ಪರಿಧಿ ನಿಶ್ಚಯಿಸಲಾಗದ ಪೈಗಂಬರ್ ﷺ ಪ್ರೀತಿ
- Swadiq Mueeni Assaqafi Gadiyar

- Jul 31, 2024
- 3 min read

ಅನಸ್ (ರ.ಅ) ಅವರಿಂದ ನಿವೇದನೆಯಾದ ಒಂದು ಹದೀಸ್ ಹೀಗಿದೆ. ಹಬೀಬ್ ﷺ ರವರು ಹೇಳುತ್ತಾರೆ; ತನ್ನ ಮಾತಾ-ಪಿತ, ಸಂತತಿ ಮತ್ತು ಪ್ರೀತಿಪಾತ್ರರಿಗಿಂತಲೂ ನನ್ನನ್ನು ಪ್ರೀತಿಸದ ಹೊರತು ಯಾರೂ ಪೂರ್ಣ ವಿಶ್ವಾಸಿಯಾಗಲಾರ"
'ಪ್ರೀತಿ' ಪ್ರತಿಯೊಬ್ಬನ ಬದುಕಿನ ಅವಿಭಾಜ್ಯ ಅಂಗ. ಪ್ರೀತಿಸದವರು ಈ ಜಗತ್ತಿನಲ್ಲಿ ಅತೀ ವಿರಳ ಎಂದು ಹೇಳಬಹುದು. ಪ್ರೀತಿ ಹಲವು ಆಯಾಮಗಳಲ್ಲಿವೆ. ತಂದೆ ತಾಯಿಯೊಂದಿಗೆ ತೋರುವ ಪ್ರೀತಿ ಮತ್ತು ಹೆಂಡತಿಯೊಂದಿಗೆ ತೋರುವ ಪ್ರೀತಿಗೆ ಅಜಗಜಾಂತರ ವ್ಯತ್ಯಾಸಗಳಿವೆ. ಒಡಹುಟ್ಟಿದವರೊಂದಿಗೆ ತೋರುವ ಪ್ರೀತಿ ಮತ್ತು ಗೆಳೆಯರೊಂದಿಗೆ ತೋರುವ ಪ್ರೀತಿಯೂ ಬೇರೆ ಬೇರೆಯೇ. ಮಕ್ಕಳೊಂದಿಗೆ ಮತ್ತು ಸಾಕುಪ್ರಾಣಿಗಳೊಂದಿಗೆ ತೋರುವ ಪ್ರೀತಿಯೂ ವಿಭಿನ್ನ. ಗುರು-ಹಿರಿಯರೊಂದಿಗಿನ ನಮ್ಮ ಸ್ನೇಹ ಒಂದೇ ತೆರನಾಗಿರುವುದಿಲ್ಲ.
ಒಬ್ಬರೊಂದಿಗೆ ಪ್ರೀತಿಯುಂಟಾಗಲು ಹಲವು ಕಾರಣಗಳಿರಬಹುದು. ಸೌಂದರ್ಯ, ಆರೋಗ್ಯ, ಸಂಪತ್ತು, ಅಧಿಕಾರ, ಬುದ್ಧಿವಂತಿಕೆ, ಕುಟುಂಬ, ಪ್ರತಿಭೆಗಳನ್ನು ಮಾನದಂಡವಾಗಿಸಿ ಜನರು ಪ್ರೇಮಪಾಶಕ್ಕೆ ಬೀಳುತ್ತಾರೆ. ತೋರುವ ಕಾಳಜಿ, ನೀಡುವ ಗೌರವಕ್ಕೆ ಅನುಸಾರವಾಗಿ ಪ್ರೀತಿಯಲ್ಲಿ ಏರಿಳಿತಗಳನ್ನೂ ದರ್ಶಿಸಬಹುದು. ನಮ್ಮೊಂದಿಗೆ ಹೆಚ್ಚು ಒಡನಾಟವನ್ನು ಬೆಳೆಸುವವರೊಂದಿಗೆ ನಾವು ಹೆಚ್ಚು ಆಪ್ತತೆಯನ್ನು ಬೆಳೆಸುತ್ತೇವೆ. ಒಡನಾಟ ಕಡಿಮೆಯಾದಂತೆ ನಮ್ಮ ಪ್ರೀತಿಯೂ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಆದರೆ ಸತ್ಯವಿಶ್ವಾಸಿಯ ಪಾಲಿಗೆ ಪ್ರೀತಿ ಎಂಬುವುದು ಆತನ ಈಮಾನ್ (ವಿಶ್ವಾಸದೊಂದಿಗೆ) ಬೆಸೆದುಕೊಳ್ಳುತ್ತದೆ. ಯಾರನ್ನು ಪ್ರೀತಿಸಬೇಕು, ಯಾಕೆ ಪ್ರೀತಿಸಬೇಕು ಎಂಬುದು ಮುಸ್ಲಿಮನ ಪಾಲಿಗಂತೂ ಸ್ಪಷ್ಟವಿದೆ. ಮುಸ್ಲಿಮನ ಐಡೆಂಟಿಟಿ ಈಮಾನ್ ಆಗಿದೆ. ಆ ಈಮಾನ್ ಪೂರ್ಣವಾಗಬೇಕಾದರೆ ಹಬೀಬ್ ﷺ ರವರರನ್ನು ಪ್ರೀತಿಸುವುದು ಕಡ್ಡಾಯವಾಗಿರುತ್ತದೆ. ಮುಸ್ಲಿಮನ ಪಾಲಿಗೆ ಹಬೀಬ್ﷺ ರವರೊಂದಿಗಿನ ಪ್ರೀತಿ ಅಲ್ಲಾಹನೊಂದಿಗಿರುವ ಪ್ರೀತಿಯ ಮುಂದುವರಿಕೆಯಾಗಿ ಪರಿಗಣಿಸುವಂತದ್ದು. ಎಲ್ಲಾ ಪ್ರೀತಿಯ ಮುಖ್ಯ ಗುರಿ ಅಲ್ಲಾಹನ ಸಂತೃಪ್ತಿಯಷ್ಟೆ. ಹಬೀಬ್ﷺ ರವರೊಂದಿಗಿನ ಪ್ರೀತಿ ಅಲ್ಲಾಹನ ಸಂತೃಪ್ತಿ ಲಭಿಸಲು ಪ್ರಮುಖ ರಹದಾರಿ ಕೂಡಾ ಹೌದು. ಹಬೀಬ್ﷺ ರವರನ್ನು ಪ್ರೀತಿಸದ ಹೊರತು ವಿಶ್ವಾಸಿ ಅಲ್ಲಾಹನಿಗೆ ಪ್ರೀತಿಪಾತ್ರನಾಗಲಾರ ಮಾತ್ರವಲ್ಲ ಅಲ್ಲಾಹನ ಕೋಪಕ್ಕೂ ಅದು ಹೇತುವಾಗುತ್ತದೆ. ಮುಸ್ಲಿಂ ಅಲ್ಲಾಹನ ರಸೂಲ್ ﷺ ರವರೊಂದಿಗೆ ಹೆಚ್ಚಿನ ಒಡನಾಟವನ್ನು ಹೊಂದಬೇಕೆಂದು ಕುರ್ಆನ್ ಕಲಿಸಿಕೊಟ್ಟಿದೆ.
ಅನುರಾಗಿ ಸದಾ ಸಮಯ ತನ್ನ ಪ್ರೇಮಿಯ ಗುಂಗಿನಲ್ಲಿರುತ್ತಾನೆ. ಪ್ರೇಮಿಯ ನೋಟ, ಸ್ಪರ್ಶ, ಮಾತಿಗಾಗಿ ಅನುರಾಗಿಯ ಹೃದಯ ಮಿಡಿಯುತ್ತಲೇ ಇರುತ್ತದೆ. ಲೈಲಾ -ಮಜ್ನೂನಿನ ಪ್ರೇಮಕಹಾನಿಗಳಲ್ಲಿ, ರೋಮಿಯೋ-ಜ್ಯೂಲಿಯಟ್ ಟ್ರ್ಯಾಜಿಡಿ ನೋವಲ್ ಗಳಲ್ಲಿ, ನಮಗೆ ಜಗತ್ತಿನ ನೈಮಿಷಿಕ ಪ್ರೀತಿಯ ಚಿತ್ರಣವನ್ನು ವಾಚಿಸಬಹುದು. ಸೌಂದರ್ಯ, ಹೃದಯವಂತ, ಗುಣವಂತ, ಶ್ರೀಮಂತ ಎಂಬ ಕಾರಣದಿಂದ ನಾವು ಪ್ರೀತಿಸಿದವರೊಡನೆ ನಮ್ಮ ಒಡನಾಟ ಹೆಚ್ಚಾದಂತೆ ಅವರ ಒಂದೊಂದೇ ಹುಳುಕುಗಳು ನಮಗೆ ಗೋಚರಿಸತೊಡಗುತ್ತದೆ. ಜನರ ಮಧ್ಯೆ ಸೊಬಗಿನಂತೆ ನಟಿಸುವವನ ಬಣ್ಣ ಬಯಲಾಗತೊಡಗಿದಾಗ ನಾವು ಅವರಿಂದ ಅಂತರವನ್ನು ಕಾಯುತ್ತೇವೆ. ಆದರೆ ಹಬೀಬ್ ﷺ ರವರೊಂದಿಗಿನ ಪ್ರೀತಿ ಇದಕ್ಕೆ ವ್ಯತಿರಿಕ್ತವಾಗಿದೆ. ಹಬೀಬ್ ﷺ ರವರಿಗೆ ಹತ್ತಿರವಾದಂತೆ ನಾವು ರಸೂಲರನ್ನು ಇನ್ನಷ್ಟು ಪ್ರೀತಿಸಲು ತೊಡಗುತ್ತೇವೆ. ಆ ಪ್ರೀತಿಯ ಮಧುವನ್ನು ಆಘ್ರಾಣಿಸಲು ತೊಡಗಿದಾಗ ಹಬೀಬ್ ﷺ ರವರನ್ನು ದರ್ಶಿಸಲು, ಪುಣ್ಯ ಮದೀನಾ ಮುನವ್ವರವ ಸಂದರ್ಶಿಸಲು ಮನಸ್ಸು ಹಾತೊರೆಯುತ್ತದೆ. ಹಬೀಬ್ ﷺನೋಟಕ್ಕಾಗಿ, ಸ್ಪರ್ಶಕ್ಕಾಗಿ, ಅಕ್ಕರೆಯ ಮಾತುಗಳಿಗಾಗಿ ನಾವು ಸದಾ ಹಂಬಲಿಸತೊಡಗುತ್ತೇವೆ. ಬಿಲಾಲ್, ಸೌಬಾನ್, ಸವಾದ್, ಉಮ್ಮುಅಮಾರ, ತ್ವಲ್ಹತ್ (ರ) ಸೇರಿದ ಹಲವು ಸ್ವಹಾಬಿಗಳ ಜೀವನದಲ್ಲಿ, ಉವೈಸುಲ್ ಖರ್ನಿ, ಹಸನುಲ್ ಬಸ್ವರಿ, ಅಬೂಹನೀಫಾ (ರ) ರಂತಹ ತಾಬಿಉಗಳ ಬಾಳಿನಲ್ಲಿ, ಮುಹ್ಯಿಯುದ್ದೀನ್ ಶೈಖ್, ರಿಫಾಈ ಶೈಖ್, ಅಜ್ಮೀರ್ ಖ್ವಾಜಾ (ರ) ಜೀವನದಲ್ಲಿ, ಅಹ್ಮದ್ ರಝಾಖಾನ್ ಬರೇಲ್ವಿ, ಉಮರ್ ಖಾಳಿ ವೆಳಿಯಂಗೋಡ್, ಸ್ವದಖತುಲ್ಲಾಹಿಲ್ ಖಾಹಿರಿ, ಕುಂಡೂರು ಉಸ್ತಾದರಂತಹ ಸಜ್ಜನರ ಬದುಕಿನಲ್ಲಿ ಆ ಪ್ರೇಮದ ವ್ಯಾಖ್ಯಾನವನ್ನು ನಮಗೆ ವಾಚಿಸಬಹುದು. 'ಫಿದಾಕ ಅಬೀ ವ ಉಮ್ಮೀ' ಎಂಬ ಸ್ವಹಾಬಿಗಳ ಒಕ್ಕೊರಲಿನ ಉದ್ಘೋಷದ ಹಿಂದಿರುವ ಪ್ರೇರಣೆ ಹಬೀಬ್ ﷺ ರವರೊಂದಿಗಿನ ಪ್ರೇಮದ ತುಡಿತವಾಗಿತ್ತೆಂದು ವಿವರಿಸಬೇಕಿಲ್ಲ ತಾನೇ?. ಜಗದ ನೈಮಿಷಿಕ ವಾಂಛೆಗಳಿಗೆ ಜೋತುಬಿದ್ದು ತಮ್ಮ ಜೀವನವನ್ನು ಹಾಳುಮಾಡುವ ಅವಿವೇಕತನವನ್ನು ತ್ಯಜಿಸಿ ದ್ವಿಲೋಕದಲ್ಲೂ ನಮಗೆ ಆಸರೆಯಾಗುವ ಹಬೀಬ್ ﷺ ರವರನ್ನು ಪ್ರೀತಿಸುವ ಮೂಲಕ ಯುವ ತಲೆಮಾರು ವಿವೇಕವನ್ನು ತೋರ್ಪಡಿಸಬೇಕಿದೆ. ಸರಿಯಾಗಿ ಆಲೋಚಿಸುವುದಾದರೆ ವಿಶ್ವಾಸಿಗೆ ಹಬೀಬ್ ﷺ ರವರಿಗಿಂತಲೂ ಆಪ್ತರು ಬೇರೆ ಇರಲು ಸಾಧ್ಯವೇ?ಇಲ್ಲ ಖಂಡಿತಾ ಸಾಧ್ಯವಿಲ್ಲ.
ಪ್ರೇಮಕ್ಕೆ ಮೇಲೆ ಪಟ್ಟಿಮಾಡಿದ ಮಾನದಂಡವನ್ನೇ ಬಳಸಿದರೂ ಹಬೀಬ್ ﷺ ರವರು ಎಲ್ಲದರಲ್ಲೂ ಪರಿಪೂರ್ಣತೆಯನ್ನು ಗಳಿಸಿದ್ದಾರೆ. ಜಗತ್ತಿನಲ್ಲಿ ಹಬೀಬ್ ﷺ ರವರಿಗಿಂತಲೂ ಸೌಂದರ್ಯವಿರುವವರು ಇದ್ದಾರೆಯೇ? ಹುಣ್ಣಿಮೆಯ ರಾತ್ರಿಯಲ್ಲಿ ಪೂರ್ಣಚಂದಿರನನ್ನು, ಹಬೀಬ್ ﷺ ರವರನ್ನು ನೋಡಿದಾಗ ಹಬೀಬ್ ﷺ ರವರು ಪೂರ್ಣ ಚಂದಿರನಿಗಿಂತಲೂ ಪ್ರಕಾಶಿಸುತ್ತಿದ್ದರೆಂಬ ಅನಸ್ (ರ) ರವರ ಹದೀಸ್ ಆ ಸೌಂದರ್ಯವನ್ನು ನಮಗೆ ತಿಳಿಸಿಕೊಡುತ್ತಿದೆ. ಹಬೀಬ್ ﷺ ರವರ ಸೌಂದರ್ಯವನ್ನು ಮಾತ್ರ ವಿವರಿಸಲು ವಿದ್ವಾಂಸರು ಸಾವಿರಾರು ಪುಟಗಳು ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಹಬೀಬ್ﷺ ರವರ ಕಣ್ಣು, ಹುಬ್ಬು, ಕಣ್ ರೆಪ್ಪೆ, ಕೆನ್ನೆ, ಹಣೆ, ಕೇಶ, ದಂತಪಂಕ್ತಿ, ಎತ್ತರ, ಹಾಗು ಬಣ್ಣಗಳ ಕುರಿತು ಗ್ರಂಥಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಜಗತ್ತಿನ ಸೌಂದರ್ಯದ ಅರ್ಧಬಾಗ ಹಬೀಬ್ ﷺ ನೀಡಿದರೆ, ಉಳಿದರ್ಧ ಸೌಂದರ್ಯವನ್ನು ಭೂಲೋಕದ ಸರ್ವಜನರಿಗೂ ಹಂಚಲಾಗಿದೆ. ಯೂಸುಫ್ (ಅ) ರವರ ಸೌಂದರ್ಯಕ್ಕೆ ಮಾರುಹೋಗಿ ದಾಸಿಯರು ತಮ್ಮ ಕೈ ಮುರಿದಿದ್ದರೆ, ಒಂದು ವೇಳೆ ಹಬೀಬ್ﷺ ರವರು ಕಂಡರೆ ಕತ್ತನ್ನೇ ಸೀಳುತ್ತಿದ್ದರೇನೋ ಎಂಬ ಕವಿಯ ಮಾತು ಹಬೀಬ್ ﷺ ರವರ ಸೌಂದರ್ಯವನ್ನು ಮನೋಜ್ಞವಾಗಿ ವಿವರಿಸುತ್ತದೆ. ಸರ್ವ ನ್ಯೂನತೆಗಳಿಂದಲೂ ಹಬೀಬ್ ﷺ ರವರು ಮುಕ್ತರಾಗಿದ್ದಾರೆ ಎಂಬ ಹಸ್ಸಾನ್ ಬಿನ್ ಸಾಬಿತ್ (ರ) ಕವಿತೆಯ ಸಾಲುಗಳಲ್ಲಿ ಹಬೀಬ್ ﷺರವರ ಸೌಂದರ್ಯವನ್ನು ಸರಿಯಾಗಿ ಗ್ರಹಿಸಬಹುದು.
ಹೃದಯವಂತ, ಗುಣವಂತ ಎಂಬ ಮಾನದಂಡವನ್ನು ಬಳಸುವುದಾದರೆ ಅಲ್ಲೂ ಹಬೀಬ್ﷺ ರವರೇ ಸರಿಯಾದ ಆಯ್ಕೆ. ಕುರ್ಆನ್ ಹಬೀಬ್ ﷺ ರಹ್ಮತ್ತುಲ್ಲಿಲ್ ಆಲಮೀನ್ (ಜಗಕ್ಕೆ ಕರುಣಾಮಯಿ) ಎಂದೇ ಪರಿಚಯಿಸಿರುವಾಗ ಬೇರೆ ವಿವರಣೆ ಬೇಕಿಲ್ಲ ತಾನೇ?. ಪ್ರವಾದಿತ್ವದ ಪ್ರಾರಂಭದಿಂದ ಹಿಡಿದು ಹಿಜ್ರಾದ ತನಕ ಅನುಭವಿಸಿದ, ಸಹಿಸಿದ, ಪೀಡನೆಗಳೆಷ್ಟು..!ಕಿರುಕುಳಗಳೆಷ್ಟು..! ಒಂದೋ ಎರಡೋ.!? ತನ್ನನ್ನು ಮನಸೋ ಇಚ್ಚೆ ಪೀಡಿಸಿದ ಮಕ್ಕಾಮುಶ್ರಿಕರ ಜೊತೆ, ಅಬೂಲಹಬ್, ಉತ್ಬತ್, ಶೈಬತ್ ನಂತಹ ಪರಮ ನೀಚರು ಪೀಡಿಸಿದಾಗಲೂ, ಉಕ್ಬ ಬಿನ್ ಅಬೀ ಮುಈತ್ ಎಂಬ ಪಾಪಿ ಹಬೀಬ್ ﷺ ರವರ ಕತ್ತಿಗೆ ರುಮಾಲನ್ನು ಬಿಗಿದಾಗಲೂ, ತ್ವಾಯಿಫಿನ ಜನತೆ ಕಲ್ಲೆಸೆದಾಗಲೂ ಹಬೀಬ್ ﷺ ರವರು ಸಂಯಮವನ್ನು ಪಾಲಿಸಿದರು. ತನ್ನನ್ನು ಉಪದ್ರವಿಸದವರಿಗೆಲ್ಲರಿಗೂ ತನ್ನ ಕರುಣೆಯ ಹಸ್ತವನ್ನು ಚಾಚಿದ ಹಬೀಬ್ ﷺ ರವರ ಹೃದಯ ವೈಶಾಲ್ಯತೆಗೆ ಜಗತ್ತಿನಲ್ಲಿ ಸರಿಸಾಟಿಯುಂಟೇ!? .ಕೇವಲ ಮನುಷ್ಯರಿಗೆ ಮಾತ್ರವಲ್ಲ , ಚೇತನ -ಅಚೇತನ ವಸ್ತುಗಳಿಗೂ ಆ ಕರುಣೆಯ ಸ್ಪರ್ಶ ಲಭಿಸಿದೆ. ಮಾತಾ-ಪಿತರೊಂದಿಗಿನ ಬಾಧ್ಯತೆಗಳು, ನೆರೆ ಹೊರೆಯವರೊಂದಿಗೆ ಪಾಲಿಸಬೇಕಾದ ಶಿಷ್ಟಾಚಾರಗಳು, ಅನಾಥ-ವಿಧವೆಗಳೊಡನೆ ಹಬೀಬ್ ﷺ ರವರು ತೋರಿದ ಕಾಳಜಿಗೆ ಬದಲುಂಟೇ?. ಹೀಗೇ ಎಲ್ಲದರಲ್ಲೂ ಹಬೀಬ್ ﷺ ರವರೇ ಮೇಲುಗೈಯನ್ನು ಪಡೆಯುತ್ತಾರೆ. ಹಬೀಬ್ ﷺ ರವರ ಶ್ರೇಷ್ಟತೆಗೆ ಪರಿಧಿ ನಿಶ್ಚಯಿಸಲೋ, ಬರೆದು ಮುಗಿಸಲೋ ನಾವು ಅಶಕ್ತರಾಗಿದ್ದೇವೆ.
ಸತ್ಯ ವಿಶ್ವಾಸಿಯ ಈಮಾನ್ ಪೂರ್ಣಗೊಳ್ಳಬೇಕಾದರೆ ಹಬೀಬ್ ﷺ ರವರೊಂದಿಗಿನ ಪ್ರೀತಿ ಬೇಕೇ ಬೇಕು. ಅಲ್ಲಾಹನಲ್ಲದೆ ಬೇರೆ ಆರಾಧ್ಯನಿಲ್ಲ ಎಂದು ಹೇಳುವಾಗ ಮುಹಮ್ಮದ್ ﷺ ಅಲ್ಲಾಹನ ರಸೂಲರೆಂದು ನಂಬಿಕೆಯಿರಿಸಿ ಉಚ್ಚರಿಸದ ಹೊರತು ಆತನ ವಿಶ್ವಾಸ ಪೂರ್ಣಗೊಳ್ಳುವುದಿಲ್ಲ. ವಿಶ್ವಾಸ ಪೂರ್ಣಗೊಳ್ಳಬೇಕಾದರೆ ಹಬೀಬ್ ﷺ ರವರನ್ನು ಹತ್ತಿರದಿಂದ ತಿಳಿಯಬೇಕು. ಹತ್ತಿರದಿಂದ ತಿಳಿಯಬೇಕೆಂದರೆ ಹಬೀಬ್ ﷺ ರವರ ಕುರಿತು ಕಲಿಯಲು ನಾವು ಉತ್ಸುಕರಾಗಬೇಕು. ಪೂರ್ಣ ರೂಪದಲ್ಲಿ ಹಬೀಬರ ಬಗ್ಗೆ ತಿಳಿಯಲು ಸಾಧ್ಯವಿಲ್ಲ ಆದರೂ ಆ ಮಹತ್ ಜೀವನದ ಸ್ವಲ್ಪ ತಿಳುವಳಿಕೆಯಾದರೂ ನಮಗೆ ಇರಬೇಕಿದೆ.
ಹಬೀಬ್ ﷺ ರವರ ಶರೀರ ಸೌಂದರ್ಯ ಕುರಿತು,ಹಬೀಬ್ ﷺ ರವರ ಪತ್ನಿಯಂದಿರ ಬಗ್ಗೆ,ಮಕ್ಕಳು-ಮೊಮ್ಮಕ್ಕಳ ಬಗ್ಗೆ ಹಬೀಬ್ﷺರವರ ಜೀವನ, ನಿದ್ದೆ, ಎಚ್ಚರ, ಆರಾಧನೆ, ಓಡಾಟ, ಸಂಗಾತಿಗಳೊಂದಿಗಿನ ಜೀವನ, ಸ್ವಹಾಬಿಗಳೊಡನೆ ಸವೆಸಿದ ಜೀವನ, ಹಬೀಬ್ﷺ ರವರ ನೆಚ್ಚಿನ ಆಹಾರ, ಆಹಾರ ಸೇವಿಸುತ್ತಿದ್ದ ಶೈಲಿ, ಇಷ್ಟದ ಬಣ್ಣ, ಧರಿಸುತ್ತಿದ್ದ ವಸ್ತ್ರಗಳು, ಬಳಸುತ್ತಿದ್ದ ವಸ್ತುಗಳು ಉಮ್ಮತ್ ನೊಂದಿಗೆ ತೋರಿದ ಪ್ರೀತಿಯ ಬಗ್ಗೆ ನಮಗೆಷ್ಟು ತಿಳಿದಿದೆ ಎಂಬ ಆತ್ಮವಾಲೋಕನ ನಾವು ನಡೆಸಿದಾಗ ನಮಗೂ ಹಬೀಬ್ ﷺ ರವರಿಗೂ ನಡುವಿನ ದೂರವನ್ನು ಗ್ರಹಿಸಲು ಸಾಧ್ಯವಿದೆ. ಹಬೀಬ್ ﷺ ರವರನ್ನು ಕಲಿಯದ ಹೊರತು ಆ ಪ್ರೇಮವನ್ನು ಸರಿಯಾಗಿ ಆಸ್ವಾದಿಸಲು ಯಾರಿಂದಲೂ ಸಾಧ್ಯವಿಲ್ಲ. ಹಬೀಬ್ ﷺ ರವರ ಜೀವನ ತೆರೆದ ಪುಸ್ತಕವಾಗಿರುವುದರಿಂದ ಅಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲ. ನಮ್ಮ ಮುಂದೆ ಹಬೀಬ್ ﷺ ರವರನ್ನು ಪರಿಚಯಿಸುವ ಹಲವು ಗ್ರಂಥಗಳಿವೆ. ರಸೂಲ್ﷺ ರವರನ್ನು ಬಾಳಿನಲ್ಲಿ ಅಳವಡಿಸಿ ಬದುಕು ಸವೆಸಿದ ಸಜ್ಜನ ಮಹಾತ್ಮರ ಚರಿತ್ರೆಗಳಿವೆ. ಅವೆಲ್ಲವನ್ನೂ ಸರಿಯಾಗಿ ಉಪಯೋಗಿಸಿ ನಾವೂ ಆ ಸಾಲಿನಲ್ಲಿ ಸೇರುವವರಾಗಬೇಕು. ಪ್ರೇಮ ಕೇವಲ ಬರಹ, ಭಾಷಣಗಳಿಗೆ ಮಾತ್ರ ಸೀಮೀತಗೊಳಿಸದೆ ಜೀವನದಲ್ಲಿ ಆ ಸುನ್ನತ್ ಗಳನ್ನು ಪಾಲಿಸುವುದರ ಮೂಲಕ, ಸ್ವಲಾತ್ ಗಳನ್ನು ವರ್ಧಿಸುವ ಮೂಲಕ ಹಬೀಬ್ﷺ ರವರೊಂದಿಗೆ ನಾವು ಇನ್ನಷ್ಟು ಸಾಮೀಪ್ಯ ಬೆಳೆಸಲು ಪ್ರಯತ್ನಿಸಬೇಕಿದೆ. ತಿಳಿಯಿರಿ...ಹಬೀಬ್ ﷺ ರವರನ್ನು ತಿಳಿಯದೆ, ಕಲಿಯದೆ, ಕಲಿಸದೆ ನಮ್ಮ ಈಮಾನ್ ಎಂದೂ ಪೂರ್ಣವಾಗದು.
~ ಸ್ವಾದಿಖ್ ಮುಈನಿ ಅಸ್ಸಖಾಫಿ ಗಡಿಯಾರ್






I appreciate you swadiq mueeni. Writing style, use of attractive words and smooth flow of sentence all are amazing.