
ಬಾಂಧವ್ಯದ ಘಮ ಸೂಸುವ 'ರೂಹ್ ಅಫ್ಝಾ'
- Abdussalam Mueeni

- Feb 26
- 2 min read
Updated: Feb 28
ವಿಶ್ವಾಸಿಗಳ ಪಾಲಿನ ಪವಿತ್ರ ತಿಂಗಳು ರಮಲಾನಿನಲ್ಲಿ, ಬಹುಶಃ ಮಲಬಾರ್ ಹೊರತುಪಡಿಸಿ ಭಾರತದಾದ್ಯಂತ ರೂಹ್ ಅಫ್ಝಾ ಇಲ್ಲದ ಇಫ್ತಾರಿನ ಕೂಟ ಅತಿ ವಿರಳ ಎನ್ನಬಹುದು. ದೆಹಲಿಯ ಓರ್ವ ಸಣ್ಣ ವ್ಯಾಪಾರಿ ತಯಾರಿಸಿದ ಈ ತಂಪು ಪಾನೀಯ ಜನ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಾಡಾದ ಹಿಂದಿನ ಒಂದು ಶತಮಾನದ ಚರಿತ್ರೆ ರೋಚಕ.
1907 ರ ಆಸುಪಾಸಿನಲ್ಲಿ ಯುನಾನಿ ವೈದ್ಯರಾಗಿದ್ದ ಹಕೀಮ್ ಹಮೀದ್ ಅಬ್ದುಲ್ ಮಜೀದ್ ಅವರು ಹಮ್ದರ್ದ್ ಎಂಬ ಹೆಸರಿನಲ್ಲಿ ಪಾರಂಪರಿಕ ಯುನಾನಿ ಔಷದಾಲಯ ಪ್ರಾರಂಭಿಸಿದರು. ದೆಹಲಿಯ ಬೇಸಿಗೆಯ ಬೇಗೆ ಭಯಾನಕವಾಗಿದ್ದರಿಂದ, 1910 ರ ವೇಳೆ ಹಲವಾರು ಔಷಧ ಗಿಡಮೂಲಿಕೆಗಳನ್ನು ಉಪಯೋಗಿಸಿ ನವೀನ ತಂಪು ಪಾನೀಯ ತಯಾರಿಸುವಲ್ಲಿ ಅವರು ಯಶಸ್ವಿಯಾದರು. ಸೂರ್ಯನ ತೀವ್ರ ಶಾಖದ ಹೊಡೆತದಿಂದ ಜನರನ್ನು ರಕ್ಷಿಸುವ ಅವರ ಕಾಳಜಿ, ಸಾಂಪ್ರದಾಯಿಕ ಯುನಾನಿ ಔಷಧ ಗಿಡಮೂಲಿಕೆಗಳ ಮಿಶ್ರಣದ ಫಲದಿಂದ 'ರೂಹ್ ಅಫ್ಝಾ' ಮಾರುಕಟ್ಟೆ ತಲುಪಿತು. ಈ ಶಾಖ ನಿವಾರಕ ಪಾನೀಯದ ಮುಖ್ಯ ಪದಾರ್ಥಗಳಲ್ಲಿ ಗುಲಾಬಿ, ಕೇದಗೆ, ಕ್ಯಾರೆಟ್ ಮತ್ತು ಪಾಲಕ್‌ನ ಸಾರಗಳು ಅಡಗಿವೆ.
ತಮ್ಮ ನೂತನ ಉತ್ಪನ್ನ ಮಾರುಕಟ್ಟೆಯಲ್ಲಿ ಯಶಸ್ವಿಗೊಳ್ಳಲಾರಂಭಿಸಿದ ನಂತರ, ಹಕೀಮ್ ಸಾಹಬ್ ಬಾಟಲಿಯ ಲೋಗೋವನ್ನು ಸ್ಥಳೀಯ ಕಲಾವಿದ 'ಮಿರ್ಜಾ ನೂರ್ ಅಹ್ಮದ್' ಅವರ ಮೂ byಲಕ ವಿನ್ಯಾಸಗೊಳಿಸಿದರು. ಆ ವೇಳೆ ದೆಹಲಿಯಲ್ಲಿ ಮುದ್ರಣವು ಗಮನಾರ್ಹವಾಗಿ ಮುಂದುವರೆದಿರಲಿಲ್ಲವಾದ್ದರಿಂದ ಹಕೀಮ್ ಸಾಹಬ್ to ಮುಂಬೈನಲ್ಲಿರುವ
ಬಾಂಬೆ ಫಾರ್ಸಿಗಳ ಬೋಲ್ಟನ್ ಪ್ರೆಸ್ ಅನ್ನು ಅದಕ್ಕಾಗಿ ಸಂಪರ್ಕಿಸಿದರು. ಆರಂಭದಲ್ಲಿ ಕೆಲವು ತಿಂಗಳುಗಳ ಕಾಲ ರೂಹ್ ಅಫ್ಝಾವನ್ನು ವೈನ್ ಬಾಟಲಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.
ದೇಶ ವಿಭಜನೆ ಮತ್ತು ರೂಹ್ ಅಫ್ಝಾದ ಪಲಾಯನದ ಕಥೆ :
1925 ರಲ್ಲಿ ಹಕೀಮ್ ಸಾಹಬ್ ಅವರ ನಿಧನದ ನಂತರ, ಅವರ ಪತ್ನಿ ರಾಬಿಯಾ ಬೇಗಂ ಅವರು ತಮ್ಮ ಮತ್ತು ಇಬ್ಬರು ಗಂಡು ಮಕ್ಕಳ ಹೆಸರಿನಲ್ಲಿ ದತ್ತಿ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಹಂತದಲ್ಲಿ, ರೂಹ್ ಅಫ್ಜಾ ದೇಶದ ಎಲ್ಲೆಡೆ ತನ್ನ ಮಾರುಕಟ್ಟೆ ಬಲ ಹಿಡಿದಿತ್ತು. 1947 ರ ಭಾರತ ವಿಭಜನೆ ಈ ಯಶಸ್ಸಿನ ಓಟದ ಮತ್ತೊಂದು ಮೈಲಿಗಲ್ಲಿನ ಪ್ರಾರಂಭಕ್ಕೆ ಕಾರಣವಾಯಿತು.
ವಿಭಜನೆಯ ನಂತರ ಹಕೀಮ್ ಸಾಹಬ್ ಅವರ ಹಿರಿಯ ಮಗ ಹಕೀಮ್ ಅಬ್ದುಲ್ ಹಮೀದ್ ಭಾರತದಲ್ಲಿಯೇ ಉಳಿದರು. ಆದರೆ, ಕಿರಿಯ ಮಗ ಹಕೀಮ್ ಮೊಹಮ್ಮದ್ ಪಾಕಿಸ್ತಾನಕ್ಕೆ ವಲಸೆ ಹೋದರು. ನಂತರ ಅವರು ಕರಾಚಿಯಲ್ಲಿ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಪ್ರತ್ಯೇಕ ಹಮ್'ದರ್ದ್ ಕಂಪನಿಯನ್ನು ತೆರೆದರು. ನಂತರ 1953 ರಲ್ಲಿ ಅವರು ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಒಂದು ಸಣ್ಣ ಶಾಖೆಯನ್ನು ಸಹ ಪ್ರಾರಂಭಿಸಿದರು. ಬಾಂಗ್ಲಾದೇಶದ ಸ್ವಾತಂತ್ರ್ಯದ ನಂತರ ಮೊಹಮ್ಮದ್ ತಮ್ಮ ಈ ಅಂಗಸಂಸ್ಥೆಯನ್ನು ಸ್ಥಳೀಯ ಉದ್ಯಮಿಯೊಬ್ಬರಿಗೆ ಉಡುಗೊರೆಯಾಗಿ ನೀಡಿದರು. ಆದರೆ, ಬಾಂಗ್ಲಾದೇಶದ ಆ ಉದ್ಯಮಿ ಹಮ್'ದರ್ದ್ ಹೆಸರಿನಲ್ಲಿಯೇ ಹಲವು ವರ್ಷಗಳ ಕಾಲ ಅದನ್ನು ಮುಂದುವರೆಸಿದರು. ಹೀಗಾಗಿ, ರೂಹ್ ಅಫ್ಝಾ ಬಾಂಗ್ಲಾದೇಶದ ಮಾರುಕಟ್ಟೆಯಲ್ಲಿಯೂ ತನ್ನ ಸ್ಥಾನ ಭದ್ರಗೊಳಿಸಿತು.
ಗಡಿಗಳಾಚೆಗಿನ ಪಲಾಯನದ ಮಧ್ಯೆ ಈ ಉತ್ಪನ್ನ ತನ್ನ ರುಚಿ ಮತ್ತು ಗುಣಮಟ್ಟದಲ್ಲಿ ಕೊರತೆ ಬಾರದಂತೆ ಆಸ್ಥೆ ವಹಿಸಿದೆ. ಪ್ರಸ್ತುತ, ಹಮ್'ದರ್ದ್ ವೈದ್ಯಕೀಯ ಶಾಲೆಯು ಪ್ರತೀ ವರ್ಷ ನಲವತ್ತು ಮಿಲಿಯನ್ ಈ ಐಕಾನಿಕ್ ಪಾನೀಯದ ಬಾಟಲಿಗಳನ್ನು ಮಾರಾಟ ಮಾಡುವ ಮೂಲಕ ವಾರ್ಷಿಕ ಸಾವಿರ ಕೋಟಿಗಳ ಹತ್ತಿರ ಆದಾಯವನ್ನು ಗಳಿಸುತ್ತಿದೆ. ಪ್ರಸ್ತುತ ಇದು ಭಾರತದಲ್ಲಿ ಮೂರು ಬಾಟಲ್ ಪ್ಲಾಂಟ್‌ಗಳನ್ನು ಹೊಂದಿದ್ದು ಅದರ ಲಾಭದ 85% ಹಮ್'ದರ್ದ್ ನ್ಯಾಷನಲ್ ಫೌಂಡೇಶನ್ (HNF) ಗೆ ವರ್ಗಾಯಿಸುತ್ತದೆ. ಅದು ವಿವಿಧ ಯೋಗಕ್ಷೇಮ ಕಾರ್ಯಕ್ರಮಗಳಲ್ಲಿ ಸಕ್ರಿಯಗೊಂಡ ದತ್ತಿ ಸಂಸ್ಥೆಗಳಿಗೆ ತಲುಪಿಸುತ್ತದೆ. ಹೊಸ ಬಳಕೆದಾರರನ್ನು ಗುರಿಯಾಗಿಸಿಕೊಂಡು, ರೂಹ್ ಅಫ್ಜಾ ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸುತ್ತಿದೆ. ಈ ಮೂಲಕ ರೂಹ್ ಅಫ್ಝಾ ಒಂದು ತಲೆಮಾರಿನ ಚರಿತ್ರೆಯನ್ನು ತನ್ನ ಒಡಲಲ್ಲಿ ಭದ್ರವಾಗಿರಿಸಿದೆ. ದೇಶ ವಿಭಜನೆಯ ನಂತರವೂ ಪರಸ್ಪರ ಮನಸ್ಸು ಬೆಸೆಯಲು ಪ್ರೇಮದ ಘಮ ಸೂಸುತ್ತಲೇ ಇದೆ.
~ ಅಬ್ದುಸ್ಸಲಾಮ್ ಮುಈನಿ ಮಿತ್ತರಾಜೆ.








Comments