ಕಿತಾಬುಶ್ಶಿಫಾ: ಅನುರಾಗಿಗಳ ಯಾತನೆಗೆ ನೀಡಿದ ಶಮನ | ಭಾಗ- 03
- Asif Adany Al Mueeni
- Sep 30, 2024
- 1 min read
ಶಿಫಾ ಎಂಬ ವಿಸ್ಮಯ ಜಗತ್ತು

ಗ್ರಂಥ ಕರ್ತೃರಾದ ಇಮಾಮ್ ಖಾಳಿ ಇಯಾಳರು ತಮ್ಮ ಕಿತಾಬುಶ್ಶಿಫಾದ ಬಗ್ಗೆ ಈ ರೀತಿ ಉಲ್ಲೇಖಿಸುತ್ತಾರೆ: 'ಅತ್ಯಂತ ಪ್ರಮುಖ ಹಾಗೂ ಇತರೆ ಗ್ರಂಥಗಳಲ್ಲಿ ಸಿಗದ ವಿಷಯಗಳನ್ನು ನಾನು ನನ್ನ ಈ ಶಿಫಾ ಗ್ರಂಥಗಳಲ್ಲಿ ಸೇರಿಸಿರುವೆ.' ಪೈಗಂಬರರ ರೌಳಾ ಸಂದರ್ಶನ ಕುರಿತಿರುವ ಒಂದು ಚರ್ಚೆಯಲ್ಲಿ ಕಿತಾಬುಶ್ಶಿಫಾವನ್ನು ಉಲ್ಲೇಖಿಸಿ ಇಮಾಮ್ ತಖಿಯುದ್ದೀನ್ ಸುಬುಕಿ (ರ) ಬರೆಯುತ್ತಾರೆ. "ಈ ವಿಷಯದಲ್ಲಿ ಇಮಾಮ್ ಮಾಲಿಕ್ (ರ) ರವರ ಮದ್ಹಬಿನ ಕುರಿತಾದ ವಿಜ್ಞಾನದಲ್ಲಿಯುೂ, ನಿಲುವಿನ ವಿಷಯದಲ್ಲೂ ಮುಂಚೂಣಿಯಲ್ಲಿರುವ ಹಾಗೂ ಮಾಲಿಕೀ ಮದ್ಹಬಿನಲ್ಲಿ ಎಲ್ಲರೂ ಒಪ್ಪುವ ಇಮಾಮ್ ಖಾಳಿ ಇಯಾಳ್ (ರ) ಮಾತುಗಳು ಸಮ್ಮತಾರ್ಹವಾಗಿದೆ.
[ಕಿತಾಬು ಶಿಫಾಉಸ್ಸಕಾಂ, ಇಮಾಮ್ ತಖಿಯುದ್ದೀನ್ ಸುಬುಕಿ (ರ) (ಹಿ. 756)]
ಇಮಾಮ್ ಬುರ್ಹಾನುದ್ದೀನ್ (ರ) ಬರೆಯುತ್ತಾರೆ : 'ಕಿತಾಬುಶ್ಶಿಫಾ ಬಿ ತಅರೀಫಿ ಹುಕೂಖಿಲ್ ಮುಸ್ತಾಫಾ, ಇಮಾಮ್ ಖಾಳಿ ಇಯಾಳರ ಮತ್ತೊಂದು ರಚನೆ. ಎಲ್ಲರನ್ನೂ ಅಚ್ಚರಿಗೊಳಿಸಿದ ಗ್ರಂಥ. ಸಮಕಾಲೀನರಿಂದ ಈ ಗ್ರಂಥವನ್ನು ಬಹಳ ಗೌರವದಿಂದ ನೋಡಿಕೊಂಡಿದ್ದರು. ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾದ ಈ ಗ್ರಂಥದಲ್ಲಿನ ಜ್ಞಾನವನ್ನು ಕರಗತಮಾಡಲು ಒಂದೇ ರೀತಿಯಲ್ಲಿ ಮುಂದೆ ಬಂದರು. ಜನರೆಲ್ಲರೂ ಸೇರಿ ಈ ಗ್ರಂಥದ ಪ್ರತಿಗಳನ್ನು ಲೋಕದೆಲ್ಲೆಡೆ ತಲುಪಿಸುವಲ್ಲಿ ಯಶಸ್ವಿಯಾದರು.
[ಕಿತಾಬ್ ಅದ್ದೀಬಾಜುಲ್ ಮದ್ಹಬ್ ಫೀ ಮಅರಿಫತಿ ಅಅಯಾನಿ ಉಲಮಾಈಲ್ ಮದ್ಹಬ್, ಇಮಾಮ್ ಇಬ್ನ್ ಫರ್ಹೂನ್ ಬುರ್ಹಾನುದ್ದೀನ್ (ರ) (ಹಿ.799)]
ಇಮಾಮ್ ಬದ್ರುದ್ದೀನ್ ದಮಾಮೀನಿ (ರ) ಉಲ್ಲೇಖಿಸುತ್ತಾರೆ: ಇಮಾಮ್ ಖಾಳಿ ಇಯಾಳ್(ರ) ರವರು ತನ್ನ "ಶಿಫಾ" ದಲ್ಲಿ ಶಮನ (ಪರಿಹಾರ) ಕ್ಕೆ ಬೇಕಾದ ಎಲ್ಲವನ್ನು ಸೇರಿಸಿದ್ದಾರೆ.
[ಮಸಾಬೀಹುಲ್ ಜಾಮಿಹ್
ಇಮಾಮ್ ಬದ್ರುದ್ದೀನ್ ಅದ್ದಮಾಮೀನಿ (ರ) (ಹಿ. 827)]
ಇಮಾಮ್ ಶೈಖ್ ಸಿರಾಜುದ್ದೀನ್ ಬುಲ್ಕೀನಿ (ರ) ಬಳಿ ಒಮ್ಮೆ ಖಾಳಿ ಇಯಾಳ್ (ರ) ರ "ಕಿತಾಬುಶಿಫಾ" ಓದಿದರು. ಅದನ್ನು ಕೇಳಿದ ಇಮಾಮ್ ಬುಲ್ಕೀನೀ (ರ) ಖಾಳೀ ಇಯಾಳರನ್ನು ಅತಿಯಾಗಿ ಪ್ರಶಂಸಿಸಿದರು. ಸಭೆಯಲ್ಲಿ ಧಾರಾಳ ಶಾಫಿಈ ಹಾಗೂ ಮಾಲಿಕೀ ಮದ್ಹಬ್ ಗಳ ವಿದ್ವಾಂಸರುಗಳಿದ್ದರು.
ಮಗನಾದ ಅಬ್ದುಲ್ ರಹಮಾನ್ ಜಲಾಲುದ್ದೀನ್ (ರ) ತಂದೆಯ ಪ್ರಶಂಸೆಗಳನ್ನು ಕೇಳಿದಾಗ ಪಕ್ಕದಲ್ಲಿದ್ದ ಮಾಲಿಕಿ ವಿದ್ವಾಂಸರೊಂದಿಗೆ ಕೇಳಿದರು : ನಿಮಗೂ ಖಾಳೀ ಇಯಾಳರಂತೆ ಆಗಬಹುದಿತ್ತಲ್ವಾ ? ಇದು ಕೇಳಿದ ತಂದೆ ಮಗನೊಂದಿಗೆ ಕೇಳಿದರು : ನೀವೇಕೆ ಈ ಪ್ರಶ್ನೆಯನ್ನು ಶಾಫಿಈ ವಿದ್ವಾಂಸರೊಂದಿಗೆ ಕೇಳಲಿಲ್ಲ.
[ಕಿತಾಬ್ ಇಂತಿಸಾರುಲ್ ಫಕೀರು ಸ್ಸಾಲಿಕ್ ಲಿ ತರ್ಜೀಹಿ ಮದ್ಹಬಿ ಮಾಲಿಕ್, ಇಮಾಮ್ ಶಂಸುದೀನ್ ಮುಹಮ್ಮದ್ ಅರ್ರಾಈ ಅಲ್ ಉಂದುಲೂಸಿ (ರ) (ಹಿ. 583)]
~ ಆಸಿಫ್ ಅದನಿ ಅಲ್ ಮುಈನಿ, ಪರಪ್ಪು
Comments