top of page

ಹೃದ್ಯ ಒಟನಾಟಗಳ ಮಧ್ಯೆ ಅದ್ಸ್‌ಕಾರ್



ಆಧುನಿಕ ಕಾಲದ ದ‌ಅವಾ ಆಕ್ಟಿವಿಟೀಸ್‌ಗೆ ಕೇರಳ - ಕರ್ನಾಟಕದಾದ್ಯಂತ ಇರುವ ದ‌ಅವಾ ದರ್ಸ್‌ಗಳು ಹೊಸ ಹೊಸ ರೂಪವನ್ನು ನೀಡುತ್ತಾ ಬರುತ್ತಿದೆ. ಅಲ್ಲಿ ಅಧ್ಯಯನಕ್ಕೆ ಎತ್ತಿಕೊಳ್ಳುವ ಗ್ರಂಥಗಳ ಸಂದೇಶವನ್ನು ವಿದ್ಯಾರ್ಥಿಗಳು ಸಮಾಜಕ್ಕೆ ದಾಟಿಸುತ್ತಾರೆ. ಜಗತ್ತಿನೆಲ್ಲೆಡೆ ಅರಿವು ಹರಿಯುತ್ತಾ ಸಾಗಿದ್ದು ಪೈಗಂಬರರ ಬಳಿ ಕಲಿತ ಸ್ವಾಹಾಬಿಗಳ ಮೂಲಕವಾಗಿತ್ತು. ಮುಂದೆ ಅದು ತಾಬಿಉಗಳ ಮೂಲಕ ಮೂಲೆಮೂಲೆಗೂ ಸೇರಿತು. ನಂತರ ಪಾಂಡಿತ್ಯವಿರುವ ಇಮಾಮರು‌ ಹಲವಾರು ಗ್ರಂಥಗಳನ್ನು ಬರೆದರು. ಆ ಪೈಕಿ ಪ್ರಮುಖ ಗ್ರಂಥ ಅಲ್ ಅದ್ಸ್‌ಕಾರ್.


ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಲು ನಿರ್ದೇಶಿಸಿದ ದ್ಸಿಕ್ರ್ ಇರುವ ಗ್ರಂಥವಿದು.‌ ಖುತುಬುಲ್ ಔಲಿಯಾ ಸಯ್ಯಿದುನಾ ಇಮಾಂ ಅನ್ನವವೀ ರಳಿಯಲ್ಲಾಹು ಅನ್ಹುರವರು ಬರೆದಿರುವ ಈ ಗ್ರಂಥದಲ್ಲಿ ದಿನವೂ ರೂಢಿ ಮಾಡಬೇಕಾದ ದ್ಸಿಕ್ರ್ ಇವೆ. ವಿಶೇಷವೆಂದರೆ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರು ಕಳೆದ ಮೂವತ್ತು ವರ್ಷಗಳಿಂದಲೂ ಕಿತಾಬುಲ್ ಅದ್ಸ್‌ಕಾರ್ ತರಗತಿ ನಡೆಸುತ್ತಿದ್ದಾರೆ. ಈಗಲೂ ದಾರುಲ್ ಇರ್ಶಾದ್ ಅಧೀನದ ಕೆಜಿಎನ್ ವಿದ್ಯಾಸಂಸ್ಥೆಯಲ್ಲಿ ಮುಂಜಾನೆ ಒಂಭತ್ತು ಗಂಟೆಯವರೆಗೆ ದರ್ಸ್ ಮುಂದುವರಿಯುತ್ತದೆ. ಉಸ್ತಾದರ ಅದ್ಸ್‌ಕಾರ್ ದರ್ಸ್ ಅಂದರೆ ಚೇತೋಹಾರಿ ಅನುಭವ. ಜೊತೆಗೆ ಅನೇಕಾರು ಮಾಹಿತಿ ಕಣಜಗಳು !


ಯಾವುದೇ ಬ್ಯುಸಿ ಇರಲಿ, ಮುಂಜಾನೆಯ ದರ್ಸಿಗೆ ಉಸ್ತಾದರು ತಲುಪುತ್ತಾರೆ. ಇನ್ನು ಆರೋಗ್ಯ ಸಮಸ್ಯೆ ಎದುರಾದರೂ ಸಾಧ್ಯಂತ ಉಸ್ತಾದರು ತರಗತಿ ಮೊಟಕುಗೊಳಿಸುವುದಿಲ್ಲ. ಅದೊಂದು ಬೇರೆಯೇ ಅನುಭೂತಿ. ಹೀರಿದಷ್ಟು ಇನ್ನೂ ಹೀರಬೇಕೆಂಬ ಆಸೆ ದಟ್ಟವಾಗುತ್ತಾ ಹೋಗುತ್ತದೆ.


• ಅಧ್ಯಾಪನಾ ಶೈಲಿ


ಶೈಖುನಾ ಉಸ್ತಾದರ ಅದ್ಸ್‌ಕಾರ್ ದರ್ಸ್ ಆರಂಭವಾದದ್ದು ಮಚ್ಚಂಪಾಡಿಯಲ್ಲಿ. ಅಲ್ಲಿಂದ ಆರಂಭವಾದ ದರ್ಸ್ ಈಗಲೂ ನಡೆಸುತ್ತಿದ್ದಾರೆ. ವೇಗವಾಗಿ ಓದಿಕೊಂಡು ಮುಗಿಸುವ ಜಾಯಾಮಾನ ಉಸ್ತಾದರದ್ದಲ್ಲ. ಮೆಲ್ಲನೆ ಎಲ್ಲಾ ವಿಷಯಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುತ್ತಾರೆ. ವಿಶೇಷ ಏನೆಂದರೆ ಈ ಅಧ್ಯಾಪನೆಯಲ್ಲಿ ಅನರ್ಘ್ಯ ರತ್ನಗಳನ್ನು ಬೆಸೆದುಕೊಂಡಿರುತ್ತದೆ. ಇನ್ನು ಅದ್ಸ್‌ಕಾರಿನಲ್ಲಿ ಪರಾಮರ್ಶಿಸಲಾದ ಇಮಾಮರುಗಳ ನಿಖರ ಜನ್ಮವರ್ಷ, ಮರಣ ವರ್ಷ ಅವರ ವಿಶೇಷತೆಯನ್ನು ವಿವರಿಸದೆ ಮುಂದೆ ಸಾಗುವುದಿಲ್ಲ.


ಈ ಗ್ರಂಥ ತಸವ್ವುಫಿನ ಗ್ರಂಥವಾದರೂ ಉಸ್ತಾದರು ಅಲ್ಲಾಮಾ ಮುಹಮ್ಮದ್ ಬಿನ್ ಅಲ್ಲಾನ್ ತಂಙಳರ ‘ಅಲ್ ಫುತೂಹಾತುರ್ರಬ್ಬಾನಿಯ್ಯಾ ಬಿ ಶರಹಿ ಅದ್ಸ್‌ಕಾರುನ್ನವವೀ’ ನೋಡಿಕೊಂಡು ಒಟ್ಟು ಸಾರಾಂಶ, ವ್ಯಾಖ್ಯಾನ, ಹಿಕ್ಮತ್, ಕರ್ಮ ಶಾಸ್ತ್ರ, ನಹ್ವ್, ಪದಗಳ ಬಳಕೆ, ಉಚ್ಚಾರಣೆ ಎಲ್ಲವನ್ನೂ ಒಳಗೊಂಡ ತರಗತಿಯನ್ನು ನಡೆಸಿಕೊಡುತ್ತಾರೆ.


ಉಸ್ತಾದರ ಸಮಯ ನಿಷ್ಠೆ ನಮ್ಮನ್ನು ಬೆರಗುಗೊಳಿಸುತ್ತದೆ. ಯಾವುದೇ ಕಾರ್ಯಕ್ರಮಗಳು ಆಯೋಜಸಿದರೂ ಸಮಯ ಪಾಲನೆ ಉಸ್ತಾದರ ಹುಟ್ಟುಗುಣ. ಇನ್ನು ಅದ್ಸ್‌ಕಾರ್ ತರಗತಿ ಆರಂಭವಾದರೆ ಗಂಟೆಗಟ್ಟಲೆ ದರ್ಸ್ ನಡೆಸುತ್ತಾರೆ. ಅಧ್ಯಯನ ವರ್ಷದ ಆರಂಭದಲ್ಲಿ ಇಮಾಂ ನವವೀ (ರ) ಬಗೆ ವಿವರಿಸುತ್ತಾ ಇತಿಹಾಸದ ಪ್ರಾಮುಖ್ಯತೆಯ ಬಗೆ ನಿಖರವಾಗಿ ಅಷ್ಟೇ ಆಸ್ಥೆಯಿಂದ ತಿಳಿಸುತ್ತಾರೆ.


• ಅದ್ಸ್‌ಕಾರ್ ಕುರಿತು ಉಸ್ತಾದರ ಮಾತು


ಶೈಖುನಾ ಉಸ್ತಾದರು ಅದ್ಸ್‌ಕಾರ್ ದರ್ಸ್ ಆರಂಭಿಸಿ ಮೂವತ್ತರಷ್ಟು ವರ್ಷಗಳಾಯಿತು. ಉಸ್ತಾದರ ಅದ್ಸ್‌ಕಾರ್ ದರ್ಸಿಗಿರುವ ಪ್ರಚೋದನೆ ಏನು ಎಂದು ಕೇಳಿದಾಗ 'ನವವೀ ಇಮಾಮರ ಕಿತಾಬಲ್ವಾ..!' ಎಂದಾಗಿದೆ ಉಸ್ತಾದರ ಮರುತ್ತರ. ಅದರ ಬರಕತ್‌ಗಳು ವರ್ಷಿಸುತ್ತಲೇ ಇರುತ್ತದೆ. ಉಸ್ತಾದರು ಆಗಾಗ್ಗೆ ‘ನೀವು ಅದ್ಸ್‌ಕಾರನ್ನು ಮುತ್ವಾ‌ಲ‌ಅ ಮಾಡಿರಿ, ಯಾವ ಗ್ರಂಥದಲ್ಲೂ ಕಾಣದ ಜ್ಞಾನ ಸಂಪತ್ತು ಅದ್ಸ್‌ಕಾರಿನಲ್ಲಿ ಅಡಗಿದೆ’ ಎಂದು ಆಗಾಗ್ಗೆ ಎಚ್ಚರಿಸುತ್ತಾರೆ.


ಅಲ್ ಅದ್ಸ್‌ಕಾರ್ ಗ್ರಂಥದ ವಿಶೇಷತೆ ಹೇಳುವಲ್ಲಿ ಪೂರ್ವಿಕರು ಹೇಳುತ್ತಾರೆ, ‘ಬಿಇ ದ್ದಾರ್, ವಶ್‌ತರಿಲ್ ಅದ್ಸ್‌ಕಾರ್’ (ಮನೆ ಮಾರು, ಅದ್ಸ್‌ಕಾರ್ ಕೊಂಡುಕೊಳ್ಳು !) ಇನ್ನು 'ಓರ್ವ ವ್ಯಕ್ತಿ ಉತ್ತಮನಾಗಲು ಬಯಸಿದರೆ ಅದ್ಸ್‌ಕಾರ್ ಓದಲಿ. ಆತನಿಗೆ ಅದು ಸಾಕು.!' ಎಂದು ಕೂಡಾ ಹೇಳುತ್ತಾರೆ. ಒಬ್ಬ ಉತ್ತಮ ಮನುಷ್ಯನಾಗಲು ಬೇಕಾದ ಎಲ್ಲಾ ಅಂಶವನ್ನು ಇಮಾಂ ನವವೀ (ರ) ತನ್ನ ಕಿತಾಬಿನಲ್ಲಿ ಸಂಗ್ರಹಿಸಿದ್ದಾರೆ.


• ಕ್ಲಾಸ್ ಡೈರಿಯಾಗಿ ಮರುರೂಪ


ಶೈಖುನಾ ಉಸ್ತಾದರ ಅಲ್ ಅದ್ಸ್‌ಕಾರ್ ದರ್ಸಿನಲ್ಲಿ ಹಲವು ಅಪೂರ್ವ ಮಾಹಿತಿಗಳನ್ನು ದೊರಕುತ್ತದೆ. ಕೆಲವೊಮ್ಮೆ ನಾವು ವಿಷಯವನ್ನು ಕೆದಕಿದಾಗ ಮತ್ತಷ್ಟು ಜ್ಞಾನ ಸಂಪತ್ತು ಹೊರಬರುತ್ತದೆ. ಸಾಮಾನ್ಯವಾಗಿ ಯಾರು ಕೇಳಿರದ ವಿಶೇಷ ಮಾಹಿತಿಗಳು ದೊರಕುತ್ತದೆ. ಮಾತ್ರವಲ್ಲದೆ ಉಸ್ತಾದರು ಕೂಡಾ ಅದನ್ನೇ ಪುನರುಚ್ಚರಿಸುತ್ತಾರೆ.


ಆಯಾ ವರ್ಷದ ವಿದ್ಯಾರ್ಥಿಗಳು ಕೆಲವೊಂದು ಪ್ರಮುಖ ಪಾಯಿಂಟ್ಸ್‌ಗಳನ್ನು ಆಯ್ಕೆಮಾಡಿಕೊಂಡು ವಾರ್ಷಿಕ ಅಜ್ಮೀರ್ ಮೌಲಿದಿನ ದಿನದಂದು 'ಇರ್ಶಾದ್: ಕ್ಲಾಸ್ ಡೈರಿ'ಯಾಗಿ ಪ್ರಕಟಿತ್ತಾರೆ. ಇದುವರೆಗೂ ಐದು ಕ್ಲಾಸ್ ಡೈರಿಗಳು ಬಿಡುಗಡೆಗೊಳಿಸಲಾಗಿದೆ.


ಅಲ್ಲಾಹನ ಅನುಗ್ರಹವೆಂಬಂತೆ ಕೆಜಿಎನ್ ವಿದ್ಯಾಸಂಸ್ಥೆಯ ಕೊನೆಯ ಎರಡು ವರ್ಷಗಳ ಕಾಲ ಉಸ್ತಾದರ ಅಲ್ ಅದ್ಸ್‌ಕಾರ್ ಗ್ರಂಥದ ಪೂರ್ತಿ ತರಗತಿಯಲ್ಲಿ ಭಾಗವಹಿಸಿದ್ದೇವೆ. ಉಸ್ತಾದರ ವಿನಯ ತುಂಬಿದ ಮಾತು, ವಿದ್ಯಾರ್ಥಿಗಳೊಂದಿಗಿನ ಒಡನಾಟಗಳು, ಲಘು ಹಾಸ್ಯ ಎಲ್ಲವೂ ನೆನಪಿಗೆ ಬರುತ್ತಿದೆ. ಶೈಖುನಾ ಉಸ್ತಾದರು ಈ ಸಮಾಜಕ್ಕೆ ಅಗತ್ಯ. ಅದ್ಸ್‌ಕಾರ್ ತರಗತಿ ಕೂಡಾ. ಅಲ್ಲಾಹ್, ಉಸ್ತಾದರ ನೆರಳು ದೀರ್ಘಗೊಳಿಸು - ಆಮೀನ್.

Commentaires


bottom of page