ಸೃಷ್ಟಿಕರ್ತನೊಂದಿಗಿನ ಅಚಂಚಲ ವಿಶ್ವಾಸ: ಒಂದು ಜಿನ್ನಿನ ಕಥೆ
- Shahul Hameed Mueeni Al Adany

- Sep 26
- 1 min read

ಜೀಲಾನಿ ಶೈಖರ ಜೀವನ ಪಾಠ-02
ಸೃಷ್ಟಿಕರ್ತನೊಂದಿಗಿನ ಅಚಂಚಲ ವಿಶ್ವಾಸ: ಒಂದು ಜಿನ್ನಿನ ಕಥೆ
ಮಹಾನರಾದ ಶೈಖ್ ಮುಹ್ಯುದ್ದೀನ್ ಜೀಲಾನಿರವರ ಮದ್ರಸತು ನಿಳಾಮಿಯ್ಯ ಸಂಸ್ಥೆಯಲ್ಲಿ ನಡೆದ ತರಗತಿಯಲ್ಲಿ ವಿದ್ವಾಂಸರೂ, ಸೂಫಿವರ್ಯರುಗಳೂ ಸೇರಿದ್ದರು. ‘ಸೃಷ್ಟಿಕರ್ತನ ತೀರ್ಮಾನ (ಖದ್ರ್- ಖಳಾ)’ಎಂಬುದಾಗಿತ್ತು ಮಹಾನರ ಚರ್ಚಾವಿಷಯ. ಚರ್ಚಾಮಧ್ಯೆ ಮೇಲ್ಛಾವಣಿಯಿಂದ ಸರ್ಪವೊಂದು ಕೆಳಕ್ಕೆ ಬಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದವರೆಲ್ಲರೂ ಹೆದರಿ ಓಟಕ್ಕಿತ್ತರು. ಮಹಾನರು ಹಾಗೆಯೇ ಅಲ್ಲೇ ಕುಳಿತರು. ಸರ್ಪವು ಜೀಲಾನಿ ಶೈಖರ ಧಿರಿಸಿನ ಪಟ್ಟಿಯಿಂದ ಹತ್ತಿ, ಕುತ್ತಿಗೆಗೆ ಸುತ್ತಿ, ತಲೆಹೊರಹಾಕಿತು. ಆದರೂ ಮಹಾನರು ತನ್ನ ಕೂರುವಿಕೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಿಲ್ಲ. ಅಲ್ಪಸಮಯದ ಬಳಿಕ ಸರ್ಪವು ಭೂಮಿಗಿಳಿದು, ತನ್ನ ಬಾಲವನ್ನು ನೆಲಕ್ಕೂರಿ ಮಹಾನರೊಂದಿಗೆ ಮಾತನಾಡಲು ಪ್ರಾರಂಭಿಸಿತು. ಜೀಲಾನಿ ಶೈಖರೂ ಸರ್ಪದೊಂದಿಗೆ ಪ್ರತಿಕ್ರಿಯೆಯ ಮಾತುಗಳನ್ನಾಡಿದರು.
ಅಲ್ಲಿ ನೆರೆದ ಯಾವೊಬ್ಬರಿಗೂ ತಿಳಿಯದ ರೀತಿಯಲ್ಲಾಗಿತ್ತು ಅವರಿಬ್ಬರ ಸಂಭಾಷಣೆ. ಸರ್ಪವು ಮರಳಿದ ಬಳಿಕ ಎಲ್ಲರೂ ಮಹಾನರ ಸಮೀಪ ಧಾವಿಸಿದರು. ಸರ್ಪವು ಮಹಾನರೊಂದಿಗೆ ಆಡಿದ ಮಾತುಗಳ ಕುರಿತಾಗಿ ಅವರು ಆಶ್ಚರ್ಯಚಕಿತರಾಗಿ ಕೇಳಿದರು. ಶೈಖರು ಹೀಗೆ ಹೇಳಿದರು: “ನನ್ನೊಂದಿಗೆ ಸರ್ಪ ಹೇಳಿತು: ‘ಔಲಿಯಾಗಳಲ್ಲಿ ಹಲವಾರು ಮಂದಿಯನ್ನು ನಾನು ಪರೀಕ್ಷೆಗೊಳಪಡಿಸಿದ್ದೇನೆ. ಆದರೆ ತಾವು ಕುಳಿತಂತೆ ಅತ್ಯಂತ ಧೈರ್ಯದಿಂದ ಕುಳಿತ ಯಾವೊಬ್ಬರನ್ನೂ ನಾನು ಕಂಡಿಲ್ಲ.’ ಆಗ ನಾನು ಹೇಳಿದೆ:‘ನಾನು ಮಾತನಾಡುತ್ತಿದ್ದುದು ಸೃಷ್ಟಿಕರ್ತನ ತೀರ್ಮಾನದ ಕುರಿತಾಗಿತ್ತು. ಆ ತೀರ್ಮಾನವಾಗಿದೆ ನಿನ್ನ ಸಂಚಾರಕ್ಕೂ ಕಾರಣವಾಗಿರುವುದು. ನೀನು ಅಂತಹ ಒಂದು ಸಣ್ಣ ಹುಳು ಮಾತ್ರ.’
ಶೈಖ್ ಜೀಲಾನಿ ರಳಿಯಲ್ಲಾಹು ಅನ್ಹುರವರು ಹೇಳಿದರು: ಕೆಲಕಾಲಗಳ ಬಳಿಕ ಆ ಸರ್ಪವು ನಾನು ನಮಾಝಿನಲ್ಲಿದ್ದಾಗ ಒಮ್ಮೆ ನನ್ನನ್ನು ಸಮೀಪಿಸಿತು. ಸಾಷ್ಟಾಂಗದ ಸ್ಥಳದಲ್ಲಿ ಬಾಯಿ ತೆರೆದು ನಿಂತಿದ್ದ ಸರ್ಪವನ್ನು ಸಾಷ್ಟಾಂಗದ ಸಮಯದಲ್ಲಿ ಬದಿಗೆ ಸರಿಸಿದೆ. ಆಗ ಅದು ನನ್ನ ಕುತ್ತಿಗೆಗೆ ಸುತ್ತಿಕೊಂಡಿತು. ನನ್ನ ಧಿರಿಸಿನ ಒಂದು ಕೈಯ ಮೂಲಕ ಒಳಹೋಗಿ ಮತ್ತೊಂದು ಕೈಯ ಮೂಲಕ ಹೊರಬಂದು, ಬಳಿಕ ಅಂಗಿಯ ಪಟ್ಟಿಯಿಂದ ಹೊರಕ್ಕೆ ಬಂತು.
ಮರುದಿನ, ನಾನೊಂದು ಖಾಲಿ ಜಾಗಕ್ಕೆ ತಲುಪಿದೆ. ಅಲ್ಲಿ ಒಬ್ಬ ಆಗಂತುಕನಿದ್ದ. ಆತನ ಕಣ್ಣುಗಳು ಉದ್ದವಾಗಿ ಹರಿದುಹೋಗಿತ್ತು. ಅದೊಂದು ಜಿನ್ನೆಂದು ನನಗೆ ಮೊದಲ ನೋಟದಲ್ಲೇ ಮನದಟ್ಟಾಯಿತು. ಜಿನ್ನ್ ನನ್ನೊಂದಿಗೆ ಹೇಳಿತು:“ನೀವು ನಿನ್ನೆ ಕಂಡ ಹಾವು ನಾನಾಗಿದ್ದೇನೆ. ನಾನು ಹಲವಾರು ಔಲಿಯಾಗಳನ್ನು ಇದೇ ರೀತಿ ಪರೀಕ್ಷೆಗೊಳಪಡಿಸಿದ್ದೇನೆ. ನಿಮ್ಮಂತೆ ಯಾರೂ ಕೂಡಾ ದೃಢವಾಗಿ ನಿಂತದ್ದಿಲ್ಲ. ಅವರಲ್ಲಿ ಒಳಗೆ ಭಯಪಟ್ಟು, ಹೊರಗೆ ಧೈರ್ಯ ತೋರಿದವರೂ, ಒಳ-ಹೊರ ಒಂದೇ ರೀತಿ ಭಯಪಟ್ಟವರೂ ಇದ್ದಾರೆ. ಆದರೆ ಒಳಗೂ ಹೊರಗೂ ಭಯಪಡದೇ, ಅಚಂಚಲವಾದ ನಂಬಿಕೆ, ನಿಷ್ಠೆಯಿಂದಾಗಿದೆ ನಾನು ನಿಮ್ಮನ್ನು ಕಂಡಿರುವುದು.
(الطبقات الكبرى / الإمام الشعراني )
ಅಲ್ಲಾಹನ ತೀರ್ಮಾನಕ್ಕೆ ಬದ್ಧವಾಗಿ ಬದುಕಲು ಇಲಾಹನು ನಮಗೆಲ್ಲರಿಗೂ ಭಾಗ್ಯ ಕರುಣಿಸಲಿ. ಆಮೀನ್.
-ಮುಂದುವರಿಯುವುದು…




Comments