ಮೂಳೆಗಳು ಕೋಳಿಯಾದ ಕಥೆ
- Shahul Hameed Mueeni Al Adany

- Sep 28
- 1 min read

ಜೀಲಾನಿ ಶೈಖರ ಜೀವನ ಪಾಠ-04
ಕೋಝೀಡೆ ಮುಳ್ಳೋಡು
ಕೂಗೆನ್ನ್ ಚೊನ್ನಾರೆ
ಕೂಷಾದೆ ಕೂಕಿ
ಪರಪ್ಪಿಚ್ಚು ಬಿಟ್ಟೋವರ್
ಒಮ್ಮೆ ಒಂದು ತಾಯಿ ಮತ್ತು ಮಗ ಮುಹ್ಯುದ್ದೀನ್ ಶೈಖರ ಬಳಿಗೆ ಬಂದು, ತನ್ನ ಮಗನಿಗೆ ಶೈಖರ ಮೇಲೆ ಅಪಾರ ಪ್ರೀತಿಯಿದೆಯೆಂದೂ, ತನ್ನ ಇಚ್ಛೆಗಳನ್ನು ತ್ಯಜಿಸಿ ಆ ಮಗನನ್ನು ಅಲ್ಲಾಹನ ದಾರಿಯಲ್ಲಿ ಶೈಖರ ಬಳಿ ಒಪ್ಪಿಸುವುದಾಗಿಯೂ ಹೇಳಿದರು.
ಶೈಖರು ಆ ಮಗನನ್ನು ಸ್ವೀಕರಿಸಿ, ಸಂತ-ಸಜ್ಜನರ ದಾರಿಯಲ್ಲಿ, ನೀತಿಯುತವಾಗಿ ಬೆಳೆಯಲು ಮಾರ್ಗದರ್ಶನ ನೀಡಿದರು. ಕೆಲವು ಕಾಲಗಳ ಬಳಿಕ ಆ ತಾಯಿ ತನ್ನ ಮಗನನ್ನು ನೋಡುವ ಸಲುವಾಗಿ ಶೈಖರ ಸನ್ನಿಧಿಗೆ ಬಂದಾಗ, ಆ ಮಗ ಹಸಿವಿನಿಂದ, ನಿದ್ರಾಹೀನತೆಯಿಂದ ತುಂಬಾ ಬಳಲಿದಂತೆ ಕಾಣುತ್ತಿದ್ದ. ತಾಯಿ ಮಗನನ್ನು ನೋಡುವಾಗ ಆತ ಬತ್ತದ ಹಿಟ್ಟಿನಿಂದ ತಯಾರಿಸಿದ ರೊಟ್ಟಿಯನ್ನು ತಿನ್ನುತ್ತಿದ್ದ. ಇದನ್ನು ನೋಡಿದ ತಾಯಿಗೆ ತುಂಬಾ ದುಃಖವಾಯಿತು.
ಅವರು ನೇರವಾಗಿ ಶೈಖರ ಬಳಿಗೆ ತೆರಳಿದಾಗ, ಶೈಖರು ಬೇಯಿಸಿದ ಕೋಳಿಯ ಮೂಳೆಗಳಿದ್ದ ತಟ್ಟೆಯನ್ನು ಮಂದಿಟ್ಟು ಕುಳಿತಿದ್ದರು. ತಾಯಿ ವಿಷಾದದಿಂದ“ಗುರುವರ್ಯರೆ, ನೀವು ಕೋಳಿ ಮಾಂಸ ಸೇವಿಸುತ್ತಿದ್ದೀರಿ, ಆದರೆ ನನ್ನ ಮಗ ಬತ್ತದ ರೊಟ್ಟಿಯನ್ನೇ ತಿನ್ನುತ್ತಿದ್ದಾನೆ!.”ಎಂದಾಗ, ಶೈಖರು ಏನೂ ಉತ್ತರಿಸದೇ, ಆ ಮೂಳೆಗಳ ಮೇಲೆ ಕೈಯ್ಯನಿಟ್ಟು ಹೀಗೆ ಹೇಳಿದರು: “ನಶಿಸಿಹೋದ ಮೂಳೆಗಳಿಗೆ ಜೀವ ನೀಡುವ ಅಲ್ಲಾಹನ ಆಜ್ಞೆಯೊಂದಿಗೆ ಎದ್ದೇಳು.”ತಕ್ಷಣ ಆ ಕೋಳಿ ಜೀವಂತವಾಗಿ ಎದ್ದು, ಕೂಗುತ್ತಾ ಹೊರಟು ಹೋಯಿತು. ತದನಂತರ ಶೈಖರು ಆ ತಾಯಿಯತ್ತ ತಿರುಗಿ“ನಿಮ್ಮ ಮಗನೂ ಈ ಸ್ಥಾನಕ್ಕೆ ತಲುಪಿದಾಗ , ಅವನಿಗೂ ಇಷ್ಟವಿದ್ದ ಮೃಷ್ಟಾನ್ನ ಆಹಾರ ಸೇವಿಸಬಹುದು.”ಎಂದು ಸಮಾಧಾನ ಹೇಳಿದರು.
(ಹಯಾತುಲ್ ಹೈವಾನ್ ಅಲ್ ಕುಬ್ರಾ/ಅಲ್ ದಮಿರಿ)
ಶೈಖರ ಬರಕತ್ತಿನಿಂದ ಅಲ್ಲಾಹನು ನಮ್ಮ ಅಂತ್ಯವನ್ನು ಉತ್ತಮವಾಗಿಸಲಿ. ಆಮೀನ್.
-ಮುಂದುವರಿಯುವುದು…
ಮೂಲ: ಅಬೂಬಕ್ಕರ್ ಅಹ್ಸನಿ ಪರಪ್ಪೂರ್
(ಮುದರ್ರಿಸ್, ಮಅದಿನ್ ಅಕಾಡೆಮಿ)
ಕನ್ನಡಕ್ಕೆ: ಶಾಹುಲ್ ಹಮೀದ್ ಮುಈನಿ ಅಲ್- ಅದನಿ






Comments