'ಅಲ್-ಮುಅ್ ಜಮ್'; ಪೈಗಂಬರರ ಅಧ್ಯಯನಕ್ಕೆ ಸೂಕ್ತ ದೀವಿಗೆ
- Izzuddeen Mueeni, Kannur
- Sep 8, 2024
- 2 min read

ಪ್ರಪಂಚದಲ್ಲಿ ಹೆಚ್ಚು ಚರ್ಚೆಯಾದ, ಇಂದಿಗೂ ಚರ್ಚೆಯಾಗುತ್ತಿರುವ ಏಕಮಾತ್ರ ವ್ಯಕ್ತಿ ಮುಹಮ್ಮದ್ ಪೈಗಂಬರ್ (ಸ) ಎಂಬುದು ನಿಸ್ಸಂಶಯ. ಅಧ್ಯಯನಶೀಲ ಮನಸ್ಸಿರುವ ಪ್ರತಿಯೊಬ್ಬರಿಗೂ ಪೈಗಂಬರ್ ಮುಹಮ್ಮದ್ (ಸ)ರ ಅರುವತ್ತಮೂರು ವರ್ಷದ ಜೀವನ ತೆರೆದ ಪುಸ್ತಕ. 'ಶಮಾಈಲುನ್ನಬಿ' ಎಂಬ ಸೌಂದರ್ಯ ಶಾಸ್ತ್ರ, 'ಸೀರತುನ್ನಬಿ' ರಚನೆಯ ಮೂಲಕ ವ್ಯಕ್ತಿ ಚರಿತ್ರೆ, ವಿಶಾಲವಾದ ಹದೀಸ್ ಶಾಸ್ತ್ರದ ಜಗತ್ತು ಇವೆಲ್ಲವೂ ಪ್ರವಾದಿ (ಸ)ರನ್ನು ಅಭ್ಯಸಿಸಲು ಇಚ್ಚಿಸುವವರ ಅಧ್ಯಯನಕ್ಕಿರುವ ಮುನ್ನುಡಿ. ಹದೀಸ್ ಶಾಸ್ತ್ರದ ವಿಶಾಲ ಅಧ್ಯಯಯನದಾಚೆಗೆ ಅದನ್ನು ಬರೆದಿಟ್ಟ ನಿರೂಪಕರಿಗಾಗಿರುವ 'ಅಸ್ಹಾಬುರ್ರಿಜಾಲ್', ಆ ನಿರೂಪಕರಿಗಿರುವ ಸ್ವೀಕಾರಾರ್ಹ ಷರತ್ತುಗಳು ಪ್ರವಾದಿ (ಸ)ರು ಆಳ ಅಧ್ಯಯನದ ಮೂಲವೆಂದು ಸಾರಿ ಹೇಳುತ್ತಿವೆ. ಈ ನಿಟ್ಟಿನಲ್ಲಿ ಆಧುನಿಕ ವಿದ್ವಾಂಸ 'ಸ್ವಲಾಹುದ್ದೀನುಲ್ ಮುನಜ್ಜಿದ್' ಬರೆದಿರುವ 'ಮುಅ್ ಜಮ್ ಮಾ ಉಲ್ಲಿಫ ಅನ್ ರಸೂಲಿಲ್ಲಾ (ಸ)' ಎಂಬ ಸಂಶೋಧನಾ ಪ್ರಬಂಧ ಗಮನಾರ್ಹ.
'ಅಲ್-ಮುಅ್ ಜಮ್' ಪೈಗಂಬರ್ (ಸ)ರ ಕುರಿತಾಗಿರುವ ಅಧ್ಯಯನಗಳ ಸಂಹಾರ. ಅವರ ಕಾಲದವರೆಗೆ ಪೈಗಂಬರ್ (ಸ)ರ ಕುರಿತಾಗಿ ರಚಿಸಲ್ಪಟ್ಟ ಅಧಿಕೃತ ಕೃತಿಗಳ ಹೆಸರು ಮತ್ತು ಕರ್ತೃಗಳ ಹೆಸರುಗಳು ಸಂಯೋಜಿಸಿ ತಯಾರಿಸಿದ ಕಿರು ಗ್ರಂಥ. ಈ ಕೃತಿಯ ರಚನಾತ್ಮಕ ಶೈಲಿ ಅದ್ಭುತ. ಹನ್ನೆರಡು ಮುಖ್ಯ ಶೀರ್ಷಿಕೆಯಲ್ಲಿ ನೂರಾಮುವತ್ತರಷ್ಟು ಉಪತಲೆಬರಹದೊಂದಿಗೆ ಇದರ ಪೀಠಿಕೆ ಪೋನಿಸಲ್ಪಟ್ಟಿದೆ. ಅರಬ್ ದೇಶದ ಜಾಹಿಲಿಯ್ಯ ಕಾಲಗಟ್ಟದಿಂದ ಪ್ರವಾದಿ (ಸ)ರು ಜಗತ್ತಿಗೆ ಮಾರ್ಗದರ್ಶಕರಾಗಿ ಸಮರ್ಪಿಸಿದ ನಕ್ಷತ್ರ ಸಮಾನರಾದ ಅನುಚರರವರೆಗಿನ ಅಧ್ಯಯನ ಗ್ರಂಥಗಳ ಪೀಠಿಕೆ ಪರಿಚಯಿಸುವ ಶ್ರಮ 'ಅಲ್-ಮುಅ್ ಜಮ್' ನಡೆಸುತ್ತಿದೆ.
ಪ್ರವಾದೀ ಪೂರ್ವ ಯುಗವನ್ನು ವಿಸ್ತಾರವಾಗಿ ವಿವರಿಸುವ 'ಅಲ್ ಇನ್ಬಿಸಾಖ್' ನಿಂದ ಪ್ರಾರಂಭಗೊಂಡು, ಪ್ರವಾದಿ (ಸ) ರ ಖುರೈಷಿ ಪರಂಪರೆ, ಜನನ, ಮುಂಜಿಕರ್ಮ, ಲಾಲನೆ ಪಾಲನೆ, ಪೋಷಣೆಯನ್ನು ಬೆಳಕು ಚೆಲ್ಲುವ ಗ್ರಂಥಗಳ ಪಟ್ಟಿಗೆ ಮೊದಲ ಶಿರ್ಷಿಕೆ ಬೆಳಕು ಚೆಲ್ಲುತ್ತದೆ. ಕುರ್ಆನ್, ವಹಿಯ್ಯ್, ಇಸ್ರಾಅ-ಮಿಅರಾಜ್, ಹಿಜ್ರಾ, ದಾರುಲ್ ಹಿಜ್ರಾ, ಮದೀನಾ ರಾಷ್ಟ್ರ ನಿರ್ಮಾನ , ಸೀರತುನ್ನಬಿ, ಪ್ರವಾದೀ ಅನುಚರರು, ಸಹಧರ್ಮಿನಿಯರು, ಸಂಪತ್ತು, ಮಸೀದಿಗಳು, ರೌಳಾ ಶರೀಫ್, ಸ್ವಲಾತಿನ ಮಹತ್ವ ಹೀಗೆ ಅಧ್ಯಯನ ಗ್ರಂಥಗಳ ಸಾಲು ಮುಂದುವರಿಯುತ್ತದೆ.
ನುಬುವ್ವತ್ತಿನ ವಿವಿಧ ಪುರಾವೆಗಳು ಹೇಳುವ ಹತ್ತರಷ್ಟು ಅಧಿಕೃತ ಗ್ರಂಥಗಳು ನುಬುವತ್ತನ್ನು ನಿಷೇದಿಸುವವರಿಗೆ 'ಅಲ್ ಮುಅ್ ಜಮ್' ಪರಿಚಯಿಸುತ್ತದೆ.
ಪ್ರವಾದಿ (ಸ )ರ ಶ್ರೇಷ್ಠತೆ, ವ್ಯಕ್ತಿತ್ವ, ಹಿತೋಪದೇಷ ಮಾತುಗಳು, ಉದಾಹರಣೆಗಳು, ಉಪಮೆಗಳು, ತಮಾಷೆಗಳು, ಬಳಸಿದ ಪದಗಳ ಸಂಗ್ರಹ, ಹೇಳಿದ ದ್ಸಿಕ್ರ್ ಗಳ ಸಂಗ್ರಹ, ಸ್ವದಖ, ತರಗತಿ ಮಂಡನೆಯ ಗ್ರಂಥಗಳ ರಾಶಿಯೇ ಇಲ್ಲಿ ಕಾಣುತ್ತದೆ. ಪ್ರವಾದಿ (ಸ)ರ ಧೈರ್ಯ, ಮಿಲಿಟರಿ ತಂತ್ರ, ಕುದುರೆ ಸವಾರಿ, ತೀರ್ಪುಗಳು, ಯುದ್ಧಗಳು, ಶಾಂತಿ ಒಪ್ಪಂದ , ಶತ್ರುಗಳ ಆಕ್ರಮಣ , ಸಹಾಯಭ್ಯರ್ತನೆ ಮಾಡಿದವರು, ಶಫಾತ್ತಿಗಾಗಿ ಬೇಡಿದವರು , ಪ್ರವಾದಿ (ಸ) ರನ್ನು ಕನಸಿನಲ್ಲಿ ಕಂಡವರ ಕುರಿತಾಗಿರುವ ಗ್ರಂಥಗಳು ಹೀಗೆ ಗ್ರಂಥಗಳ ಪಟ್ಟಿ ಅನಂತವಾಗಿ ಹೋಗುತ್ತದೆ.
'ಅಲ್-ಮುಅ್ ಜಮ್' ಕೇವಲ ಒಬ್ಬ ಸಂಶೋಧಕನ ಅಧಿಕೃತ ಅರೇಬಿಕ್ ಗ್ರಂಥ ರಚನೆ ಮಾತ್ರ. ಆದರೆ ಜಗತ್ತಿನ ಕೊಟಿಗಟ್ಟಲೆ ಸಂಶೋಧಕರು, ನಾನಾ ಭಾಷೆಯಲ್ಲಿರುವ ಗ್ರಂಥಗಳು ಎಷ್ಟಿರಬಹುದೆಂದು ಊಹಿಸಲಸಾಧ್ಯವಾದ ರೀತಿಯಲ್ಲಿ ಪ್ರವಾದಿ (ಸ )ಕುರಿತಿರುವ ಅಧ್ಯಯನಗಳು ನಡೆದಿದ್ದರೆ, ಅಕ್ಷರಶಃ ಆ ಸೃಷ್ಟಿ ಶ್ರೇಷ್ಠರು ಅಸಾಮಾನ್ಯರೇ ಸರಿ.
ಸೀರತ್ತನ್ನಬಿಯೆಂಬ ಒಂದೇ ಶಾಖೆಯಲ್ಲಿ ಮುನ್ನೂರ ಹತ್ತು ಅಧಿಕೃತ ಅರೆಬಿಕ್ ಗ್ರಂಥಗಳನ್ನು 'ಅಲ್-ಮುಅ್ ಜಮ್' ಪರಿಚಯಿಸುತ್ತದೆ.
ಪೈಗಂಬರ್ (ಸ )ಮರು ಉಪಯೋಗಿಸಿದ ವಿಸ್ವಾಕ್, ಪಾತ್ರೆಗಳು, ಕಾಡಿಕೋಲು, ತಲೆಗಡ್ಡದಲ್ಲಿ ನೆರೆತಿರುವ ಪವಿತ್ರ ಕೇಶಗಳೆಷ್ಟು , ಚಪ್ಪಲಿ, ನೆರಳು ನೀಡಿದ ಮರಗಳು, ಬರೆದಿಡಲಾರ ವಸ್ತುಗಳನ್ನೆಲ್ಲ ಉಲ್ಲೇಖಿಸಲ್ಪಟ್ಟಿದೆ ಎನ್ನುವಾಗ ಆ ಮಹಾ ಮನುಷ್ಯ ಅವರ್ಣನೀಯ. ವಿಶಾಲವಾಗಿ ಪ್ರವಾದಿ (ಸ) ರ ಕುರಿತಾಗಿರುವ ಗ್ರಂಥಗಳನ್ನು ಪರಿಚಯಿಸುವ ಈ ಕೃತಿ ಸಂಶೋಧಕರಿಗೆ ದೀವಿಗೆಯಾಗಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದರ ಪೂರ್ವ ಪೀಠಿಕೆಯಲ್ಲಿ ಸ್ವಲಾಹುದ್ದೀನುಲ್ ಮುನಜ್ಜಿದ್ದ್ ಹೇಳುವ ಮಾತಿದೆ "ಈ ಕೃತಿಯನ್ನು ರಚಿಸಲು ಮೂರುವರ್ಷ ವ್ಯಯಿಸಿದೆ. ಪ್ರವಾದಿ (ಸ)ರ ಅಧಿಕೃತ ಅದ್ಯಯನಗಳು, ಕೃತಿಗಳು, ಸಂಶೋಧನೆಗಳು ದಿನನಿತ್ಯ ಹೆಚ್ಚುತ್ತಾ ಹೋಗುತ್ತಿತ್ತು. ಆ ಮಹಾ ಮಹೀಶಿಯ ಜೀವನದಲ್ಲಿ ಸಾರಿದ ಆಶಯಗಳು ಅನಂತ". 2010 ರಲ್ಲಿ ಮರಣಹೊಂದಿದ ಸ್ವಲಾಹುದ್ದೀನುಲ್ ಮುನಜ್ಜಿದರನ್ನು 'ಅಬೂ ಮಖ್ತೂತತುಲ್ ಅರಬ್' ಎಂದು ಆಧುನಿಕ ಜಗತ್ತು ಕರೆಯುತ್ತದೆ. ಪೈಗಂಬರ್ (ಸ) ಕುರಿತಾಗಿರುವ ಗ್ರಂಥಗಳು ಕೊನೆಗೊಂಡಿಲ್ಲ. 'ಅಲ್-ಮುಅ್ ಜಮ್' ಒಬ್ಬ ವ್ಯಕ್ತಿಯ ಸಂಶೋಧನಾ ಪ್ರಬಂಧವಾದರೆ ಎಲ್ಲಾ ಕಾಲದಲ್ಲಿ ನಡೆದ ಸಂಶೋಧನೆಗಳಿಗೆ ಗಡಿ ನಿರ್ಮಿಸಲು ಸಾಧ್ಯವಿಲ್ಲವೆಂದು ಮನದಟ್ಟು ಮಾಡಿದ ಸುನ್ನಿಗಳು ಮುಹಮ್ಮದ್ ನಬಿಯನ್ನು 'ಅಶ್ರಫುಲ್ ಖಲ್ಕ್' (ಸೃಷ್ಟಿ ಶ್ರೇಷ್ಠ) ಎಂದು ಕರೆದರು.
ಸಾವಿರದ ನಾಲ್ಕುನೂರ ಎಪ್ಪತ್ತ ಒಂಬತ್ತರಷ್ಟು ವಿದ್ವಾಂಸರು ರಚಿಸಿರುವ ಸಹಸ್ರಾರು ಗ್ರಂಥಗಳ ಹೆಸರುಗಳನ್ನು ಬರೆದಿಟ್ಟ ಸ್ವಲಾಹುದ್ದೀನುಲ್ ಮುನಜ್ಜಿದರ ಸಾಹಿತ್ಯ ಸೇವೆ ಶ್ಲಾಘನಾರ್ಹ.
~ ಇಝ್ಝುದ್ದೀನ್ ಮುಈನಿ ಕಣ್ಣೂರು
Comments