top of page

ಬಾರ್ಕಸ್: ಭಾರತದಲ್ಲೊಂದು ಯಮನ್ ಸೊಬಗು

Updated: Jun 24, 2024


ree

ಐಟಿ ಸಿಟಿ ಹೈದರಬಾದಿನ ಹೃದಯ ಭಾಗದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿ ಬೆಚ್ಚಗೆ ಮಲಗಿರುವ ಪುಟ್ಟ ಗ್ರಾಮ ಬಾರ್ಕಸ್. ಈ ಬಾರಿಯ ನಮ್ಮ ಈದುಲ್ ಅಲ್ಹಾ  ಬಾರ್ಕಸ್ಸಿನಲ್ಲಾಗಿತ್ತು. 'ಬಾರ್ಕಸ್' ವಿಶಿಷ್ಟ ಸಂಸ್ಕೃತಿ, ವೈವಿಧ್ಯಮಯ ಆಚರಣೆಗಳಿರುವ ಭಾರತದಲ್ಲಿನ ಯಮನ್ ದೇಶ. ಅಂತೂ ಪಯಣ ಆರಂಭಿಸಿ ಈದುಲ್ ಅಲ್ಹಾದ ಮುಂಚಿನ ದಿನ ಬಾರ್ಕಸ್ ತಲುಪಿದೆವು. ರಸ್ತೆ ಬದಿಯಲ್ಲಿ ಕುರ್ಬಾನಿಗಾಗಿ ಮೀಸಲಿಟ್ಟ ಪ್ರಾಣಿ ಮಂದೆ, ಪ್ರೌಢವಾಗಿ ನಿಂತ ಮಸೀದಿ ಮಿನಾರಗಳು ನಮ್ಮನ್ನು ಸ್ವಾಗತಿಸಿತು. ಒಂದು ಕಡೆಯಲ್ಲಿ ಆಟವಾಡುತ್ತಿರುವ ಸಣ್ಣ ಮಕ್ಕಳು, ಕಹ್ವಾ ಕುಡಿಯುತ್ತಾ ಹರಟೆ ಹೊಡೆಯುತ್ತಿರುವ ವೃದ್ಧರು, ಮತ್ತೊಂದು ಕಡೆ ಯಮನಿ ಲುಂಗಿಧರಿಸಿ ತಲೆಗೆ ಪೇಟಸುತ್ತಿದ ಯುವಕರನ್ನು ಕಂಡಾಗ ನಾವು ಯಮನಿನಲ್ಲಿದ್ದೇವೇನೋ ಎಂಬಂತೆ ಭಾಸವಾಯಿತು.


'ಬಾರ್ಕಸ್' ಬ್ಯಾರಕ್ಸ್ ಎಂಬ ಇಂಗ್ಲಿಷ್ ಪದದಿಂದ ಹುಟ್ಟಿದ್ದು. ಅದು  ಹೈದರಾಬಾದ್ ನಿಝಾಮರ ಸೈನಿಕ ಕೇಂದ್ರವಾಗಿತ್ತು. 1880 ರ ಕಾಲಘಟ್ಟದಲ್ಲಿ ಅಂದಿನ ರಾಜ ನಿಝಾಮ್ ಮೀರ್ ಮೆಹಬೂಬ್ ಅಲಿ ಖಾನ್ ತನ್ನ ಸಾಮ್ರಾಜ್ಯವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಯಮನಿನ ಹಲವಾರು ಸೈನಿಕರನ್ನು ಮತ್ತು ಅವರ ಕುಟುಂಬಿಕರನ್ನು ಕರೆತಂದಿದ್ದರು. ಅವರು ಕ್ರಮೇಣ ಇಲ್ಲಿಯೆ ನೆಲೆಸಲಾರಂಭಿಸಿದರು. ಇಂದಿಗೂ ಯಮನಿ ಸೈನಿಕರ ಪರಂಪರೆಯ ಕೊಂಡಿ ಬಾರ್ಕಸ್ಸಿನಲ್ಲಿ ಜೀವಂತವಾಗಿದೆ. ಬಾರ್ಕಸ್ಸಿಗರ ಜೀವನ ಶೈಲಿ, ವಸ್ತ್ರದಾರಣೆ, ಆಹಾರ ಪದ್ದತಿ ಎಲ್ಲವೂ ಅರಬ್ಬರಂತಿದೆ. ಯಮನ್ ಮಂದಿ, ಖಹ್ವಾ, ಹರೀಶ್, ಹಲೀಮ್ ಇಲ್ಲಿನ ಮುಖ್ಯ ಆಹಾರ ಖಾದ್ಯಗಳು. ಅಲ್ಲಲ್ಲಿ ಕಾಣುವ ಮಂದಿಹೌಸ್, ಸುಗಂಧ ದ್ರವ್ಯದಂಗಡಿ, 'ಅವುಝಾರ್' ಲುಂಗಿ ತೂಗಿಸಿದ ಟೆಕ್ಸಟೈಲ್ಸ್, ಅರೆಬಿಕ್ ಚಪ್ಪಲಿಗಳ ರಾಶಿ ಬಾರ್ಕಸ್ಸಿಗೆ ಮತ್ತಷ್ಟು ಸೊಬಗು ನೀಡುತ್ತದೆ. ಈದಿನ ಸಡಗರ ಸಂಭ್ರಮ ಆ ರಾತ್ರಿಯನ್ನು ಇನ್ನಷ್ಟು ವರ್ಣಮಯಗೊಳಿಸಿತು.

     


ree

ಮಾರನೇ ದಿನ ಫಜಿರ್ ನಮಾಝ್ ಮುಗಿಸಿ ಈದ್ ನಮಾಝಿಗಾಗಿ ಬಾರ್ಕಸ್ಸಿನ ಜಾಮಿಯಾ ಮಸೀದಿಗೆ ತಲುಪಿದೆವು. ಮಸೀದಿ ವೈವಿಧ್ಯಮಯ ವಾಸ್ತುಶೈಲಿಯ ಮೂಲಕ ಅಲಂಕಾರಗೊಂಡಿತ್ತು. ಹೈದರಾಬಾದಿನ ಬಹುಪಾಲು ಜನರು ಹನಫೀ ಮಸ್ಲಕ್ ಅನುಸರಿಸಿದರೆ ಬಾರ್ಕಸ್ಸಿಗರು ಯಮನಿನ ಹಲರಮಿ ಪರಂಪರೆಯ ಶಾಫಿಗಳಾಗಿದ್ದರು. ಹೊಸ ವಸ್ತ್ರಗಳನ್ನು ಧರಿಸಿದ ಮಕ್ಕಳು, ಯುವಕರು, ವೃದ್ಧರು ಅತ್ಯಂತ ಉತ್ಸಾಹದಿಂದ ಒಂದುಗೂಡಿ ಈದ್ ನಮಾಝಿಗಾಗಿ ತಕ್ಬೀರ್ ಹೇಳುತ್ತಾ ಕಾಯುತ್ತಿದ್ದರು. ಅಷ್ಟರಲ್ಲಿ ಯಮನಿ ಪೇಟ ಧರಿಸಿದ ಹಝ್ರತ್ತಿನ ಭಾಷಣ ಪ್ರಾರಂಭವಾಯಿತು. ಬಾರ್ಕಸ್ಸಿನಲ್ಲಿ ಮಾತನಾಡುವ ಭಾಷೆ ದಖನಿ ಉರ್ದು. ಇಲ್ಲಿಯ ವಯೋವೃದ್ಧರು ಅರಬಿ ಸ್ಫುಟವಾಗಿ ಮಾತನಾಡುತ್ತಾರೆ. ಯುವಕರು ಉರ್ದುವಿನೊಂದಿಗೆ ಇಂಗ್ಲೀಷಿನಲ್ಲಿ ಪ್ರಾವೀಣ್ಯತೆಯುಲ್ಲವರು. ಮೌಲಾನರ ಈದ್ ಸಂದೇಶ ಮುಗಿಯುವ ಹೊತ್ತಿಗೆ ಮಲಬಾರ್ ಶೈಲಿಯ ಪೇಟ ಧರಿಸಿದ ಖತೀಬರು ನಮಾಝಿನ ಮುತುವರ್ಜಿ ವಹಿಸಿ ,ನಂತರ ಅರಬ್ಬರಂತೆ  ಖುತುಬಾ ಮನೋಹರವಾಗಿ  ನಿರ್ವಹಿಸಿದರು. ನಂತರ ವಿಶಿಷ್ಟಶೈಲಿಯ ಮುಸಾಫಹತ್ ಮತ್ತು ಹಲ್ಖಗಳಿದ್ದವು.


ಖತೀಬರಲ್ಲಿ ಕೆಲ ಹೊತ್ತು ಅರೇಬಿಕ್ ಭಾಷೆಯಲ್ಲಿ ಮಾತನಾಡಿ ಅಲ್ಲಿಯ ವಿಶೇಷತೆಗಳನ್ನು ಕೇಳಿ ತಿಳಿದೆವು. ಸಣ್ಣ-ಸಣ್ಣ ಮದ್ರಸಗಳು, ಶಾಲೆಗಳು, ಬಡವರಿಗಾಗಿ ಕಾರ್ಯಾಚರಿಸುತ್ತಿರುವ ಬೈತುಲ್-ಮಾಲುಗಳು , ತನ್ನ ಹೆಸರು ಮತ್ತು ವಂಶದ ಹೆಸರು ಬರೆದಿಟ್ಟ ಮನೆಯ ದ್ವಾರಗಳು ಈ ನಾಡನ್ನು ಚೇತೋಹಾರಿಯಾಗಿಸಿತು. ಎರಡು ಶತಮಾನಕ್ಕಿಂತಲೂ ಹಳೆಯ ಯಮನೀ ಪರಂಪರೆಯ ಸಂತೆ ಇಂದಿಗೂ ಕಾಣಲು ಸಾಧ್ಯವಾಗುತ್ತದೆ. ಬಕ್ರೀದಿನ ಜನ ಜಂಗುಳಿಯಲ್ಲಿ ಹಣ್ಣು ಹಂಪಲು ಮಾರುವ ಪರಿ ಕಾಣುಗರನ್ನು ಆಕರ್ಷಿಸುತ್ತದೆ. ಸಲಾಲ, ಕುವೈತ್, ಶಾರ್ಜಾ, ಮಸ್ಕತ್ ಡೈರಿ ಇದೆಲ್ಲವೂ ಇಲ್ಲಿಯ ಮಾರುಕಟ್ಟೆಯ ಹೆಸರು. ಯಾರೋ ಅಪರಿಚಿತ ವ್ಯಕ್ತಿ ಬೆಳಿಗ್ಗಿನ ಉಪಹಾರಕ್ಕಾಗಿ ಕರೆ ನೀಡಿದರು. ಅವರ ಆತಿಥೇಯತೆ ಮನಸ್ಸಿಗೆ ಮುದ ನೀಡಿತು. ಒಂದನ್ನೊಂದು ತಬ್ಬಿ ನಿಂತ ಬಾರ್ಕಸ್ಸಿನ ಮನೆಗಳು ಅವರ ಒಗ್ಗಟ್ಟಿನ ಸಂಕೇತವಾಗಿ ತೋಚಿತು. ಅರೇಬಿಕ್ ನಲ್ಲಿ ಹೆಸರು ಬರೆದಿಟ್ಟ ಮನೆಯ ಪ್ರವೇಶದ್ವಾರಗಳು ಕಾಣಲು ಸುಂದರವಾಗಿತ್ತು.

               

ಮಸೀದಿಗಳು ಮತ್ತು ಸೂಫಿಗಳ ದರ್ಗಾಗಳು ಬಾರ್ಕಸ್ಸಿನ ಆಧ್ಯಾತ್ಮಿಕ ಕೇಂದ್ರ. ಸಣ್ಣ ಗ್ರಾಮವಾದರೂ ಫರ್ಲಾಂಗಿಗೆ ಒಂದರಂತೆ ಇಂಡೊ-ಅರೇಬಿಕ್ ಶೈಲಿಯ ಮಸೀದಿಗಳು ಮತ್ತು ದರ್ಗಾಗಳು ಗೊಚರಿಸುತ್ತದೆ. ಇನ್ನೂರರಷ್ಷು ಹಲರಮಿ ಪರಂಪರೆಗಳು ಇಲ್ಲಿದೆಯೆಂದು ಸ್ಥಳೀಯರು ಹೇಳಿದರು. ಖಾಜಾ ಕರೀಮುಲ್ಲ ಜಿಸ್ತೀ, ಬಾಬಾ ಶರಫುದ್ದೀನ್ ಸುಹ್ರವರ್ದಿ ಇಲ್ಲಿಯ ಪ್ರಮುಖ ಸೂಫಿಗಳು. ಸೂಫಿಗಳ ಲಂಗರ್ ಖಾನಾ, ಖಾನ್ಕಾಹಗಳು ಆತ್ಮೀಯ ಅನುಭೂತಿ ನೀಡಿತು.


ree

ಡಾ. ಅನುಷ್ಯಮಾ ಮುಖರ್ಜಿ ಅವರು ಮಾಡಿದ ಸಂಶೋಧನೆಯ ಆಧಾರದಲ್ಲಿ "ಹದ್ರಮಿ ಪರಂಪರೆಯ ಬಾರ್ಕಸ್ಸಿಗರನ್ನು ಹೈದರಾಬಾದಿನ 'ಚೌಶ್' ಸಮುದಾಯಕ್ಕೆ ಒಳಪಟ್ಟವರು ಎಂದು ಕರೆಯುತ್ತಾರೆ. 2001 ರ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಪ್ರಕಾರ 34,288 ಚೌಶಿಗಳು ಹೈದರಾಬಾದಿನಲ್ಲಿದ್ದರು. ಸಿ.ಆರ್.ಪಿ.ಎಫ್ ಸೆಂಟ್ರಲ್ ರಿಸರ್ವ್ ಪೊಲೀಸ್ ಪಡೆ ಮತ್ತು ಕೇಂದ್ರ ವಿಶ್ವವಿದ್ಯಾನಿಲಯ ಬಾರ್ಕಸ್ಸನ್ನು ಸುತ್ತುವರಿದಿದೆ. ಅಲ್ಲಿಯ ವಯೋವೃದ್ಧರಿಗೆ ತಮ್ಮ ಹದ್ರಮಿ ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನವಿದ್ದರೂ ಹೊಸ ತಲೆಮಾರು ಅದನ್ನು ಹೊಸಕಿ ಹಾಕುತ್ತಿದೆ. ಟೈಮ್ಸ್ ಆಫ್ ಇಂಡಿಯಾ ಬಾರ್ಕಸ್ಸನ್ನು ಈ ರೀತಿ ಪರಿಚಯಿಸುತ್ತದೆ: "ಸೌದಿ ಅರೇಬಿಯಾ, ಬಹ್ರೈನ್ ,ಯಮನಿನಂತೆ ತೋಚುವ ಭಾರತದ ಏಕಮಾತ್ರ ಅರೇಬಿಕ್ ಸ್ಟ್ರೀಟ್ 'ಬಾರ್ಕಸ್ಸಿಗೆ ತಮಗಿದೋ ಸ್ವಾಗತ." ಹೀಗೆ ಬಾರ್ಕಸ್ ನಿಜಾಮರಿಂದ ಆಳಲ್ಪಟ್ಟ ಹೈದರಾಬಾದಿನಲ್ಲಿ ಈಗಲೂ ತನ್ನದೇ ಆದ ಸಂಸ್ಕೃತಿ, ವಾಸ್ತು ಮತ್ತು ಜನಜೀವನ ಶೈಲಿಯ ಮೂಲಕ ಜೀವಂತವಾಗಿದೆ.

1 Comment


nasiruddeenalakke
Jun 24, 2024

ಮಾಶ ಅಲ್ಲಾಹ್ ತುಂಬಾ ಚೆಂದದ ಬರೆಹ

Like
bottom of page