top of page

ಅಲ್ಲಾಹನ ಔಲಿಯಾಗಳನ್ನು ಅವಮಾನಿಸಿದರೆ.!


ree

ಜೀಲಾನಿ ಶೈಖರ ಜೀವನಪಾಠ-11


ಅಲ್ಲಾಹನ ಔಲಿಯಾಗಳನ್ನು ಸದಾ ಗೌರವಿಸುವುದು ಶೈಖ್ ಮುಹ್ಯಿದ್ದೀನ್ ರಳಿಯಲ್ಲಾಹು ಅನ್ಹುರವರ ಉದಾತ್ತವಾದ ಜೀವನದ ಒಂದು ವಿಶೇಷತೆಯಾಗಿತ್ತು. ಶೈಖರ ಬಾಲ್ಯದಲ್ಲಿಯೇ ಔಲಿಯಾಗಳನ್ನು ಸಂದರ್ಶಿಸುವುದು, ಅವರನ್ನು ಗೌರವಿಸುವುದು, ಅವರೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸುವುದನ್ನು ಮಾಡುತ್ತಿದ್ದರು.


ಅಬೂಸಈದ್ ಅಬ್ದುಲ್ಲಾಹಿಬ್ನು ಅಬೀ ಅಸ್ರೂನ್ ಎಂಬವರು ಬಗ್ದಾದಿಗೆ ಜ್ಞಾನವನ್ನರಸಿ ಬಂದಾಗ ಇಬ್ನು ಸಖರನ್ನು ಭೇಟಿಯಾಗಿದ್ದರು. ಅವರೊಂದಿಗೆ ಜೊತೆಗೂಡಿ ಮದ್ರಸತುನ್ನಿಝಾಮಿಯಾದಲ್ಲಿ ವಿದ್ಯಾರ್ಜನೆಗೈಯ್ಯುತ್ತಿದ್ದರು. ಅವರಿಗೆ ಆಗಾಗ್ಗೆ ಔಲಿಯಾಗಳನ್ನು ಭೇಟಿಯಾಗಿ ಬರ್ಕತ್ ಪಡೆಯುವ ಅಭ್ಯಾಸವಿತ್ತು. ಅಂದು ಬಗ್ದಾದಿನಲ್ಲಿ“ಔಸ್”ಎಂಬ ಪ್ರಸಿದ್ಧ ವಲಿಯೊಬ್ಬರಿದ್ದರು. ಅವರು ಇಷ್ಟ ಬಂದಾಗ ಪ್ರತ್ಯಕ್ಷವಾಗುವ, ಅಪ್ರತ್ಯಕ್ಷವಾಗುವ ಮಹಾಶಕ್ತಿಯನ್ನು ಹೊಂದಿದ್ದರು. ಅವರನ್ನು ಸಂದರ್ಶಿಸಲು ಇಬ್ನ್ ಅಬೀ ಅಸ್ರ್, ಇಬ್ನ್ ಸಖ, ಹಾಗೂ ಶೈಖ್ ಜೀಲಾನಿರವರು ತೀರ್ಮಾನಿಸಿದರು.


ಅವತ್ತು ಶೈಖ್ ಜೀಲಾನಿರವರು ಸಣ್ಣ ಬಾಲಕ. ಯಾತ್ರಾ ಮದ್ಯೆ ಇಬ್ನು ಸಖ ಮಾತಿಗಿಳಿದರು:“ನಾನು ಆ ವಲಿಯ್ಯಿನೊಂದಿಗೆ ಉತ್ತರ ಕೊಡಲು ಸಾಧ್ಯವಾಗದ ಒಂದು ಪ್ರಶ್ನೆಯನ್ನು ಕೇಳುವ ಉದ್ದೇಶದಲ್ಲಿದ್ದೇನೆ.”ಇಬ್ನು ಅಬೀ ಅಸ್ರೂನ್ ಕೂಡ ಧ್ವನಿಗೂಡಿಸಿದರು.“ನನಗೂ ಕೇಳಬೇಕು. ಉತ್ತರ ಹೇಗಿರುತ್ತದೆ ಎಂದು ನೋಡೋಣ.”ಆಗ ಸಣ್ಣ ಬಾಲಕನಾದ ಶೈಖ್ ಅಬ್ದುಲ್ ಖಾದಿರ್ ಜೀಲಾನಿರವರು ಹೀಗೆ ಹೇಳಿದರು:“ಅಲ್ಲಾಹನು ಕಾಪಾಡಲಿ. ನಾನು ಯಾವುದೇ ಪ್ರಶ್ನೆಯನ್ನು ಕೇಳುವುದಿಲ್ಲ. ಅವರನ್ನು ನೋಡಿ ಬರ್ಕತ್ ಪಡೆಯುವುದಷ್ಟೇ ನನ್ನ ಉದ್ದೇಶ.” ಆ ವಲಿಯನ್ನು ಭೇಟಿಯಾದಾಗ, ವಲಿಯ್ಯರು ಇಬ್ನು ಸಖರನ್ನು ಕೋಪದಿಂದ ದಿಟ್ಟಿಸಿ“ಓ ಇಬ್ನು ಸಖ, ನೀನು ನನಗೆ ಉತ್ತರಿಸಲಾಗದ ಪ್ರಶ್ನೆ ಕೇಳಬೇಕೆಂದು ಯೋಚಿಸುತ್ತಿದ್ದೀಯಾ? ನಿನ್ನ ಪ್ರಶ್ನೆಯೇ ಇದು. ಅದರ ಉತ್ತರವೇ ಇದು. ನಿನ್ನೊಳಗೆ ಕುಫ್ರಿನ ಕಿಡಿ ಉರಿಯುತ್ತಿರುವುದನ್ನು ನಾನು ಕಾಣುತ್ತಿದ್ದೇನೆ.”ಎಂದುಬಿಟ್ಟರು.


ನಂತರ ಅವರು ಇಬ್ನು ಅಬೀ ಅಸ್ರೂನರನ್ನು ನೋಡಿ ಹೀಗೆ ಹೇಳಿದರು:“ಓ ಅಬ್ದುಲ್ಲಾ, ನೀನು ನಾನು ಹೇಗೆ ಉತ್ತರ ಕೊಡುತ್ತೇನೆ ಎಂಬ ಕಾತರದಲ್ಲಿದ್ದೀಯಾ? ನಿನ್ನ ಪ್ರಶ್ನೆ ಇದು. ಅದರ ಉತ್ತರ ಇದು. ಆದರೆ ನಿನ್ನ ಮರ್ಯಾದೆಯಿಲ್ಲದ ವರ್ತನೆಯ ಕಾರಣ ನೀನು ಇಹಲೋಕದ ಚಿಂತೆಯಲ್ಲೇ ಹೆಚ್ಚು ಕಾಲ ಕಳೆಯುವೆ.”


ನಂತರ ಶೈಖ್ ಅಬ್ದುಲ್ ಖಾದಿರ್ ಜೀಲಾನಿರವರನ್ನು ಹತ್ತಿರ ಕರೆದು ಗೌರವಿಸಿ ಹೇಳಿದರು:“ಓ ಅಬ್ದುಲ್ ಖಾದಿರ್, ನಿನ್ನ ಉತ್ತಮ ಗುಣದ ಕಾರಣ ನೀನು ಅಲ್ಲಾಹನನ್ನೂ, ಅವನ ರಸೂಲನ್ನೂ ಸಂತೋಷಪಡಿಸಿರುವೆ. ನಾನು ನಿನ್ನನ್ನು ಜನರ ಮುಂದೆ ಕುಳಿತು ದೀನ್ ಬೋಧಿಸುವುದನ್ನು ಕಾಣುತ್ತಿದ್ದೇನೆ. ನೀನು ಹೀಗೆ ಹೇಳುತ್ತಿರುವುದನ್ನು ಕೇಳಿಸುತ್ತಿದ್ದೇನೆ: ‘ನನ್ನ ಕಾಲು ಎಲ್ಲ ಔಲಿಯಾಗಳ ಹೆಗಲ ಮೇಲೆಯಿದೆ’. ಎಲ್ಲ ಔಲಿಯಾಗಳೂ ನಿನಗೆ ಅಧೀನರಾಗಿದ್ದಾರೆ.”ಹೀಗೆ ಹೇಳಿ ಆ ವಲಿ ಅಪ್ರತ್ಯಕ್ಷರಾದರು. ನಂತರ ಶೈಖ್ ಅಬ್ದುಲ್ ಖಾದಿರ್ ಜೀಲಾನಿರವರು ಅಲ್ಲಿನ ಶ್ರೇಷ್ಠ ಸ್ಥಾನಕ್ಕೆ ಏರಿದರು. ವಿದ್ವಾಂಸರು, ಸಾಮಾನ್ಯರೂ ಅವರನ್ನು ಅಂಗೀಕರಿಸಿದರು.


ಇಬ್ನು ಸಖರು ಪ್ರಾರಂಭದಲ್ಲಿ ಜ್ಞಾನ ಪ್ರಸರಣದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಅದರಲ್ಲಿ ಅವರನ್ನು ಮೀರಿಸುವ ಒಬ್ಬರೇ ಒಬ್ಬ ವ್ಯಕ್ತಿ ಸಮಕಾಲೀನರಲ್ಲಿ ಇರಲಿಲ್ಲವೆನ್ನುವಷ್ಟರ ಮಟ್ಟಕ್ಕೆ ಬೆಳೆದಿದ್ದರು. ಅವರೊಂದಿಗೆ ಸಂವಾದ ಮಾಡಿದವರಲ್ಲಿ ಯಾರೂ ಗೆದ್ದವರಿಲ್ಲ. ಅವರ ಮಾತುಗಳಲ್ಲಿನ ಸಾಹಿತ್ಯ ಸಮೃದ್ಧಿ, ಅಗಾಧ ಪಾಂಡಿತ್ಯವನ್ನು ಕಂಡ ಅಲ್ಲಿನ ರಾಜರು ಅನೇಕ ಗೌರವಕಾಣಿಕೆಗಳನ್ನು ನೀಡುವುದರೊಂದಿಗೆ, ಅವರನ್ನು ರೋಮಿಗೆ ಪ್ರತಿನಿಧಿಯಾಗಿ ಕಳುಹಿಸಿದ್ದರು. ಇವರ ಪಾಂಡಿತ್ಯವನ್ನು ಕಂಡು ರೋಮಿನ ರಾಜರಿಗೆ ಅಚ್ಚರಿಯೆನಿಸಿದ್ದರು. ಅಲ್ಲಿರುವ ಕ್ರಿಶ್ಚಿಯನ್ ಪಂಡಿತರನ್ನು ಇವರು ಸಂವಾದದಲ್ಲಿ ಸೋಲಿಸಿದರು. ಆದರೆ ಒಂದೊಮ್ಮೆ ರಾಜನ ಮಗಳನ್ನು ಕಂಡು ಅವಳ ಸೌಂದರ್ಯಕ್ಕೆ ಮಾರುಹೋದರು. ಅವಳನ್ನು ವಿವಾಹವಾಗುವ ಆಸೆಯನ್ನು ರಾಜರ ಮುಂದಿಟ್ಟರು. ಹೆಣ್ಣಿಗಾಗಿ ರಾಜರ ಆಜ್ಞೆಯಂತೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಬೇಕಾಯಿತು. ಅನಾರೋಗ್ಯಕ್ಕೊಳಗಾಗಿ ಜನರಿಂದ ತಿರಸ್ಕೃತರಾದರು. ಅವರಿಗೆ ಆಹಾರವೂ ದೊರಕದೇ, ಬೀದಿಗಳಲ್ಲಿ ನರಳಾಡಿದರು. ದಾರಿಹೋಕರಲ್ಲಿ ಪರಿಚಯಸ್ಥರೊಬ್ಬ ತನಗೆ ಬಂದ ಈ ಅವಸ್ಥೆಯ ಬಗ್ಗೆ ಕೇಳಿದಾಗ, ಅವರು“ಇದು ನನಗುಂಟಾದ ಅತಿದೊಡ್ಡ ಅನಾಹುತ. ಕಾರಣ ನಿನಗೂ ಗೊತ್ತಿರಬಹುದು.”ದಾರಿಹೋಕ ಕೇಳಿದನು:“ಖುರಾನಿನ ಏನಾದರೂ ನೆನಪಿದೆಯೇ?.”“ ಹಿಜ್ರಾ ಅಧ್ಯಾಯದ ಒಂದು ಸೂಕ್ತವನ್ನು ಹೊರತುಪಡಿಸಿ ಎಲ್ಲವೂ ಮರೆತುಹೋಗಿದೆ. ‘ಸತ್ಯ ನಿಷೇಧಿಗಳು, ನಾವು ಮುಸ್ಲಿಮರಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!’. ಎಂಬ ಅರ್ಥ ಬರುವ ಸೂಕ್ತ ಮಾತ್ರ ನೆನಪಿನಲ್ಲಿದೆ.”


ಕೆಲವು ಕಾಲಗಳ ಬಳಿಕ ಸ್ನೇಹಿತ ಇಬ್ನ್ ಅಸ್ರ್ ಇಬ್ನ್ ಸಖರನ್ನು ಕಂಡಾಗ ಅವರ ಮುಖವೆಲ್ಲ ವಿವರ್ಣವಾಗಿತ್ತು. ‘ಇದು ಅವರ ಕೊನೆಯ ಗಳಿಗೆ’ ಎಂದು ಮನದಟ್ಟು ಮಾಡಿಕೊಂಡ ಇಬ್ನ್ ಅಸ್ರ್ ಅವರನ್ನು ಖಿಬ್ಲಾಭಿಮುಖವಾಗಿ ಮಲಗಿಸಿದರು. ಆದರೆ ಅವರಿಗೆ ಹಾಗೆ ಮಲಗಲು ಸಾಧ್ಯವಾಗದೇ, ಪೂರ್ವದತ್ತ ತಿರುಗಿದರು. ಎಷ್ಟೇ ಸಲ ಖಿಬ್ಲಾಭಿಮುಖವಾಗಿಸಿದರೂ ಕ್ರಮೇಣ ತಿರುಗುತ್ತಿತ್ತು. ಕೊನೆಗೆ ಅವರು ಪೂರ್ವದತ್ತ ಮುಖ ಮಾಡಿ ಇಹಲೋಕ ತ್ಯಜಿಸಿದರು. ವಲಿಯರು ಅಂದು ಹೇಳಿದ ಮಾತುಗಳು ಒಳಗೊಳಗೇ ಕೊರೆಯುತ್ತಿತ್ತು.


ಇಬ್ನು ಅಬೀ ಅಸ್ರೂನ್ ಡಮಸ್ಕಸ್‌ಗೆ ತೆರಳಿ, ಸುಲ್ತಾನ್ ನೂರುದ್ದೀನ್ ಶಹೀದ್ ಅವರ ಬಳಿಗೆ ಹೋದರು. ಅವರಿಗೆ ಅಲ್ಲಿನ ಅಧಿಕಾರ ದೊರೆಯಿತು. ಹೀಗೆ ಅವರ ಜೀವನ ಪ್ರಾಪಂಚಿಕದತ್ತ ತಿರುಗಿತು.


(ಅಲ್-ಫತಾವಾ ಅಲ್-ಹದೀಥೀಯ/ಇಬ್ನು ಹಜರ್ ಅಲ್-ಹೈತಮಿ)


ಈ ಘಟನೆಯ ತಿರುಳೇನೆಂದರೆ ಅಲ್ಲಾಹನ ಇಷ್ಟದಾಸರನ್ನು ಅವಮಾನಿಸುವವರಿಗೆ ಇಬ್ನು ಸಖರಂತೆಯೇ ದುಃಖತಪ್ತ ವಿನಾಶ ಬರುವ ಸಾಧ್ಯತೆಯಿದೆ ಎಂಬುದಾಗಿದೆ. ಇಬ್ನು ಹಜರ್ ಅಲ್-ಹೈತಮಿರವರು ಇದನ್ನು ಎಚ್ಚರಿಕೆಯ ಅಧ್ಯಾಯವಾಗಿ ದಾಖಲಿಸಿಕೊಂಡಿದ್ದಾರೆ.


ಅಲ್ಲಾಹನು ನಮ್ಮನ್ನು ಕಾಪಾಡಲಿ. ಆಮೀನ್.

 
 
 

Comments


bottom of page