top of page

ಸಾಂತ್ವನದ ನೆರಳು

ree

ಜೀಲಾನಿ ಶೈಖರ ಜೀವನ ಪಾಠ-07


ಜಿನ್ನೋರು ಪೈದಾಲೆ

ಕೊಂಡುಪೋಯಿ ವಿಟ್ಟಾರೆ

ಜಿನ್ನೇ ವಿಳಿಪ್ಪಿಚ್ಚದಿನೆ

ಕೊಡುತ್ತೋವರ್


ಒಮ್ಮೆ ಅಬೂಸಅದ್ ಅಬ್ದುಲ್ಲಾಹ್ ಇಸ್ಜಿಯವರ ಹದಿನಾರು ವರ್ಷದ ಮಗಳು ಮನೆಯ ಮೇಲ್ಚಾವಣಿಯಲ್ಲಿ ಕುಳಿತಿದ್ದಾಗ ಒಂದು ಜಿನ್ನು ಅವಳನ್ನು ಅಪಹರಿಸಿತ್ತು. ಪರಿಹಾರಕ್ಕಾಗಿ ಇಸ್ಜಿಯವರು ಶೈಖರ ಬಳಿಗೆ ತೆರಳಿ ಬೇಡಿದರು. ಶೈಖರು:“ಇಂದು ರಾತ್ರಿ ನೀನು ಕರ್ಗಿಲ್‌ ಎಂಬ ನಿರ್ಜನ ಪ್ರದೇಶಕ್ಕೆ ಹೋಗಿ ಐದನೇ ಗುಡ್ಡದ ಮೇಲೆ ಕುಳಿತುಕೊಂಡು, ‘ಬಿಸ್ಮಿಲ್ಲಾಹಿ ಅಲಾ ನಿಯ್ಯತಿ ಅಬ್ದಿಲ್ ಖಾದಿರ್’ ಎಂದು ಹೇಳಿ ಸುತ್ತಲೂ ಒಂದು ವೃತ್ತ ಎಳೆಯಬೇಕು. ರಾತ್ರಿ ಹಲವು ರೂಪಗಳಲ್ಲಿರುವ ಜಿನ್ನುಗಳು ನಿನ್ನ ಬಳಿಯಿಂದ ಹಾದು ಹೋಗುವರು. ಆದರೆ ನೀನು ಭಯಪಡಬಾರದು, ಎದೆಗುಂದಬಾರದು. ಸಹರಿ ಸಮಯದಲ್ಲಿ ಜಿನ್ನುಗಳ ರಾಜ ಆಗಮಿಸುವಾಗ ಆತನೊಂದಿಗೆ ‘ಮಗಳ ವಿಷಯದಲ್ಲಿ ನನ್ನನ್ನು ಅಬ್ದುಲ್ ಖಾದಿರ್ ನಿಮ್ಮ ಬಳಿಗೆ ಕಳುಹಿಸಿದ್ದಾನೆ’ ಎಂದು ಹೇಳು”ಎಂದಿದ್ದರು.


ಇಸ್ಜಿರವರು ಶೈಖರ ಸೂಚನೆಯಂತೆ ಆ ರಾತ್ರಿ ಗುಡ್ಡದ ಮೇಲೇರಿ ವೃತ್ತ ಎಳೆದು ಅದರೊಳಗೆ ನಿಂತರು. ವಿವಿಧ ಭೀಕರ ರೂಪದ ಜಿನ್ನುಗಳು ಹಾದು ಹೋದರೂ ಯಾರಿಗೂ ಆ ವೃತ್ತವನ್ನು ದಾಟಲು ಸಾಧ್ಯವಾಗಲಿಲ್ಲ. ಸಹರಿಯ ಸಮಯವಾದಾಗ ತನ್ನ ಸೈನ್ಯದೊಂದಿಗೆ ಬಂದ ಜಿನ್ನುಗಳ ರಾಜ ವೃತ್ತದ ಹೊರಗೆ ನಿಂತುಕೊಂಡೇ ಅವರನ್ನು ವಿಚಾರಿಸಿದನು. ಅಬೂಸಅದ್ ಹೇಳಿದರು:“ನನ್ನ ಮಗಳ ವಿಷಯದಲ್ಲಿ ಶೈಖ್ ಅಬ್ದುಲ್ ಖಾದಿರ್ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ.” ತಕ್ಷಣವೇ ರಾಜ ಹಾಗೂ ಸೈನ್ಯ ಕುದುರೆಯಿಂದ ಇಳಿದು ಭೂಮಿಯನ್ನು ಚುಂಬಿಸಿ, ವೃತ್ತದ ಬಳಿಯೇ ಕುಳಿತುಕೊಂಡರು. ರಾಜನು ತನ್ನ ಸೈನ್ಯದೊಂದಿಗೆ“ಅವರ ಮಗಳನ್ನು ಅಪಹರಿಸಿದವರು ಯಾರು?. ಆದಷ್ಟು ಬೇಗ ಹುಡುಕಿ ಕರೆತನ್ನಿ”ಎಂದು ಆಜ್ಞಾಪಿಸಿದನು. ಎಲ್ಲರೂ ಆಜ್ಞೆಯನ್ನು ಪಾಲಿಸಿ ಹೊರಟರು. ಸ್ವಲ್ಪ ಹೊತ್ತಿಗಾಗಲೇ ಒಬ್ಬ ಅಹಂಕಾರಿ ಜಿನ್ನಿನೊಂದಿಗೆ ಸೈನ್ಯದ ಆಗಮನವಾಯಿತು. ಅವನೊಂದಿಗೆ ಆ ಹುಡುಗಿಯೂ ಇದ್ದಳು. ಅವನು ಮೂಲತಃ ಚೀನಾದ ಜಿನ್ನೆಂದು ಯಾರೋ ಹೇಳಿದರು.


ರಾಜನು ಆ ಚೀನೀ ಜಿನ್ನಿನೊಂದಿಗೆ “ಖುತುಬಿನ(ಶೈಖ್ ಜೀಲಾನಿ) ಅಧೀನದಲ್ಲಿದ್ದಾಗ ನಿನ್ನನ್ನು ಇದಕ್ಕೆ ಪ್ರೇರೇಪಿಸಿದ್ದಾದರೂ ಏನು?”ಎಂದು ಕೇಳಿದನು. ಅದಕ್ಕೆ“ಅವಳು ನನ್ನ ಹೃದಯದಿಂದ ಆಕರ್ಷಿತಳಾಗಿದ್ದಾಳೆ. ನಾನು ಅವಳನ್ನು ತುಂಬಾ ಪ್ರೀತಿಸುತ್ತಿದ್ದೇನೆ”ಆತ ಉತ್ತರಿಸಿದನು. ಇದನ್ನು ಕೇಳಿದ ತಕ್ಷಣ ರಾಜನು ಆ ಚೀನೀ ಜಿನ್ನಿನ ಶಿರಚ್ಛೇದಕ್ಕೆ ಆದೇಶವಿತ್ತನು. ಮಗಳನ್ನು ಅಬೂಸಅದ್ ಅವರಿಗೆ ಮರಳಿಸಲಾಯಿತು.


(ಮೂಲ: ಬಹ್ಜತುಲ್ ಅಸ್ರಾರ್)


ಅಲ್ಲಾಹನು ಶೈಖರ ಬರಕತ್ತಿನಿಂದ ನಮ್ಮನ್ನೂ, ನಮ್ಮ ಮಕ್ಕಳನ್ನೂ ಎಲ್ಲಾ ರೀತಿಯ ಫಿತ್ನಾಗಳಿಂದ ರಕ್ಷಿಸಲಿ. ಆಮೀನ್.


-ಮುಂದುವರಿಯುವುದು…

 
 
 

Comments


bottom of page