ಖಬ್ರಿನಲ್ಲಿದ್ದ ಗುರುವಿಗೆ ನೆರವು
- Shahul Hameed Mueeni Al Adany

- Sep 30
- 1 min read

ಜೀಲಾನಿ ಶೈಖರ ಜೀವನ ಪಾಠ-06
ಖಬರಕತ್ತುಸ್ತಾದೆ
ಕುರವಾಕಿ ಕಂಡಾರೆ
ಖಬರುಂಗಲ್ ನಿನ್ನತು
ನೀಕಿಚ್ಚು ವೆಚ್ಚೋವರ್..
ಹಿಜರಿ 499ನೇ ಶಅಬಾನ್ 15ರ ಶುಕ್ರವಾರ.
ಮಹಾನರಾದ ಮುಹ್ಯಿದ್ದೀನ್ ಶೈಖರು ತಮ್ಮ ಉಸ್ತಾದರಾದ ಹಮ್ಮಾದ್ ದಬ್ಬಾಸ್ ಮತ್ತು ಕೆಲವು ಅನುಯಾಯಿಗಳೊಂದಿಗೆ ಪ್ರಯಾಣಕ್ಕೆ ಹೊರಟರು. ರೂಸಾಫ ಮಸೀದಿಯಲ್ಲಿ ಜುಮುಅ ನಮಾಜು ನಿರ್ವಹಿಸುವುದಾಗಿತ್ತು ಪ್ರಯಾಣದ ಮುಖ್ಯಗುರಿ. ಪ್ರಯಾಣದ ಮಧ್ಯೆ ಒಂದು ಸೇತುವೆಯ ಮೇಲೆ ಸಂಚರಿಸುವಾಗ ಉಸ್ತಾದರು ಶೈಖರನ್ನು ನದಿಗೆ ತಳ್ಳಿದರು. ನದಿಗೆ ಬಿದ್ದ ತಕ್ಷಣ ಶೈಖರು ಜುಮುಅ ಸ್ನಾನದ ಸುನ್ನತನ್ನು ಸಂಕಲ್ಪಿಸಿಕೊಂಡರು. ಹೇರಳವಾಗಿ ಚಳಿಯಿದ್ದುದರಿಂದ ಶೈಖರು ತುಪ್ಪಳದ ಜುಬ್ಬಾವನ್ನು ಧರಿಸಿದ್ದರು. ಜೊತೆಗೆ ಶೈಖರ ಕೈಯಲ್ಲಿ ಕೆಲವು ಟಿಪ್ಪಣಿಗಳೂ ಇದ್ದುದರಿಂದ, ಅವು ನೆನೆಯಬಾರದೆಂದು ಕೈ ಮೇಲಕ್ಕೆತ್ತಿ ಹಿಡಿದರು.
ಶೈಖರನ್ನು ನದಿಯಲ್ಲಿ ಬಿಟ್ಟು ಆ ತಂಡವು ಮುಂದೆ ಸಾಗಿತು. ತುಸು ಹೊತ್ತಿನ ಬಳಿಕ ಶೈಖರು ದಡಕ್ಕೆ ಬಂದು, ತಮ್ಮ ಜುಬ್ಬಾವನ್ನು ತೆಗೆದು ಹಿಂಡಿದರು. ತೀವ್ರವಾದ ಚಳಿಯ ಕಷ್ಟ ಶೈಖರಲ್ಲಿ ಗೋಚರವಾಗುತ್ತಿತ್ತು. ಏನನ್ನೂ ಲೆಕ್ಕಿಸದೆ ಶೈಖರು ಆ ಗುಂಪನ್ನು ಹಿಂಬಾಲಿಸತೊಡಗಿದರು. ಗುಂಪಿನಲ್ಲಿದ್ದ ಕೆಲವರು ಶೈಖರ ಬಗ್ಗೆ ಉಸ್ತಾದರೊಂದಿಗೆ ದೂರು ನೀಡಲು ಯತ್ನಿಸಿದರು. ಅದಕ್ಕೆ ಉಸ್ತಾದರು:“ನಾನು ಅವನನ್ನು ತಳ್ಳಿದ್ದು ಪರೀಕ್ಷೆ ಮಾಡಲು. ಖಂಡಿತ, ಆತ ಪರ್ವತದಂತೆ ದೃಢವಾಗಿದ್ದು ಪರೀಕ್ಷೆಯಲ್ಲಿ ಸಫಲನಾಗಿದ್ದಾನೆ." ಎಂದರು.
ಹಿಜರಿ 529ನೇ ದುಲ್-ಹಿಜ್ಜ 27ರ ಬುಧವಾರ. ಆ ಹೊತ್ತಿಗಾಗಲೇ ಉಸ್ತಾದರು ನಿಧನರಾಗಿದ್ದರು. ಶೈಖರು ಖಬರಸ್ಥಾನಕ್ಕೆ ಭೇಟಿ ನೀಡಲು ಹೊರಟರು. ಅನೇಕ ವಿದ್ವಾಂಸರೂ ಮತ್ತು ಸೂಫಿ ಶ್ರೇಷ್ಠರೂ ಜೊತೆಗಿದ್ದರು. ಉಸ್ತಾದ್ ಹಮ್ಮಾದ್ ದಬ್ಬಾಸ್ ಅವರ ಸಮಾಧಿಯ ಬಳಿಗೆ ಬಂದು, ಕೆಲಹೊತ್ತು ಅಲ್ಲೇ ನಿಂತರು. ಹಿಂಭಾಗದಲ್ಲಿ ಉಳಿದವರೂ ನೆರೆದಿದ್ದರು. ಸಂತೋಷದಿಂದ ಶೈಖರು ಹಿಂತಿರುಗಿದಾಗ ಜನರಿಗೆ ಆಶ್ಚರ್ಯವಾಯಿತು. ಉಸ್ತಾದರ ಬಳಿ ಹೆಚ್ಚು ಸಮಯ ನಿಲ್ಲಲಿರುವ ಕಾರಣದ ಕುರಿತಾಗಿ ಅನ್ವೇಷಿಸಿದರು.
ಆಗ ಶೈಖರು ಉಸ್ತಾದರು ತಮ್ಮನ್ನು ನದಿಗೆ ತಳ್ಳಿದ ಘಟನೆಯನ್ನು ಹೇಳಿದ ಬಳಿಕ ಹೀಗೆಂದರು:“ನಾನು ಈಗ ಉಸ್ತಾದರನ್ನು ಮುತ್ತಿನ ವಸ್ತ್ರ ಧರಿಸಿದ ಸ್ಥಿತಿಯಲ್ಲಿ ಕಂಡೆ. ತಲೆಯ ಮೇಲೆ ಮಾಣಿಕ್ಯ ಕಿರೀಟವಿತ್ತು. ಕೈಗಳಲ್ಲಿ ಚಿನ್ನದ ಬಳೆಗಳಿದ್ದವು. ಕಾಲಿನಲ್ಲಿ ಎರಡು ಚಿನ್ನದ ಚಪ್ಪಲಿಗಳಿದ್ದವು. ಆದರೆ, ಉಸ್ತಾದರ ಬಲಗೈಗೆ ತೀರಾ ಶಕ್ತಿಯಿರಲಿಲ್ಲ. ಅದರ ಬಗ್ಗೆ ಕೇಳಿದಾಗ, ಅಂದು ಉಸ್ತಾದರು ನನ್ನನ್ನು ನೀರಿಗೆ ತಳ್ಳಿದ್ದು ಇದೇ ಕೈಯ್ಯಿಂದ ಎಂದೂ, ನಿನಗೆ ನಾನು ಕ್ಷಮೆ ನೀಡಿಲ್ಲವೇ? ಎಂದೂ ಉಸ್ತಾದರು ಹೇಳಿದರು. ನಾನದನ್ನು ಉಸ್ತಾದರಿಗೆ ಮನ್ನಿಸಿದ್ದೇನೆಂದು ತಿಳಿಸಿದಾಗ, ತಮ್ಮ ಕೈಗೆ ಶಕ್ತಿ ಬರಲು ಅಲ್ಲಾಹನಲ್ಲಿ ಪ್ರಾರ್ಥಿಸಬೇಕಾಗಿ ಉಸ್ತಾದರು ಕೇಳಿಕೊಂಡರು. ಹಾಗೆಯೇ ನಾನು ಪ್ರಾರ್ಥಿಸಿದಾಗ ಐದು ಸಾವಿರ ಔಲಿಯಾಗಳು ತಮ್ಮ ಸಮಾಧಿಗಳಲ್ಲಿ ನನ್ನ ಪ್ರಾರ್ಥನೆಗೆ ಆಮೀನ್ ಹೇಳಿದರು. ಅಲ್ಲದೇ ನನ್ನ ಪ್ರಾರ್ಥನೆ ಸ್ವೀಕರಿಸಲು ಅವರೆಲ್ಲರೂ ಶಿಫಾರಸ್ಸು ಮಾಡಿದರು. ತರುವಾಯ, ತಕ್ಷಣ ಅಲ್ಲಾಹನು ಉಸ್ತಾದರ ಕೈಗೆ ಶಕ್ತಿಯನ್ನು ಮರಳಿ ನೀಡಿದನು. ಪೂರ್ಣ ಸಂತುಷ್ಟರಾಗಿ ಉಸ್ತಾದರು ನನ್ನನ್ನು ಅದೇ ಕೈಯಿಂದ ಹಸ್ತಲಾಘವ ಮಾಡಿದರು.”
(ಮೂಲ: ಬಹ್ಜತುಲ್ ಅಸ್ರಾರ್)
-ಮುಂದುವರಿಯುವುದು…






Comments