ಪಾದರಕ್ಷೆಯಿಂದ ಘೋರ ಶಬ್ದ
- Mueenussannah Online
- Sep 29
- 1 min read

ಜೀಲಾನಿ ಶೈಖರ ಜೀವನ ಪಾಠ-05
ಖಾಫಿಲಕ್ಕರಾರೆ ಕಳ್ಳರ್ ಫಿಡಿಚ್ಚಾರೆ
ಕಾಣಾನಿಲತ್ತಿನ್
ಖಬ್-ಖಾಬಾಲ್ ಕಾಣೋವರ್
ಹಿಜರಿ 555 ಸಫರ್ ಮೂರರ ಭಾನುವಾರ.
ಶೈಖ್ ಅಬೂ ಅಮ್ರ್ ಉಸ್ಮಾನ್ ಸರೀಫ್ ಮತ್ತು ಶೈಖ್ ಅಬೂ ಮುಹಮ್ಮದ್ ಅಬ್ದುಲ್ ಹಖ್ ಹರೀಮಿರವರು ಮುಹ್ಯಿದ್ದೀನ್ ಶೈಖ್ ಜೀಲಾನಿರವರ ಸನ್ನಿಧಿಯಲ್ಲಿದ್ದರು. ಮಹಾನುಭಾವರು ಅಂಗಸ್ನಾನ ಮಾಡಿ ಎರಡು ರಕ್ಅತ್ ನಮಾಜ್ ಮಾಡಿದರು. ಸಲಾಮಿನ ಬಳಿಕ ಆಕ್ರಂದನದೊಂದಿಗೆ ತಮ್ಮ ಕಾಲಿನಲ್ಲಿದ್ದ ಒಂದು ಪಾದರಕ್ಷೆಯನ್ನು ಗಾಳಿಯಲ್ಲಿ ಎಸೆದರು. ಅದು ಮಾಯವಾಯಿತು. ಮತ್ತೆ ಅದೇ ರೀತಿಯ ಆಕ್ರಂದನದೊಂದಿಗೆ ಇನ್ನೊಂದು ಪಾದರಕ್ಷೆಯನ್ನೂ ಎಸೆದರು. ಅದು ಕೂಡ ಮಾಯವಾಯಿತು. ನಂತರ ಮಹಾನುಭಾವರು ಅಲ್ಲೇ ಕುಳಿತರು. ನಡೆದ ವಿಚಾರದ ಕುರಿತು ಪ್ರಶ್ನಿಸಲು, ಅನ್ವೇಷಿಸಲು ಯಾರಿಗೂ ಧೈರ್ಯವಿರಲಿಲ್ಲ.
23 ದಿನಗಳ ನಂತರ ಅನರಬಿಗಳ ಒಂದು ಯಾತ್ರಾ ತಂಡ ಶೈಖರ ಬಳಿ ಬಂದು, ಶೈಖರಿಗಾಗಿ ಕಾಣಿಕೆಗಳನ್ನು ಅರ್ಪಿಸಿದರು. ಮಹಾನುಭಾವರು ತಮ್ಮ ಸಮೀಪದಲ್ಲಿದ್ದ ಶೈಖ್ ಅಬೂ ಅಮ್ರ್ ಉಸ್ಮಾನ್ ಸರೀಫಿನಿ ಹಿಗೂ ಶೈಖ್ ಅಬೂ ಮುಹಮ್ಮದ್ ಅಬ್ದುಲ್ ಹಖ್ ಹರೀಮಿರವರೊಂದಿಗೆ ಕಾಣಿಕೆಯ ವಸ್ತುಗಳನ್ನು ತೆಗೆದಿಡಲು ನೀಡಿದರು. ಅದರಲ್ಲಿ ರೇಷ್ಮೆಬಟ್ಟೆಗಳು ಮತ್ತು ಚಿನ್ನದ ಜೊತೆಗೆ ಶೈಖರು ದಿನಗಳ ಹಿಂದೆ ಎಸೆದಿದ್ದ ಎರಡು ಪಾದರಕ್ಷೆಗಳೂ ಇದ್ದವು.
ಆ ಇಬ್ಬರು ಶೈಖರು ಅಚ್ಚರಿಯಿಂದ, ಯಾತ್ರಾ ತಂಡದವರಲ್ಲಿ ಪಾದರಕ್ಷೆಯ ಕುರಿತು ವಿಚಾರಿಸಿದರು. ಅವರು ಹೇಳಿದರು:“ಸಫರ್ 3 ರಂದು ನಾವು ಪ್ರಯಾಣಿಸುತ್ತಿದ್ದಾಗ, ಒಂದು ಕಾಡಿನ ದರೋಡೆಕೋರರ ಗುಂಪೊಂದು ಇಬ್ಬರು ನಾಯಕರ ನೇತೃತ್ವದಲ್ಲಿ ನಮ್ಮ ಮೇಲೆ ಮೇಲೆ ದಾಳಿ ಮಾಡಿತು. ನಮ್ಮಲ್ಲಿದ್ದ ಆಸ್ತಿಗಳನ್ನು ಲೂಟಿ ಮಾಡಿದರು. ನಮ್ಮೊಂದಿಗಿದ್ದ ಕೆಲವರನ್ನು ಹತ್ಯೆಗೈದರು. ಬಳಿಕ ಅವರು ಒಂದು ಪರ್ವತದ ತಳದಲ್ಲಿ ಕುಳಿತು ಲೂಟಿ ಮಾಡಿದ ಆಸ್ತಿಗಳನ್ನು ಹಂಚಿಕೊಳ್ಳುತ್ತಿದ್ದರು. ತಗ್ಗು ಪ್ರದೇಶದ ಇನ್ನೊಂದು ಭಾಗದಲ್ಲಿ ದುಃಖಿತರಾಗಿ ನಾವು ಕುಳಿತಿದ್ದಾಗ ಮುಹ್ಯಿದ್ದೀನ್ ಶೈಖ್ಅವರನ್ನು ನೆನೆದು, ಶೈಖರಿಗೆ ಆಸ್ತಿಯ ಒಂದು ಭಾಗವನ್ನು ಹರಕೆ ಮಾಡಲು ತೀರ್ಮಾನಿಸಿದೆವು.
ತಕ್ಷಣವೇ ಎರಡು ಘೋರ ಶಬ್ದಗಳು ಕೇಳಿಬಂದವು. ಆ ಶಬ್ದದಿಂದ ಪರ್ವತಗಳು ನಡುಗಿದವು. ಕಳ್ಳರು ಭಯಭೀತಗೊಂಡು, ಬೇರೆ ದರೋಡೆಕೋರರ ದಾಳಿಯಾಗಿರಬಹುದೋ ಎಂದು ಭಾವಿಸಿ, ನಡುಗಿದರು. ಸ್ವಲ್ಪ ಹೊತ್ತಿನ ಬಳಿಕ ಆ ದರೋಡೆಕೋರರ ತಂಡವು ನಮ್ಮ ಬಳಿಗೆ ಬಂದು: ‘ನಿಮ್ಮ ಎಲ್ಲಾ ಆಸ್ತಿಗಳನ್ನು ನೀವೇ ಹಿಂಪಡೆಯಿರಿ. ನಮ್ಮ ಮೇಲೆ ಬಂದೆರಗಿದ ಆಪತ್ತನ್ನು ನೋಡಿರಿ’ ಎಂದರು. ಬಳಿಕ ನಮ್ಮನ್ನು ಅವರ ನಾಯಕರ ಬಳಿಗೆ ಕರೆದೊಯ್ದರು. ಇಬ್ಬರು ನಾಯಕರೂ ಹತರಾಗಿದ್ದರು. ಅವರ ಪಕ್ಕದಲ್ಲಿ ಒಂದೊಂದು ಒದ್ದೆಯಾದ ಪಾದರಕ್ಷೆಗಳು ಬಿದ್ದಿದ್ದವು. ‘ಇದರಲ್ಲಿ ಏನೋ ದೊಡ್ಡ ರಹಸ್ಯವಿದೆ’ ಎಂದು ಅವರು ಹೇಳಿದರು.’
(ಮೂಲ: ಬಹ್ಜತುಲ್ ಅಸ್ರಾರ್)
ಶೈಖರ ಬರಕತ್ತಿನಿಂದ ಅಲ್ಲಾಹನು ನಮ್ಮನ್ನು ಎಲ್ಲಾ ವಿಪತ್ತುಗಳಿಂದ ಕಾಪಾಡಲಿ. ಆಮೀನ್.
-ಮುಂದುವರಿಯುವುದು…






Comments