top of page

ಅಸ್ತಿತ್ವವಿಲ್ಲದ ನಾಡಿನ ಅಸ್ತಿತ್ವವಾದಿ: ಈಸಾ ಬುಲಾತ್ವ


ಇಸ್ರೇಲಿಗರ ಫೆಲೆಸ್ತೀನ್ ವಲಸೆಯ ಕಾರಣ ತಾಯ್ನಾಡಿನಿಂದ ಸ್ಥಳಾಂತರಗೊಂಡ ವ್ಯಕ್ತಿಗಳಲ್ಲೊಬ್ಬರಾಗಿದ್ದಾರೆ ಪ್ರಸಿದ್ಧ ಬರಹಗಾರರೂ, ಅನುವಾದಕರೂ, ಸಂಶೋಧಕರೂ ಆಗಿರುವ ಈಸಾ ಬುಲಾತ. 2019ರಲ್ಲಾಗಿತ್ತು ಅವರ ಇಹಲೋಕ ವಿದಾಯ. 2002ರಲ್ಲಿ ಈಸಾ ಬುಲಾತರಿಗೆ ಗೌರವ ಸೂಚಕವಾಗಿ ಲೋಕಾರ್ಪಣೆಗೊಂಡ ಕಮಾಲ್ ಅಬ್ದುಲ್ ಮಾಲಿಕ್ ಮತ್ತು ವಾಯಿಲ್ ಹಲಾಖ್ ಎಂಬವರು ಸಂಪಾದಿಸಿದ Tradition, Modernity and Postmodernity in Arabic Literature ಎಂಬ ಸಂಶೋಧನಾತ್ಮಕ ಲೇಖನಗಳನ್ನೊಳಗೊಂಡ ಒಂದು ಪುಸ್ತಕದ ಮೂಲಕ ಅವರ ಬಗ್ಗೆ ತಿಳಿಯಲು ಸಾಧ್ಯವಾಯಿತು. ಈ ಪುಸ್ತಿಕೆಯ ಮೊದಲ ಲೇಖನ ಕಮಾಲ್ ಅಬ್ದುಲ್ ಮಾಲಿಕ್ ಬರೆದ Professor Issa J Boullata: A Profile of an Intellectual ಎಂಬುದಾಗಿದೆ. ಇದು ಈಸಾ ಬುಲಾತ ಅರಬ್ ಪಾಶ್ಚಿಮಾತ್ಯ ಶೈಕ್ಷಣಿಕ ಸಮುದಾಯವನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಿದ್ದರು ಎಂಬುದನ್ನು ಸ್ಪಷ್ಟವಾಗಿ ವಿವರಿಸಿಕೊಡುತ್ತದೆ.


1975ರಲ್ಲಿ ಈಸಾ ಬುಲಾತ, ತನ್ನ ಪತ್ನಿ ಮತ್ತು ನಾಲ್ಕು ಮಕ್ಕಳು ನ್ಯೂಯಾರ್ಕ್ ಮೂಲಕ ಕೆನಡಾಗೆ ತೆರಳುತ್ತಿದ್ದರು. ಮೋನ್ಟ್ರಿಯಾಲ್ ನಗರದಲ್ಲಿರುವ ಎಂ ಸಿಗಿಲ್ ವಿಶ್ವವಿದ್ಯಾಲಯದ ಅರಬ್-ಇಸ್ಲಾಮಿಕ್ ಅಧ್ಯಯನದ ಪ್ರೊಫೆಸರಾಗಿ ಹುದ್ದೆಯನ್ನು ಸ್ವೀಕರಿಸಲು ಬೇಕಾಗಿಯಾಗಿತ್ತು ಪ್ರಯಾಣ. ಕೆನಡಾದ ಗಡಿಯಲ್ಲಿ ಬುಲಾತಾರ ವೀಸಾ ಅನುಮೋದಿಸುವ ವೇಳೆ ಅಧಿಕಾರಿಯೊಬ್ಬರು ಬುಲಾತ ಜೆರೋಸೆಲೆಮಿನಲ್ಲಿ ಜನಿಸಿರುವ ವಿಷಯವನ್ನು ಗಮನಿಸಿದರು. “ನೀವು ಜನಿಸಿದ್ದು ಎಲ್ಲಿ?” ಎಂಬ ಅಧಿಕಾರಿಯ ಪ್ರಶ್ನೆಗೆ ಬುಲಾತ “ಜೆರೋಸೆಲೆಮ್- ಫೆಲೆಸ್ತೀನ್”ಎಂದು ಉತ್ತರಿಸಿದರು. ಕುತೂಹಲಭರಿತನಾದ ಅಧಿಕಾರಿ “ಫೇಲೆಸ್ತೀನಾ? ಇಸ್ರೇಲ್ ಅಲ್ವಾ?”ಎಂದು ಮರುಪ್ರಶ್ನೆಯಿತ್ತನು. ಬುಲಾತ ವಿವರಿಸತೊಡಗಿದರು. “1929ರಲ್ಲಾಗಿದೆ ನನ್ನ ಜನನ. ಅಂದು ಇಸ್ರೇಲ್ ಇರಲಿಲ್ಲ. ಇದ್ದುದು ಫೆಲೆಸ್ತೀನ್ ಮಾತ್ರ.”ಬಳಿಕ ಕೈಯ್ಯಲ್ಲಿದ್ದ ಹರಿದು ಛಿದ್ರವಾಗಿದ್ದ ಜನನ ಪ್ರಮಾಣಪತ್ರವನ್ನು ತೋರಿಸಿದರು. ಅದರಲ್ಲಿ ಬುಲಾತ ಬ್ರಿಟೀಷ್ ಆಕ್ರಮಿತ ಫೆಲೆಸ್ತೀನಿನಲ್ಲಿ ಜನಿಸಿದ್ದೆಂದು ಇಂಗ್ಲೀಷ್, ಅರೇಬಿಕ್ ಮತ್ತು ಹಿಬ್ರು ಭಾಷೆಯಲ್ಲಿ ಬರೆಯಲಾಗಿತ್ತು. ಅದನ್ನು ಪರಿಶೀಲಿಸಿದ ನಂತರ ಅಧಿಕಾರಿ “ನನಗೆ ನೀಡಲಾದ ರಾಷ್ಟ್ರಗಳ ಪಟ್ಟಿಯಲ್ಲಿ ಫೆಲೆಸ್ತೀನ್ ಇಲ್ಲ” ಎಂದು ಹೇಳಿದರು. ಪರಿಸ್ಥಿತಿ ತನ್ನ ನಿಯಂತ್ರಣಕ್ಕೆ ಮೀರಿದ್ದೆಂದು ಮನದಟ್ಟು ಮಾಡಿಕೊಂಡ ಅಧಿಕಾರಿ, ಕೊನೆಗೆ ದಯೆಯಿಂದ ವೀಸಾ ನೀಡಿ, ಕೆನಡಾ ಪ್ರವೇಶಿಕೆಗೆ ಅವಕಾಶ ಮಾಡಿಕೊಟ್ಟರು. ಆ ವೇಳೆಗಾಗಲೇ ಬುಲಾತ, ತನ್ನ ತಾಯ್ನಾಡು ಪ್ರಪಂಚದಾದ್ಯಂತ ಹಲವು ರಾಷ್ಟ್ರಗಳಲ್ಲೂ ನೋಂದಾಯಿಸಲ್ಪಟ್ಟಿಲ್ಲ ಎಂಬ ವಿಚಾರದಲ್ಲಿ ತೀವ್ರವಾದ ನೋವನ್ನನುಭವಿಸಿದರು. ಯಾವೊಬ್ಸ ಪ್ಯಾಲೆಸ್ತೀನಿಯನ್ ಕೂಡಾ, ತಾನು ಎಷ್ಟೇ ಎತ್ತರಕ್ಕೇರಿದರೂ, ತಮ್ಮ ಜೀವನದುದ್ದಕ್ಕೂ ಇಂತಹ ಉಮ್ಮಳಿಸುವ ನೋವಿಗೆ ಶರಣಾಗದಿರಲಾರರು.


1929ರ ಫೆಬ್ರುವರಿ ಇಪ್ಪತ್ತೈದರಲ್ಲಿ ಫೆಲೇಸ್ತೀನಿನ ಜೆರೋಸೆಲೆಮಿನಲ್ಲಿರುವ ಒಂದು ಕ್ರೈಸ್ತ ಕುಟುಂಬದಲ್ಲಾಗಿದೆ ಈಸಾ ಬುಲಾತ ಜನಿಸುವುದು. ಅವರ ತಾತ ಹನ್ನಾ ಬುಲಾತ ಒಬ್ಬ ಪ್ರಸಿದ್ಧ ಆಧುನಿಕ ವಾಸ್ತುಶಿಲ್ಪಿಯಾಗಿದ್ದರು. ಜೆರೋಸೆಲೆಮಿನಲ್ಲಿ ಇಂದಿಗೂ ಕಂಡುಬರುವ ಹಲವಾರು ಮಸೀದಿಗಳು, ಗಗನಚುಂಬಿ ಕಟ್ಟಡಗಳ ಶಿಲ್ಪಿಯಾಗಿದ್ದರು ಹನ್ನಾ ಬುಲಾತ. ಬುಖಾರಾದ ನಕ್ಶಬಂದೀ ಸೂಫೀಗಳಿಗೆ ಜೊರೋಸೆಲೆಮ್ ಶಾಶ್ವತ ನೆಲೆಯಾಗಿತ್ತು. ಆದರೆ 1900ರ ನಂತರ ಚಿತ್ರಣ ಬದಲಾಯಿತು. ಆ ನಗರವು ಅಕ್ರಮಕ್ಕೊಳಪಟ್ಟಿತು. ಕಾಲಕ್ರಮೇಣ ಅಲ್ಲಿನ ಕಳೆ ನಷ್ಟಹೊಂದಿತು. ಬುಲಾಟ್ಟರ ತಾತ ಸಹಿತವಿರುವ ಎಲ್ಲರೂ ಮೌನವಾದರು. ಬುಖಾರಾದ ಸೂಫಿಗಳು ಊರುಬಿಟ್ಟರು. ನಗರದ ಹಲವು ಭಾಗಗಳಲ್ಲಿ ಆಕ್ರಮಣಕಾರಿ ಯಹೂದಿ ವಸಾಹತುಗಾರರು ದಬ್ಬಾಳಿಕೆಯನ್ನು ಪ್ರಾರಂಭಿಸಿದರು.


ಈಸಾ ಬುಲಾತರ ತಾಯಿಯ ತಂದೆ ಅಬ್ರಹಾಂ ಜೆರೊಸೆಲೆಮಿನಲ್ಲಿ ಸಾಧಾರಣ ಅಂಗಡಿಯೊಂದನ್ನು ಹೊಂದಿದ್ದ ಅಕ್ಕಸಾಲಿಗರಾಗಿದ್ದರು. ಯಹೂದಿ ವಲಸೆ ತೀವ್ರಗೊಂಡಂತೆ, ಅವರ ಎಲ್ಲಾ ವೈಭವವೂ ಕಣ್ಮರೆಯಾಯಿತು. ಕಣ್ಣೀರಿನೊಂದಿಗಿರುವ ತಾತನನ್ನು ಬುಲಾತ ಗಮನಿಸುತ್ತಿದ್ದರು. 1948ರಲ್ಲಿ ಇಸ್ರೇಲ್ ರಾಷ್ಟ್ರ ನಿರ್ಮಾಣಗೊಂಡಾಗ, ಈ ಅಬ್ರಹಾಂ ಮತ್ತು ಕುಟುಂಬ ಬೆತ್ಲೆಹೆಮ್ಮಿನ, ಜನರು ಕಿಕ್ಕಿರಿದು ಬದುಕುವ, ನಿರಾಶ್ರಿತರ ಶಿಬಿರದಲ್ಲಿದ್ದರು. ಇಸ್ರೇಲೀ ಯಹೂದಿಗಳು ಗಲಭೆ ನಡೆಸಿದಾಗ, ತಮ್ಮ ಮನೆಗಳನ್ನು ತ್ಯಜಿಸಿ ಪಲಾಯನಗೈಯ್ಯುವುದೊಂದೇ ಆಗಿತ್ತು ಅವರಿಗಿದ್ದ ಏಕೈಕ ದಾರಿ. ಆ ನಿರಾಶ್ರಿತರ ಶಿಬಿರದಲ್ಲಿ ಅಬ್ರಹಾಂ ನೋವಿನ ಭಾಷೆಯಲ್ಲಿ “ನನ್ನನ್ನು ಮರಣವು ಸಮೀಪಿಸುತ್ತಿದೆ” ಎಂದು ಗುನುಗುತ್ತಿದ್ದರು. ಅದೇ ವರ್ಷದಲ್ಲಿ ತಮಗಾದ ಚಿತ್ರಹಿಂಸೆಯ ನೋವಿನಲ್ಲಿ ಕೊರಗಿ, ಹೃದಯಾಘಾತದಿಂದ ನಿಧನರಾದರು. ಸ್ವಂತ ಕುಟುಂಬಿಕರನ್ನು ದಫನ ಮಾಡಿದ ಸ್ಥಳದಲ್ಲಿ, ಅಬ್ರಹಾಮನ್ನು ದಫನ ಮಾಡಲು ಕೂಡಾ ಯಹೂದಿ ವಸಾಹತುಗಾರರು ಅವಕಾಶ ನೀಡಲಿಲ್ಲ.


ಅರಬಿ ಭಾಷೆಯ ಅಧ್ಯಯನ ಪೂರ್ತಿಗೊಳಿಸಿ, ಈಸಾ ಬುಲಾತ ಕಾನೂನು ಕಲಿಕೆಯ ಅವಧಿಯಲ್ಲಿರುವಾಗ 1948ರ ಇಸ್ರೇಲ್ ರಾಷ್ಟ್ರ ನಿರ್ಮಾಣದ ಹಿಂಸಾತ್ಮಕ ಘಟನೆಗಳಿಗೆ ಜೆರೋಸೆಲೆಮ್ ಕಣ್ಣಾಯಿತು ಮತ್ತು ಈಸಾ ಬುಲಾತರ ಕಾಲೇಜು ಮುಚ್ಚಲ್ಪಟ್ಟಿತು. ಅಷ್ಟರಲ್ಲೇ ಬುಲಾತರಿಗೆ ಜೀವನೋಪಾಯದ ದಾರಿಯಾಗಿ ಕಂಡಿದ್ದ ಬ್ಯಾಂಕ್ ಉದ್ಯೋಗವೂ ಕೈತಪ್ಪಿತು. ಫ್ಯಾಲೆಸ್ತೀನಿಯನ್ನರು ತಮ್ಮ ಗುರುತು, ಆಸ್ತಿ ಮತ್ತು ಭೂಮಿಯನ್ನು ಕಳೆದುಕೊಂಡ ಬಳಿಕವೂ, ಅದರ ಆಘಾತಕ್ಕೆ ತನ್ನನ್ನು ಬಲಿಕೊಡದೇ, ವಿವಿಧ ಅಧ್ಯಾಪನಾ ವೃತ್ತಿಗಳಲ್ಲಿ ತೊಡಗಿಸಿಕೊಂಡು ಈಸಾ ಬುಲಾತ್ತ ಬದುಕಿನೊಂದಿಗೆ ಅಕ್ಷರಶಃ ಹೋರಾಡತೊಡಗಿದರು. 1968ರವರೆಗೆ ಜೆರೋಸೆಲೆಮಿನಲ್ಲೂ, ರಾಮಲ್ಲದಲ್ಲೂ ಮುಂದುವರಿದರು. ಓರ್ಥೋಡಾಕ್ಸ್ ಚರ್ಚ್ ಸಂಬಂಧಿತ ವಿಷಯಗಳಲ್ಲಿ ಸಕ್ರಿಯರಾದರು. ಈ ಮಧ್ಯೆ ಹಲವಾರು ಪ್ಯಾಲೆಸ್ಟೀನಿಯನ್ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಪ್ರಭಾವಿಸಲು ಅವರಿಗೆ ಸಾಧ್ಯವಾಯಿತು. ಅವರಲ್ಲಿ ಅನೇಕರು ಪ್ಯಾಲೆಸ್ಟೀನಿಯನ್ ಬರಹಗಾರ ಮತ್ತು ರಾಜತಾಂತ್ರಿಕ ತಜ್ಞರಾದ ಸೋಸ್ ಇಬ್ರಾಹಿಮರಂತೆ ಇಸ್ರೇಲ್ ವಿರೋಧಿ ಹೋರಾಟದ ಬೌದ್ಧಿಕ ನಾಯಕರಾದರು.


1969ರಲ್ಲಿ ಈಸಾ ಬುಲಾತ ಲಂಡನ್ ವಿಶ್ವವಿದ್ಯಾಲಯದಿಂದ ಅರಬಿ ಸಾಹಿತ್ಯದಲ್ಲಿ ಪಿ ಹೆಚ್ ಡಿ ಪಡೆದರು. ಇರಾಖಿ ಕವಿ ಬದರ್ ಶಾಕಿರ್ ಸಯ್ಯಾಬಿಯ ಜೀವನ ಮತ್ತು ಕಾವ್ಯಲೋಕ ಎಂಬ ವಿಷಯವನ್ನಾಧರಿಸಿಯಾಗಿತ್ತು ಪ್ರಬಂಧ. 1967ರ ಅರಬ್-ಇಸ್ರೇಲ್ ಯುದ್ಧದಲ್ಲಿ ಅರಬ್ ಒಕ್ಕೂಟದ ಸೋಲು ಮತ್ತು ನಂತರದ ಇಸ್ರೇಲಿ ಆಕ್ರಮಣವನ್ನು ಅವರು ಬಹಳ ನೋವಿನಿಂದ ಅನುಭವಿಸಬೇಕಾಯಿತು. 1968ರಲ್ಲಿ ಅಮೇರಿಕಾದ ಹಾರ್ಟ್-ಫೋರ್ಡ್ ಸೆಮಿನರಿಯಲ್ಲಿ ಬುಲಾತರಿಗೆ ಸಹಾಯಕ ಪ್ಯಾಧ್ಯಾಪಕರಾಗಿ ಕೆಲಸ ದೊರೆತಾಗ ಇಸ್ರೇಲಿ ಆಡಳಿತದ ಕ್ರೂರತೆಯ ನಡುವಿನ ಬದುಕಿನಿಂದ ಅವರಿಗೆ ಮುಕ್ತಿಯುಂಟಾಯಿತು. 1975ರಿಂದ 1998ರ ನಿವೃತ್ತಿಯವರೆಗೂ ಕೆನಡಾದ ಎಂ ಸಿಗಿಲ್ ವಿಶ್ವವಿದ್ಯಾಲಯದಲ್ಲಿ ಅರಬಿ ಭಾಷೆಗೆ ಸಂಬಂಧಿತವಾದ ವಿವಿಧ ಬೋಧನೆ ಮತ್ತು ಸಂಶೋಧನಾ ಹುದ್ದೆಗಳನ್ನು ಅಲಂಕರಿಸಿಕೊಂಡರು.


ಅರೇಬಿಕ್ ಭಾಷೆ ಮತ್ತು ಸಾಹಿತ್ಯದ ಕುರಿತು ಇಂಗ್ಲಿಷ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಶೈಕ್ಷಣಿಕ ಬರಹಗಳ ಜೊತೆಗೆ, ಬುಲಾತ ತಮ್ಮ ರಾಜಕೀಯ ಮತ್ತು ಸಾಮಾಜಿಕ ಅರಿವನ್ನು ವ್ಯಕ್ತಪಡಿಸುವ ಅನೇಕ ಕಥೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ನಾನು ಇತ್ತೀಚೆಗೆ ಓದಿದ ಪುಸ್ತಕವಾಗಿದೆ True Arab Love ಎಂಬ ಕಥಾಸಂಕಲನ. ಇದು ಫೆಲೆಸ್ತೀನಿನಲ್ಲುಂಟಾದ ಇಸ್ರೇಲಿನ ಕ್ರೂರ ಆಕ್ರಮಣದಿಂದಾಗಿ ನೆಮ್ಮದಿ ಮತ್ತು ಸಂತೋಷವನ್ನು ಕಳೆದುಕೊಂಡ ಹಲವು ರೀತಿಯ ಜನರ ಕಥೆಗಳನ್ನು ಒಳಗೊಂಡಿದೆ.


‘ಓಹ್, ಸಲೀಮಾ’ ಕಥೆಯನ್ನು ಓದಿ ನೋಡಿ. ಕಥೆಯು ಖಲೀಲುಲ್ ಇಬ್ರಾಹಿಂನ ಸಾವಿನ ಘಟನೆಯೊಂದಿಗೆ ಪ್ರಾರಂಭವಾಗುತ್ತದೆ. ಜೆರೋಸೆಲೆಮಿನಲ್ಲಿರುವ ಖಾನ್ ಝೈತಿನ ಪುರಾತನ ಮಾರುಕಟ್ಟೆಯ ಕಾವಲುಗಾರರಿಗೆ ಅವನು ಸತ್ತು ಬಿದ್ದಿರುವ ದೃಶ್ಯ ಕಂಡುಬರುತ್ತದೆ. ಎಲ್ಲರಿಗೂ ಖಲೀಲಿನ ಪರಿಚಯವಿರುತ್ತದೆ. ಅವನ ಮೃತದೇಹವನ್ನು ಯಾವುದೇ ಸದ್ದುಗದ್ದಲಗಳಿಲ್ಲದೇ, ತೆಗೆದುಕೊಂಡು ಹೋಗಿ ಹೂಳಲಾಗುತ್ತದೆ. ನಂತರ ಕಥೆಗಾರ ಖಲೀಲುಲ್ ಇಬ್ರಾಹಿಂನ ನಿಜವಾದ ಕಥೆಯನ್ನು ವಿವರಿಸುತ್ತಾನೆ. ಈ ಸಾವಿನ ಸುದ್ದಿ ಕೇಳಿದಾಗ, ಇಪ್ಪತ್ತು ವರ್ಷಗಳ ಹಿಂದಿನ ಖಲೀಲುಲ್ ಇಬ್ರಾಹಿಂನ ಭೇಟಿ ಅವರಿಗೆ ನೆನಪಾಗುತ್ತದೆ. ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾಗ, ಭೇಟಿಯ ಅನುಮತಿ ಕೇಳಿ ಒಳಗೆ ಬಂದವರು ಕೇಳಿದ್ದು “ನನ್ನ ಸಲೀಮಾನನ್ನು ನೋಡಿದ್ದೀರಾ?” ಎಂದಾಗಿತ್ತು. ‘ಯಾರು ಸಲೀಮಾ? ತನ್ನ ಶಾಲೆಯಲ್ಲಿ ಅಂತಹ ಮಗು ಇಲ್ಲ.’ ಎಂದು ಹೇಳಿದಾಗ, ಇಸ್ರೇಲಿ ಆಕ್ರಮಣದ ಸಮಯದಲ್ಲಿ ಕಾಣೆಯಾದ ತನ್ನ ಗೆಳತಿಯ ಬಗ್ಗೆ ಖಲೀಲ್ ಮಾತು ಬಿಚ್ಚುತ್ತಾನೆ.


ಇಬ್ಬರ ಹೃದಯದಲ್ಲಿ ಪ್ರೀತಿಯೆಂಬ ಹೂ ಅರಳಿದ್ದ ಸಮಯ. ಹಿಂದಿನ ದಿನ ಇಬ್ರಾಹಿಂ ಅವಳಿಗೆ ಒಂದು ಟವೆಲನ್ನು ಕೊಟ್ಟಿದ್ದ. ಮರುದಿನ, ಭೇಟಿಯಾಗಲು ಬೇಕಾಗಿ ಒಂದು ಸ್ಥಳವನ್ನೂ ನಿರ್ಧರಿಸಿದ್ದರು. ಆದರೆ, ಇಬ್ರಾಹಿಂ ತೆರಳಿ ಸ್ಥಳಕ್ಕೆ ತಲುಪಿದಾಗ, ಅಲ್ಲಿ ಅವಳಿರಲಿಲ್ಲ. ಅದು 1948ರ ಇಸ್ರೇಲ್ ರಾಷ್ಟ್ರ ನಿರ್ಮಾಣದ ಸಮಯವಾಗಿತ್ತು. ಅಲ್ಲಿ ಗಗನಚುಂಬಿ ಕಟ್ಟಡವೊಂದು ಧರಾಶಾಯಿಯಾಗಿದೆ. ಅದರ ಹತ್ತಿರದಲ್ಲೇ, ಸಲೀಮಾಗೆ ನೀಡಿದ್ದ ಉಡುಗೊರೆಯ ಅವಶೇಷಗಳು. ನಂತರದ ಕಾಲವಿಡೀ ಅವಳು ಸತ್ತಿದ್ದಾಳೋ, ಜೀವಂತವಾಗಿದ್ದಾಳೋ ಎಂದು ತಿಳಿಯದೆ, ಎಲ್ಲೆಡೆಯೂ ಅವಳನ್ನು ಹುಡುಕಾಡುವ ಅಲೆಮಾರಿಯ ಬದುಕಾಗಿತ್ತು ಇಬ್ರಾಹಿಂ ಖಲೀಲಿನ ಪಾಲಿನದ್ದು. ಅನೇಕ ನಗರಗಳಲ್ಲಿ, ಹಳ್ಳಿಗಳಲ್ಲಿ, ಅವನಿಗೆ ತಿಳಿದಿರುವ ಮತ್ತು ತಿಳಿಯದ ಜನರೊಂದಿಗೆ, ಅವಳ ಕುರಿತಾಗಿ ವಿಚಾರಿಸಿ ಅಲೆದಾಡಿದ. ಯಾರಿಗೂ ಸಲೀಮಾಳ ಪರಿಚಯವಿರಲಿಲ್ಲ. ಆತ ಮರಣದವರೆಗೂ, ತನ್ನ ಭವಿಷ್ಯದ ಸಂಗಾತಿಯಾಗಬೇಕಿದ್ದ ಸಲೀಮಾಳ ಹುಡುಕಾಟದಲ್ಲೇ ಮಗ್ನನಾಗಿದ್ದ. ‘ನನಗೆ ಅಚ್ಚರಿಯೆನಿಸುತ್ತದೆ. ಖಲೀಲ್ ಸಲೀಮಾಳನ್ನು ನೋಡಿದ್ದಾನೆಯೇ? ಅವಳನ್ನು ಹುಡುಕುತ್ತಾ ಅವನು ತನ್ನ ದೈನಂದಿನ ಪ್ರಯಾಣವನ್ನು ನಿಲ್ಲಿಸಿದ್ದು ಏಕೆ? ಅವನಿಗೆ ಈಗ ಸಲೀಮಾಳ ಹೃದ್ಯ ಮಾತುಗಳು ಕೇಳಿಸುತ್ತಿದೆಯೇ?’ ಎಂದು ಹೇಳಿ ಆತ್ಮಸಂಗಾತಿಗಳಿಬ್ಬರ ಕರುಣಾಜನಕ ಕಥನವೊಂದನ್ನು ಕಥಾಗಾರರು ಕ್ರೂರಿಗಳ ಎದೆ ತಿವಿದಂತೆ ದಾಖಲಿಸುತ್ತಾರೆ.


ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಬದುಕಿದ ಈಸಾ ಬುಲಾತ, ಪವಿತ್ರ ಖುರ್-ಆನ್ ಮತ್ತು ಅದರ ಭಾಷೆಗೆ ಸಂಬಂಧಿಸಿದ ಅಧ್ಯಯನಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. Literary Structures of Religious Meaning in the Qur'an ಎಂಬ ಪುಸ್ತಿಕೆಯನ್ನು ಬುಲಾತರವರು ಸಂಪಾದಿಸಿದ್ದಾರೆ. ಅದರಲ್ಲಿ ಖುರ್-ಆನಿನ ಭಾಷಾ ಸಂಪನ್ನತೆಯನ್ನು ಈ ರೀತಿ ಬಣ್ಣಿಸುತ್ತಾರೆ: ಖುರ್-ಆನ್ ಸಂಬಂಧಿತ ಅಧ್ಯಯನಗಳನ್ನು ಪರಿಶೀಲಿಸುವಾಗ ಆರಂಭದಿಂದಲೇ ಅರ್ಥೈಸಿಕೊಳ್ಳಬೇಕಾದ ಮುಖ್ಯ ವಿಷಯವೆಂದರೆ ಅದರ ಭಾಷೆ ಅರೇಬಿಕ್ ಎಂಬುದನ್ನಾಗಿದೆ. ಖುರ್ಆನಿನ ಸಾಹಿತ್ಯಿಕ ಬಳಕೆಗಳ ವಿಷಯಕ್ಕೆ ಬಂದಾಗ, ಅರೇಬಿಕ್ ಭಾಷೆ ಅತ್ಯಂತ ಮಹತ್ವದ್ದಾಗಿದೆ. ಎಷ್ಟೇ ನಿಖರವಾಗಿದ್ದರೂ, ಇತರ ಭಾಷೆಗಳಲ್ಲಿನ ಖುರ್ಆನಿನ ಅನುವಾದವು ಎಂದಿಗೂ ಖುರ್ಆನ್ ಆಗುವುದಿಲ್ಲ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಸಾಂಸ್ಕೃತಿಕ ಹಿನ್ನೆಲೆ, ಸಂವಹನ ವಿಧಾನ, ಶೈಲಿಗಳು ಮತ್ತು ರಚನೆಗಳಿವೆ. ಖುರ್ಆನ್ ಪೈಗಂಬರ್ ಮುಹಮ್ಮದರಿಗೆ ಅವತೀರ್ಣಗೊಳ್ಳುವುದರ ಶತಮಾನಗಳಿಗೆ ಹಿಂದೆಯೇ ಅರೇಬಿಕ್ ಭಾಷೆ ಅಸ್ತಿತ್ವದಲ್ಲಿತ್ತು. ಆದರೆ ಹಿಂದೆಂದಿಗೂ ಬಳಸದ ವಿಶಿಷ್ಟ ಶೈಲಿಯಲ್ಲಾಗಿತ್ತು ಖುರ್ಆನಿನ ರಚನೆ. ಅದರ ವಿಚಾರದಲ್ಲಿ ಬಹಳಷ್ಟು ವಿಶೇಷ ಅಧ್ಯಯನಗಳು ಅತ್ಯಗತ್ಯವಾಗಿದೆ.


ಬುಲಾತ ಚಿಕ್ಕ ವಯಸ್ಸಿನಲ್ಲಿ ಕೇಳುತ್ತಿದ್ದ ಖುರ್ಆನಿನ ವಚನಗಳೇ ಅದರ ಬಗೆಗಿನ ಹೆಚ್ಚಿನ ಅಧ್ಯಯನಕ್ಕೆ ಪ್ರೇರಣೆಯಾಗಿರಬೇಕು. 1934ರಲ್ಲಿ ಅವರು ಫೆಲೆಸ್ತೀನಿನಲ್ಲಿ ಶಾಲೆಗೆ ಸೇರಿದಾಗ, ತರಗತಿಗಳು ಸೂರಾ ಫಾತಿಹಾ ಪಾರಾಯಣದೊಂದಿಗೆ ಪ್ರಾರಂಭವಾಗುತ್ತಿದ್ದವು. ಆ ದಿನಗಳಲ್ಲೇ ಖುರ್ಆನ್ ಪಾರಾಯಣದ ಲಯವು ತನ್ನನ್ನು ಅತಿಯಾಗಿ ಆಕರ್ಷಣೆಗೊಳಪಡಿಸಿದ್ದವು ಎಂದು ಬುಲಾತಾ ತನ್ನ MyFirst School & Childhood Home ಎಂಬ ಗ್ರಂಥದಲ್ಲಿ ವಿವರಿಸುತ್ತಾರೆ.


ಫೆಲೆಸ್ತೀನಿನ ಪ್ರಭಾವಶಾಲಿ ಯುಗದ ಸೌಂದರ್ಯ, ಇಸ್ರೇಲ್ ಸ್ಥಾಪನೆಯಾದಾಗಿನಿಂದ ತಾನು ಮತ್ತು ತನ್ನ ದೇಶವಾಸಿಗಳು ಅನುಭವಿಸಿದ ಅಭೂತಪೂರ್ವ ಯಾತನೆ, ತನ್ನ ಮನೆ ಮತ್ತು ಗುರುತನ್ನು ಕಳೆದುಕೊಂಡ ನೋವು, 1948ರಲ್ಲಿ ಇಸ್ರೇಲ್ ಸ್ಥಾಪನೆಯಿಂದ ಕೊಲ್ಲಲ್ಪಟ್ಟ ಲಕ್ಷಾಂತರ ಜನರ ಜೀವನ ಮತ್ತು 1967ರ ಯುದ್ಧದಲ್ಲಿ ಅರಬ್ ಸಮುದಾಯ ಅನುಭವಿಸಿದ ನಷ್ಟಗಳನ್ನು ಅನುಭವಿಸಿದ ಬುಲಾತ, 2019ರಲ್ಲಿ ತನ್ನ ತೊಂಬತ್ತನೇ ವಯಸ್ಸಿನಲ್ಲಿ ನಿಧನರಾದರು. ಅವರ ಬದುಕು ಮತ್ತು ಬರಹಗಳು ನಮಗೆ ಫೆಲೆಸ್ತೀನ್ ಸಮಸ್ಯೆಗಳು ಕೇವಲ ಮುಸ್ಲಿಮರ ಏಕೈಕ ಕಾಳಜಿಯಲ್ಲ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತವೆ. ಫೆಲೆಸ್ತೀನ್ ರಾಷ್ಟ್ರ ಯಹೂದಿ ವಸಾಹತುಶಾಹಿತ್ವದ ಮೊದಲು ಅಲ್ಲಿ ವಾಸಿಸುತ್ತಿದ್ದ ಪ್ರತಿಯೊಬ್ಬ ಮನುಷ್ಯನಿಗೂ ಸೇರಿತ್ತು ಎಂಬುವುದು ವೇದ್ಯವಾಗುತ್ತದೆ.


ಮೂಲ: ಮಲಯಾಳಂ

ಅನುವಾದ: ಶುಹೈಬ್ ಅಹ್ಮದ್ ಜೀರ್ಮುಕ್ಕಿ

 
 
 

Comments


bottom of page