂಟೆ ಫಾತಿಹಾ ಓದಿ ದರ್ಗಾದ ಸುತ್ತಲಿನ ಅಂಗಳದಲ್ಲಿ ಪನ್ನೀರನ್ನು ರಾಚಿಸುವುದರೊಂದಿಗೆ ಉರೂಸ್ ಸಮಾರಂಭ ಕೊನೆಗೊಳ್ಳುತ್ತದೆ.
~ ಅಶ್ರಫ್ ನಾವೂರು






Comments