ಹುಝೂರರ ಚರಿತ್ರೆಯ ಸಾರುವ ಮೌಲೀದ್ ಗ್ರಂಥಗಳು
- Asif Adany Al Mueeni

- Aug 25
- 5 min read

ಪುಣ್ಯ ಪೈಗಂಬರ್ (ಸ್ವ.ಅ) ರ ಬಗೆಗಿನ ಅಧ್ಯಯನ ಹಾಗೂ ರಚನೆಯ ಕಾರ್ಯ ಸತ್ಯವಿಶ್ವಾಸಿಯ ಪಾಲಿಗೆ ಆನಂದ ಕೊಡುವ ವಿಷಯ. ಪೂರ್ವಿಕ ವಿದ್ವಾಂಸರು ಪೈಗಂಬರರ ಕುರಿತು ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯಮಯವಾದ ಗ್ರಂಥಗಳನ್ನು ರಚಿಸಿದ್ದಾರೆ. ವಿದ್ವಾಂಸರ ಪೈಕಿ ಕೆಲವರು ಒಂದೇ ವಿಷಯದಲ್ಲಿ ಒಂದಕ್ಕಿಂತಲೂ ಹೆಚ್ಚು ಗ್ರಂಥಗಳನ್ನು ರಚಿಸಿದವರೂ ಇದ್ದಾರೆ. ಪೈಗಂಬರ್ (ಸ) ರವರ ತಂದೆ ತಾಯಿಯ ಕುರಿತು ಇಮಾಮ್ ಸುಯೂತೀ (ರ) ರವರು ರಚಿಸಿದ ಏಳು ಗ್ರಂಥಗಳು ಅವುಗಳ ಪೈಕಿ ಒಂದಾಗಿದೆ.
ಮೌಲಿದ್ ಎಂದರೆ ಪುಣ್ಯ ಪೈಗಂಬರ್ (ಸ್ವ.ಅ)ರವರ ಜನನದ ಕುರಿತಿರುವ ರಚನೆಗಳಾಗಿವೆ. ಪೈಗಂಬರರ ಚರಿತ್ರೆಯ ಪ್ರಮುಖ ಭಾಗವೊಂದನ್ನು ಮೌಲಿದ್ ಗಳು ಪ್ರತಿಪಾದಿಸುತ್ತದೆ. ಮೌಲಿದ್ ಗ್ರಂಥದ ಚರ್ಚಾ ವಿಷಯ ಪುಣ್ಯ ಜನನದ ಕುರಿತಾಗಿದ್ದರೂ ಕೆಲವೊಮ್ಮೆ ಜನನದ ನಂತರವಿರುವ ವಿಷಯಗಳಿಗೂ ಅದೇ ರೀತಿ ಮರಣದವರೆಗಿನ ಸಮಗ್ರ ವಿಷಯಗಳಿಗೂ ಚರ್ಚೆ ತಲುಪುವುದನ್ನು ಕೆಲವೊಂದು ಗ್ರಂಥಗಳಲ್ಲಾದರೂ ಕಾಣಬಹುದು.
ಮೌಲಿದ್ ಗ್ರಂಥಗಳು ಪೈಗಂಬರ್ (ಸ್ವ.ಅ) ರವರ ಪ್ರಕೀರ್ತನೆ ಎಂಬ ಪುಣ್ಯಕರ್ಮವನ್ನು ವಹಿಸುವುದಾದರೂ ಅವುಗಳು ಪೈಗಂಬರ್ (ಸ್ವ.ಅ)ರ ಕುರಿತಾದ ಪ್ರಾಮಾಣಿಕ ಅಧ್ಯಯನಗಳಾಗಿವೆ. ಪೌರಾಣಿಕ ಪೂರ್ವಿಕರು ರಚಿಸಿದ ಅನೇಕಾರು ಮೌಲಿದ್ ಗ್ರಂಥಗಳಿವೆ. ಪೈಗಂಬರ್ (ಸ್ವ.ಅ)ರ ಕುರಿತಿರುವ ಅಧ್ಯಯನದಲ್ಲಿ ಈ ಗ್ರಂಥಗಳಿಗೆ ಅತ್ಯಂತ ಪ್ರಾಮುಖ್ಯತೆ ಹಾಗೂ ಸ್ವಾಧೀನತೆಯಿದೆ. ಅವುಗಳಲ್ಲಿ ಅತಿ ಪ್ರಮುಖವಾದ ಕೆಲವೊಂದು ಗ್ರಂಥಗಳನ್ನು ಹೃಸ್ವವಾಗಿ ತಿಳಿಯೋಣ.
ಅದ್ದುರ್ರುಲ್ ಮುನಲ್ಲಂ ಫೀ ಮೌಲಿದಿನ್ನಬಿಯ್ಯಿಲ್ ಮುನಳ್ಳಮ್

ವಿದ್ವಾಂಸರೆಡೆಯಲ್ಲಿ ಪರಮೋನ್ನತ ಸ್ಥಾನ ಲಭಿಸಿದ ಈ ಮೌಲಿದ್ ಗ್ರಂಥವು ಅಬುಲ್ ಅಬ್ಬಾಸ್ ಅಲ್ ಅಝಫೀ (ರ) (ಮರಣ ಹಿ. 633) ಹಾಗೂ ಅವರ ಮಗನಾದ ಅಬುಲ್ ಖಾಸಿಂ ಅಲ್ ಅಝಫೀ (ರ) (ಹಿ. 677) ರವರು ಜೊತೆ ಸೇರಿ ರಚಿಸಿದ ರಚನೆಯಾಗಿದೆ. ಇದು ಅತ್ಯಂತ ಬೃಹತ್ ಮೌಲಿದ್ ಗ್ರಂಥ ಎಂದು ಹೇಳುತ್ತಾ ಇಮಾಮ್ ಇಬ್ನ್ ಹಜರುಲ್ ಅಸ್ಕಲಾನಿ (ರ) ಸಹಿತವಿರುವ ಪ್ರಮುಖ ವಿದ್ವಾಂಸರು ಈ ಕೃತಿಯನ್ನು ಮೇರು ಕೃತಿಗಳ ಸಾಲಿನಲ್ಲಿ ಸೇರಿಸಿದ್ದಾರೆ. ಹಾಗೂ ಅಸ್ಕಲಾನಿ ಇಮಾಂ ಸಹಿತವಿರುವ ವಿದ್ವಾಂಸರಲ್ಲಿ ಪ್ರಮುಖರು ಗ್ರಂಥ ಕತೃತುವಿನ ರಚನೆಯ ಪರಂಪರೆಯಲ್ಲಿ ಅಂಗಗಳಾಗಿದ್ದಾರೆ ಎಂದು ಇಮಾಮ್ ಕತ್ತಾನಿ ವಿವರಿಸುತ್ತಾರೆ.(ಅತ್ತಅಲೀಫುಲ್ ಮೌಲಿದಿಯ್ಯಾ : ಪುಟ 38-42).
ಜೋರ್ಡಾನಿನ ದುರೂಬ್ ಸಖಾಫಿಯಾ 4೦೦ ಪುಟಗಳಲ್ಲಿ ಪ್ರಕಟಿಸಿದ ಈ ಗ್ರಂಥವು ಅದರ ಸ್ಥಾನಕ್ಕೆ ಅನುಗುಣವಾಗಿ ಪ್ರಕಟಿಸುವುದಾದರೆ ಅನೇಕಾರು ಸಂಪುಟಗಳಾಗಿ ರೂಪುಗೊಳ್ಳುತ್ತಿದ್ದವು. ಪೈಗಂಬರ್ (ಸ್ವ.ಅ)ರವರ ಜನ್ಮ ದಿನದ ಕುರಿತು 'ಅದ್ದುರ್ರುಲ್ ಮುನಳ್ಳಂ'ನಲ್ಲಿ ಉಲ್ಲೇಖಿಸಲಾಗಿದೆ: ಪೂರ್ವಿಕರು ಹಾಗೂ ಉತ್ತರಾಧಿಕಾರಿಗಳಲ್ಲಿ ಪ್ರಮುಖ ವಿದ್ವಾಂಸರ ಬಳಿ ಪವಿತ್ರ ಜನನದ ಕುರಿತಿರುವ ಪ್ರಮಾಣಿಕ ಹಾಗೂ ಅವಲಂಬಿಸಲು ಯೋಗ್ಯವಾದ ಅಭಿಪ್ರಾಯ ರಬೀವುಲ್ ಅವ್ವಲ್ 12 ರ ಸೋಮವಾರ ಎಂಬುವುದಾಗಿದೆ. ಅದುವೇ ಅಧಿಕೃತ ಹಾಗೂ ಸ್ವೀಕೃತವಾದ ನಿಲುವಾಗಿದೆ. (ಅದ್ದುರ್ರುಲ್ ಮುನಲ್ಲಂ 256). ಬಳಿಕ ಬಂದ ಇಮಾಮ್ ನಜ್‌ಮುದ್ದೀನ್ ಅಲ್ ಗೈತೀ(ರ) ಬಹ್‌ಜತುಸ್ಸಾಮಿಈನ್ ಗ್ರಂಥದಲ್ಲೂ (ಮಜ್‌ಮೂರ‍್ರಸಾಇಲ್ ಪುಟ 507, 508) ಅಲ್ಲಾಮ ಇಬ್ನು ಅಲ್ಲಾನ್ (ರ) ಮೌಲಿದ್ ಸ್ವಪಾ ದಲ್ಲಿಯೂ (ಪು. 111) ಇಮಾಮ್ ಅಸಫೀ (ರ) ರವರಿಂದ ನಿವೇದಿಸಿರುವುದು ಕಾಣಲು ಸಾಧ್ಯ.
ಮೌಇದುಲ್ ಖಿರಾಂ ಫೀ ಮೌಲಿದಿನ್ನಬಿಯ್ಯಿ ಅಲೈಹಿಸ್ಸಲಾಂ
ಇದು ಕುರ್‌ಆನ್ ಸಂಬಂಧಿತ ವಿದ್ವಾಂಸರಲ್ಲಿ ಪ್ರಮುಖರಾದ ಇಮಾಮ್ ಬುರ್‌ಹಾನುದ್ದೀನ್ ಅಲ್ ಜಅಬರಿ (ರ) (ಹಿ.732) ಅವರಿಂದ ವಿರಚಿತಗೊಂಡ ಗ್ರಂಥ. ಇವರು ಪ್ರಮುಖ ವಿದ್ವಾಂಸರುಗಳಾದ ಇಮಾಮ್ ಅಲಮುದ್ದೀನ್ ಅಲ್ ಬಿರ್‌ಸಾಲೀ(ರ), ಇಮಾಮ್ ಸುಬ್‌ಕೀ (ರ), ಇಮಾಮ್ ಸ್ವಫ್ದೀ (ರ) ಹಾಗು ಹಾಫಿಲು ದ್ಸಹಬೀ ಮುಂತಾದವರ ಗುರು. ಪುಣ್ಯ ಜನ್ಮದಿಂದ ಅನುಗ್ರಹೀತವಾದ ರಬೀವುಲ್ ಅವ್ವಲ್ ತಿಂಗಳನ್ನು ಗೌರವಿಸುವುದರ ಅನಿವಾರ್ಯತೆಯ ಕುರಿತು ಗ್ರಂಥದ ಪರಿಚಯದಲ್ಲಿ ಇಮಾಮರು ನೆನಪಿಸುತ್ತಿದ್ದಾರೆ. (ಪುಟ 61). ನಂತರ ಬಂದ ಇಮಾಮ್ ಇಬ್ನು ಅಲ್ಲಾನ್ (ರ) ರವರು ಮೌಲಿದ್ ಸ್ವಫಾ ದಲ್ಲಿ (ಪುಟ 138) ರಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಅಂಬಿಯಾಗಳು ಪಾಪಮುಕ್ತರು, ಮಾತ್ರವಲ್ಲ ಅದಕ್ಕೆ ವಿರುದ್ಧವೆನಿಸುವ ಖುರ್‌ಆನ್ ಸೂಕ್ತಗಳನ್ನು ಯಾವ ರೀತಿ ಸಮೀಪಿಸಬೇಕೆಂಬುವುದರ ಕುರಿತಿರುವ ಈ ಗ್ರಂಥದಲ್ಲಿನ ಗೆರೆಗಳು (ಪು.73 - 74) ಗಮನಾರ್ಹವಾಗಿದೆ. ಬೇರೆ ಮೌಲಿದ್ ಗ್ರಂಥಗಳ ಹಾಗೆಯೇ ನಬಿಯವರ ಜನನ ವೇಳೆ ಸಂಭವಿಸಿದ ಪವಾಡಗಳನ್ನು ಇದರಲ್ಲಿಯೂ ಕಾಣಬಹುದು. (ಪು. 103-104) ಪುಣ್ಯ ಪ್ರವಾದಿಯವರ ಮಿಅರಾಜ್ (ಅಲ್ಲಾಹನ ಬಳಿಗಿರುವ ಯಾತ್ರೆ) ಎಚ್ಚರದಲ್ಲಿ ಹಾಗೂ ಭೌತಿಕ ಶರೀರದೊಂದಿಗೆ ರಜಬ್ 27 ರ ರಾತ್ರಿಯಾಗಿತ್ತು ಎಂದು ಪುಟ ಸಂಖ್ಯೆ 167 ರಲ್ಲಿ ಕಾಣಬಹುದು.
ಜೋರ್ಡಾನಿನ ಅದ್ದಾರುಲ್ ಅಝರಿಯ ಈ ಗ್ರಂಥವನ್ನು ಪ್ರಕಟಿಸಿದೆ. ಕಡಿಮೆ ಪುಟಗಳಲ್ಲಿ ವೈಭವಯುತವಾಗಿ ಪ್ರಕಟಿಸಬಹುದಾದ ಇದನ್ನು ಟಿಪ್ಪಣಿಕಾರನ ಅನಗತ್ಯ ಚರ್ಚೆಗಳಿಂದ 280 ಕ್ಕಿಂತಲೂ ಹೆಚ್ಚು ಪುಟಕ್ಕೆ ದೀರ್ಘಿಸಿದೆ.
ಮೌಲಿದು ಇಬ್‌ನಿ ಕಸೀರ್
ತಫ್‌ಸೀರ್, ಹದೀಸ್, ಚರಿತ್ರೆ ಮುಂತಾದ ವಿಷಯಗಳಲ್ಲಿ ಪ್ರಸಿದ್ಧರಾದ ಅಲ್ ಹಾಫಿಳ್ ಇಬ್ನು ಕಸೀರ್ (ಹಿ. 774) ರಾಗಿದ್ದಾರೆ ಇದರ ಕತೃ. ಇವರು ನೂತನವಾದಿಗಳ ಆಶಯದ ಪ್ರಮುಖ ಮೂಲವಾದ ಇಬ್ನು ತೈಮಿಯಾರ ಶಿಷ್ಯನಾಗಿದ್ದಾರೆ ಎಂಬುವುದು ಗಮನಾರ್ಹ. ಹಾಫಿಳ್ ಇಬ್ನು ಕಸೀರಿಗೆ ಈ ರೀತಿಯ ಗ್ರಂಥವೊಂದು ಇಲ್ಲವೆಂದೂ ಇದು ಕೇವಲ ಅಲ್ ಬಿದಾಯತು ವನ್ನಿಹಾಯದಿಂದ ತೆಗೆದ ಭಾಗ ಮಾತ್ರವಾಗಿದೆ ಎಂಬುವುದನ್ನು ಮೌರಿದುಸ್ಸಫಾದ ಟಿಪ್ಪಣಿಕಾರನು ಉಲ್ಲೇಖಿಸುವುದು ಕಾಣಬಹುದು. ಅದು ಸರಿಯಲ್ಲ. ಇಬ್ನು ಕಸೀರಿಗೆ ಮೌಲಿದ್ ವಿಷಯದಲ್ಲಿ ಒಂದು ಗ್ರಂಥವಿದೆ ಎಂದು ಇಮಾಮ್ ಕತ್ತಾನಿ (ರ) ಅತ್ತಅಲೀಫುಲ್ ಮೌಲಿದಿಯ್ಯಾ (ಪುಟ. 53) ದಲ್ಲಿ ಹೇಳಿದ್ದಾರೆ. ಮಾತ್ರವಲ್ಲ, ಪುಣ್ಯ ನಬಿಯವರು ಮಖ್‌ತೂನಾಗಿ (ಮುಂಜಿಕರ್ಮ ನಿರ್ವಹಿಸಲ್ಪಟ್ಟವರಾಗಿ) ಜನ್ಮವಾಯಿತೆಂಬ ವಿಷಯ ಚರ್ಚೆ ಮಾಡುವಾಗ ಹಾಫಿಳ್ ಇಬ್ನು ಕಸೀರಿಗೆ ಮೌಲಿದ್ ವಿಷಯದಲ್ಲಿ ಗ್ರಂಥವೊಂದಿದೆಯೆಂದು ಒಂದು ಉದ್ಧರಣಿಯನ್ನು ಅಲ್ಲಾಮ ಝುರ್‌ಖಾನಿ (ರ) ಶರಹುಲ್ ಮವಾಹಿಬ್ ನಲ್ಲಿ (1/234) ರಲ್ಲಿ ಅಲ್ಲಾಮ ಇಬ್ನು ಅಲ್ಲಾನ್ (ರ) ಮೌಲಿದುಸ್ಸಫಾದಲ್ಲಿ (ಪು. 101) ಉಲ್ಲೇಖಿಸಿದ್ದಾರೆ.
ಅತ್ತಅರೀಫ್ ಬಿಲ್ ಮೌಲಿದಿಶ್ಶರೀಫ್
ಪ್ರಸಿದ್ಧ ಖುರ್‌ಆನ್ ವಿದ್ವಾಂಸರಾದ ಇಮಾಮ್ ಇಬ್‌ನುಲ್ ಜಝರೀ(ರ)(ಹಿ.833) ರವರಿಂದ ವಿರಚಿತವಾದ ಗ್ರಂಥವಿದು. ವಿದ್ವತ್ ಜಗತ್ತು ಅತೀ ಗಂಭೀರವಾಗಿ ಪರಿಗಣಿಸಿದ ಈ ಗ್ರಂಥ ಮಕ್ಕಾದಲ್ಲಿನ ನಬಿಯವರು ಜನಿಸಿದ ಸ್ಥಳದಲ್ಲಿ ಗ್ರಂಥ ಕರ್ತೃರ ಬಳಿ ಓದಿ ಕೇಳಿದಾಗಿ ಅತ್ತಅರೀಫ್ (ಪುಟ .79) ರಲ್ಲಿಯೂ, ಅರ್‌ಫುತ್ತಅರೀಫ್ (ಪುಟ 56, 57) ರಲ್ಲಿಯೂ ಕಾಣಬುಹುದು. ಗ್ರಂಥದ ಮೊದಲಿರುವ ಪರಿಚಯದಲ್ಲಿಯೇ ನಬಿಯವರೊಂದಿಗೆನ ತವಸ್ಸುಲ್, ಇಸ್ತಿಷ್ಫಾಹ್, ನಡೆಸುವ ಈ ಗ್ರಂಥದಲ್ಲಿ ರಬೀವುಲ್ ಅವ್ವಲಿನ ಅನೇಕಾರು ಮಹತ್ವಗಳನ್ನು ವಿವರಿಸಲಾಗುತ್ತಿದೆ. ( ಪುಟ 31-34).
ಗ್ರಂಥದ 80,83 ಪುಟಗಳಲ್ಲಿ ವಿವಿಧ ಪ್ರದೇಶಗಳಲ್ಲಿನ ಮೌಲಿದ್ ಆಚರಣೆಗಳ ಕುರಿತು ವಿವರಿಸಲಾಗುತ್ತಿದೆ. ಬಳಿಕ ಬಂದ ಅಧಿಕ ವಿದ್ವಾಂಸರು ಅವರ ಗ್ರಂಥಗಳಲ್ಲಿ ಇಮಾಮ್ ಇಬ್ನುಲ್ ಜಝರಿ (ರ) ರವರ ಈ ಉಲ್ಲೇಖಗಳನ್ನಾಗಿದೆ ಸೇರಿಸಿರುವುದು. ಕೆಲವೊಂದು ಸ್ಥಳಗಳಲ್ಲಿ ಬರೆಯುವವರ ನಿರ್ಲಕ್ಷ್ಯದಿಂದಾಗಿ 'ಇಬ್ನುಲ್ ಜಝರಿ ' ಎಂಬಲ್ಲಿ 'ಇಬ್ನುಲ್ ಜೌಝಿ'ಯಾಗಿದೆ ಎಂಬುದು ಬೇರೊಂದು ಕಾರ್ಯ. ಪುಣ್ಯ ಪ್ರವಾದಿಯವರೊಂದಿಗೆ ಸಹಾಯಾರ್ಥನೆ ಮಾಡುವ ಗೆರೆಗಳ ಮೂಲಕವಾಗಿದೆ ಅತ್ತಅರೀಫ್ ಗ್ರಂಥವನ್ನು ಕೊನೆಗೊಳಿಸಿರುವುದು. ( ಪುಟ 237-242).
ಅರ್ ಫುತ್ತಅರೀಫ್ ಬಿಲ್ ಮೌಲಿದಿ ಶ್ಶರೀಫ್
ಮೇಲೆ ಹೇಳಲಾದ ವಿದ್ವಾಂಸರೇ ಸಂಕ್ಷಿಪ್ತವಾಗಿ ರಚಿಸಿದ ಮತ್ತೊಂದು ಗ್ರಂಥವಿದು. ಇದು ಶೈಖುಲ್ ಇಸ್ಲಾಂ ಝಕರಿಯ್ಯಲ್ ಅನ್ಸಾರಿ (ರ) ರವರ 'ಸಬತಿ' ( ಗುರುಗಳಿಂದ ಲಭಿಸಿದ ಅನುಮತಿಗಳನ್ನು ವಿವರಿಸುವ ಗ್ರಂಥ) ನಲ್ಲಿ ಸ್ಥಳ ಹಿಡಿದ ಗ್ರಂಥವಾಗಿದೆ. ಮೂಲ ಗ್ರಂಥವಾದ ಅತ್ತಅರೀಫ್ ನ ಹಾಗೆಯೇ ವಸಂತಕಾಲ ರಬೀವುಲ್ ತಿಂಗಳ ಧಾರಾಳ ಮಹತ್ವಗಳನ್ನು ವಿವರಿಸಲಾಗಿದೆ. ನಬಿ (ಸ) ರವರ ಜನನದಲ್ಲಿ ಸಂತಸಪಟ್ಟ ಸತ್ಯವಿಶ್ವಾಸಿಯಲ್ಲದ ಅಬೂ ಲಹಬಿಗೆ ಆ ಕಾರಣದಿಂದ ಉಪಕಾರ ಸಿಕ್ಕಿದ್ದರೆ, ನಬಿಯವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿ, ತನ್ನಿಂದಾಗುವ ರೀತಿಯಲ್ಲಿ ಹಣವನ್ನು ಖರ್ಚು ಮಾಡಿ ಸಂತೋಷಪಡುವ ಸತ್ಯ ವಿಶ್ವಾಸಿಗೆ ಖಚಿತವಾಗಿಯು ಸ್ವರ್ಗ ಲಭಿಸುವುದು ಎಂದು ಇಮಾಮರು ದೃಢಪಡಿಸುತ್ತಿದ್ದಾರೆ. ( ಪುಟ 55 56)
ಮಕ್ಕಾದಲ್ಲಿನ ನಬಿದಿನಾಚರಣೆಯ ಕುರಿತು ಹಾಗೂ ನಬಿಯವರು ಜನಿಸಿದ ಸ್ಥಳವನ್ನು ಸಂದರ್ಶಿಸಿ ಪುಣ್ಯ ಪಡೆದ ವಿಷಯಗಳನ್ನು ಈ ಗ್ರಂಥದಲ್ಲಿ ವಿವರಿಸುತ್ತಿದ್ದಾರೆ. ಪುಣ್ಯ ನಬಿ (ಸ)ರೊಂದಿಗಿನ ಇಸ್ತಿಗಾಸ ಹಾಗು ಇಸ್ತಿಶ್ಫಾಹ್ ಒಳ ಗೊಂಡಿರುವ 'ಅಹ್ ಯಾ ರಬೀಅಲ್ ಕಲ್ಬೀ ' ಎಂಬ ಇಮಾಮ್ ಜಝರಿ (ರ)ರವರದ್ದೇ ಆದ ಕಾವ್ಯವನ್ನು ಗ್ರಂಥದ ಕೊನೆಯಲ್ಲಿ ವಿವಿಧ ಭಾಗಗಳಲ್ಲಿ ಪೂರಕವಾಗಿ ಸೇರಿಸಿದ್ದಾರೆ. (ಪುಟ 95-99). ಇದು ಸೃಷ್ಟಿಸಿದ ಸ್ವಾಧೀನತೆ ಹೇಳಬೇಕೆಂದಿಲ್ಲ ತಾನೆ. ಪದ್ಯ ಭಾಗದ ಕೊನೆಯ ಸಾಲಿನಲ್ಲಿರುವ 'ಮುಹಮ್ಮದ್ ಬಿನ್ ಮುಹಮ್ಮದ್ ಬಿನ್ ಮಹಮ್ಮದ್' ಎಂಬ ಪರಾಮರ್ಶೆ ಇಮಾಮ್ ಜಝರಿ (ರ) ರವರ ಕುರಿತಾಗಿದೆ ಎಂಬುವುದು ನೆನಪಿರಲಿ. ಕಾರಣ ಇದು ಸೂಚಿಸುವುದು ಇಮಾಮ್ ಗಝ್ಝಾಲಿ (ರ) ರನ್ನು ಹಾಗೂ ಇದು ಅವರ ಪದ್ಯವಾಗಿದೆ ಎಂದು ಭಾವಿಸಿರುವವರು ಜನಗಳ ಪೈಕಿ ಇದ್ದಾರೆ. ಅರ್ಪುತ್ತಅರೀಫ್ ಪ್ರತಿಗಳಲ್ಲಿ ಉತ್ತಮ ಗುಣಮಟ್ಟದ ಪ್ರತಿ ಈಜಿಪ್ಟಿನ ಇಹ್ಯಾಉತ್ತುರಾಸ್ ವಲ್ ಇಸ್ಲಾಂ ಪ್ರಕಟಿಸಿದ ಉಚಿತವಾಗಿ ಲಭ್ಯವಾಗುವ ಪ್ರತಿಯಾಗಿದೆ.
ಮೇಲೆ ಹೇಳಲಾದ ಎರಡು ಗ್ರಂಥಗಳ ಹೊರತಾಗಿ ಮತ್ತೊಂದು ಗ್ರಂಥ ಕೂಡ ಜಝರಿ ಇಮಾಮರಿಗಿದೆ ಎಂದು ಅಲ್ಲಾಮ ಅಲಾನಿ ( ಹಿ. 1189) ರವರ ರಫ್ಉಲ್ ಕಫಾ ಎಂಬ ಗ್ರಂಥದ ಮೂಲಕ ತಿಳಿಯಬಹುದು.
ಅಲ್ ಮೌರಿದುಲ್ ಹನಿಯ್ಯ್ ಫೀ ಮೌಲಿದಿ ಸ್ಸನಿಯ್ಯ್
ಪ್ರಮುಖ ಹದೀಸ್ ವಿದ್ವಾಂಸರಾದ ಇಮಾಮ್ ಝೈನುದ್ದೀನ್ ಅಲ್ ಇರಾಖಿ (ರ) (ಹಿ. 806) ರವರಾಗಿದ್ದಾರೆ ಇದರ ಕತೃ.
ಮಹಾನಾರಾದ ಇಮಾಂ ಸಂಶುದ್ದೀನ್ ಅಸ್ಸಖಾವಿ (ರ) ರವರು ತಮ್ಮ ಗ್ರಂಥ ಅಲ್ ಅಜ್ವಿಬತುಲ್ ಮರ್ಳಿಯ್ಯಾ ದಲ್ಲಿ ಪ್ರಸ್ತುತ ಮೌಲಿದ್ ಗ್ರಂಥವನ್ನು ಪ್ರಶಂಸಿಸಿ, ಪ್ರಸ್ತುತ ಮೌಲಿದ್ ಗ್ರಂಥವನ್ನು ಪುಣ್ಯ ನಬಿಯವರ ಜನನವಾದ ಅನುಗ್ರಹೀತ ಸ್ಥಳದಲ್ಲಿ ವಿತರಿಸಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ಮುಖ್ತಸರುಲ್ ಮೌಲಿದುನ್ನಬವೀ
ಇಮಾಮ್ ಇರಾಖಿ (ರ) ರವರ ಮೌಲಿದ್ 'ಅಲ್ ಹನಿಯ್' ಗೆ ಶಿಷ್ಯರಾದ ಇಮಾಮ್ ಇಬ್ನ್ ಅಲ್ ಹಜರ್ ಅಲ್ ಅಸ್ಕಲಾನಿ (ರ) ರವರು ರಚಿಸಿದ ಸಂಕ್ಷಿಪ್ತ ಮೌಲಿದ್ ಆಗಿದೆ ಮುಖ್ತಸರುಲ್ ಮೌಲಿದುನ್ನಬವೀ ಎಂದು ಇಮಾಮ್ ಸಖಾವಿ (ರ) ರವರ ಅಲ್ ಜವಾಹಿರ್ ವದ್ದುರರ್ (2/692) ನಲ್ಲಿ ಕಾಣಬಹುದು.
ಜಾಮಿಉಲ್ ಆಸಾರ್ ಫೀ ಮೌಲಿದಿ ನ್ನಬಿಯ್ಯಿಲ್ ಮುಖ್ತಾರ್

ಎಂಟು ಸಂಪುಟಗಳಿರುವ ಈ ಗ್ರಂಥವನ್ನು ಬರೆದಿರುವುದು ಇಮಾಮ್ ನಾಸಿರುದ್ದೀನ್ ಅದ್ದಿಮಶ್ಖೀ (ರ) ರವರಾಗಿದ್ದಾರೆ. (ಹಿ 842) ಹದೀಸುಗಳ, ನಬಿ (ಸ) ರವರ ಚರಿತ್ರೆಗಳ ಹಾಗೂ ನಬಿ (ಸ) ರವರ ವಿಶೇಷತೆಗಳ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಗ್ರಂಥವನ್ನು ಪ್ರಾರಂಭಿಸಿದ್ದಾರೆ. ಪ್ರತೀ ವರ್ಷವೂ ಪ್ರವಾದಿಯವರ ಜನ್ಮ ದಿನದ ವಿಚಾರ ಕೇಳುವಾಗ ಸತ್ಯವಿಶ್ವಾಸಿಯಾದವನಿಗೆ ಅತೀವ ಸಂತೋಷವುಂಟಾಗುತ್ತದೆ ಎಂದು ಬರೆದಿದ್ದಾರೆ (1/62).
ಸತ್ಯವಿಶ್ವಾಸಿಯ ಮಟ್ಟಿಗೆ ಪುಣ್ಯ ಪ್ರವಾದಿಯವರ ಜನ್ಮದಿನ ಆಚರಣೆ ಉತ್ತಮ ಆಚರಣೆ ಮತ್ತು ವಿವಿಧ ಸ್ಥಳಗಳಲ್ಲಿ ನಡೆಸುವ ಮೀಲಾದುನ್ನಬಿಯ ಕುರಿತಿರುವ ಚರ್ಚೆಗಳ ಮೂಲಕ ಗ್ರಂಥವನ್ನು ಮುಂದುವರಿಸಿದ್ದಾರೆ. ಅದರೊಂದಿಗೆ ನಬಿ ದಿನಾಚರಣೆಯ ಪ್ರಮಾಣಿಕತೆ ಹಾಗೂ ಈ ಗ್ರಂಥರಚನೆಗೆ ಪೂರಕವಾದ ಸಂದರ್ಭವನ್ನು ಇಮಾಂ ನಾಸಿರುದ್ದೀನ್ ದೃಢಪಡಿಸುತ್ತಿದ್ದಾರೆ. (ಜಾಮಿಉಲ್ ಆಸಾರ್ 1/63-68 )
ಹಿ. 814ರ ಹಜ್ಜ್ ವೇಳೆಯಲ್ಲಿ ಇಮಾಂ ನಾಸಿರುದ್ದೀನ್ ಅದ್ದಿಮಶ್ಖೀ (ರ) ರವರು ಪುಣ್ಯ ಪ್ರವಾದಿಯ ಜನ್ಮ ಸ್ಥಳವನ್ನು ಸಂದರ್ಶಿಸಿ ಪುಣ್ಯ ಪಡೆದೆನೆಂದು ಗ್ರಂಥದಲ್ಲಿ ದೃಢಪಡಿಸಿದ್ದಾರೆ (2/486). ಮಹಾನರು ಬರೆಯುತ್ತಾರೆ: ಪುಣ್ಯ ನಬಿಯವರ ಝಿಯಾರತ್ ಮಾಡುವುದು ಮುಸ್ಲಿಂ ಸಮುದಾಯದ ಚರ್ಯೆ ಹಾಗೂ ತರ್ಕವಿಲ್ಲದ ಪುಣ್ಯಕರ್ಮವು, ಅತ್ಯಂತ ಫಲಕಾರಿಯಾದ ಒಳಿತಾಗಿದೆ. ಝಿಯಾರತ್ ಸಂಬಂಧಿತ ಹದೀಸುಗಳನ್ನು ಈ ಸಮುದಾಯ ಸ್ವೀಕರಿಸಿದೆ, ಮಾತ್ರವಲ್ಲ ಅದನ್ನು ವಿರೋಧಿಸುವ ಅದು ತಪ್ಪು ಹದೀಸ್ ಎಂದು ಹೇಳುವವನು ಮೂರ್ಖನಾಗಿದ್ದಾನೆ. ನಿಂದನೆಯಿಂದ ವೈಫಲ್ಯತೆಗಳಿಂದ ಹಾಗೂ ಅಲ್ಲಾಹನ ಕರುಣೆಯಿಂದ ದೂರೀಕರಿಸಲ್ಪಡುವುದರಿಂದ ಅಲ್ಲಾಹನೊಂದಿಗೆ ನಾವು ಅಭಯವನ್ನು ಕೇಳುತ್ತೇವೆ. (ಜಾಮಿಉಲ್ ಆಸಾರ್ 8/141)
ಮೌರಿದುಸ್ವಾದೀ
ಮೌರಿದುಸ್ವಾದೀ ಫೀ ಮೌಲಿದಿಲ್ ಹಾದೀ (ಸ) ಎಂಬುವುದಾಗಿದೆ ಗ್ರಂಥದ ಪೂರ್ಣ ಹೆಸರು. ಇದು ಇಮಾಂ ನಾಸಿರುದ್ದೀನ್ ಅದ್ದಿಮಶ್ಖೀಯವರ ಮೌಲಿದ್ ಗ್ರಂಥಗಳಲ್ಲಿ ಅತ್ಯಂತ ಪ್ರಮುಖವಾದ ಗ್ರಂಥಗಳಲ್ಲೊಂದು. ಮೀಲಾದಾಚರಣೆ ಸಂಬಂಧಿತ 'ಇಝಾ ಕಾನ ಹಾಝ, ಎಂದು ಆರಂಭವಾಗುವ ಪದ್ಯ ಹಾಗೂ ನಬಿಯವರ ತಂದೆ ತಾಯಿಯ ಕುರಿತಿರುವ 'ಹಬಲ್ಲಾಹು ನ್ನಬಿಯ್ಯ' ಎಂದು ಆರಂಭವಾಗುವ ಪದ್ಯ ಪ್ರಸಿದ್ಧವಾಗಿದೆ. ಬಳಿಕ ಬಂದ ವಿದ್ವಾಂಸರೆಲ್ಲರೂ ಉಲ್ಲೇಖಿಸಿದ ಈ ಎರಡು ಪದ್ಯಗಳು ಮೌರಿದುಸ್ವಾದೀ ಗ್ರಂಥದ ಗೆರೆಗಳಾಗಿವೆ. (ಪುಟ: 76,83-84)
ಅಲ್ಲಫ್ಲುರ್ರಾಯಿಖ್
ಅಲ್ಲಫ್ಲುರ್ರಾಯಿಖ್ ಫೀ ಮೌಲಿದಿ ಖೈರಿಲ್ ಖಲಾಇಖ್ (ಸ) ಎಂಬುದಾಗಿದೆ ಗ್ರಂಥದ ಪೂರ್ಣ ನಾಮ. ಇಮಾಮ್ ನಾಸಿರುದ್ದೀನ್ ಅದ್ದಿಮಶ್ಖೀ (ರ) ರವರೇ ಈ ಗ್ರಂಥದ ಕರ್ತೃ. ಒಟ್ಟಿನಲ್ಲಿ ಮಹಾನರಿಗೆ ಮೌಲಿದ್ ಸಂಬಂಧಿತ ಮೂರು ಗ್ರಂಥಗಳಿದೆಯೆಂದು ಇಮಾಂ ಅಲ್ ಖೈಳರೀ (ರ) 'ಅಲ್ಲು ಮಉಲ್ ಅಲ್ ಮಇಯ್ಯ'ದಲ್ಲಿ ಹಾಗೂ ಇಮಾಂ ಸಖಾವೀ (ರ) ಅಲ್ಲೌಉಲ್ಲಾಮಿಅದಲ್ಲಿ ( 8/103) ರಲ್ಲಿ ದೃಢಪಡಿಸಿದ್ದಾರೆ.









Comments